25 ಜುಲೈ, 2011

ಲೋಕಾಯುಕ್ತ ಸಂತೋಷ ಹೆಗಡೆ ಬಿಜೆಪಿ,ಕಾಂಗ್ರೆಸ್,ಜೆಡಿಎಸ್ ಬೆಕ್ಕುಗಳ ಕೊರಳಿಗೆ ಗಂಟೆ ಕಟ್ಟಿಯಾರೇ....?

ಇದು ಕರ್ನಾಟಕದ ಜನತೆಯ ದುರಂತವೋ ಅಥವಾ ಮೇಯಲು ಕೂತವರ ಕೊನೆ ಗಳಿಗೆಯ ದುರದೃಷ್ಟವೋ...   ಒಟ್ಟಾರೇ ಸರಕಾರ, ಕಾನೂನು, ಆಯೋಗ, ಪೋಲೀಸ್, ವಾರೆಂಟ್, ಗಣಿ ಅಧಿಕಾರಿ ಚೆಕ್ ಪೋಸ್ಟಗಳಿಂದ ತಪ್ಪಿಸಿಕೊಂಡು ದೇಶ ವಿದೇಶಕ್ಕೆ ಆಕ್ರಮವಾಗಿ ಮಣ್ಣು ಮಾರಿದ  ಭಾರೀ ತಿಮಿಂಗಿಲಗಳು, ದೊಡ್ಡ ಮೀನುಗಳು ಈಗ ಲೋಕಾಯುಕ್ತರ ವರದಿಯಲ್ಲಿ ಆರೋಪಿಗಳಾಗಿದ್ದಾರೆ ಎಂಬ ಅಂಶ ವರದಿ ಸೋರಿಕೆಯ ವಿವರಗಳಿಂದ ತಿಳಿದುಬಂದಿದೆ. ಆದರೆ ವರದಿಯ ಸೋರಿಕೆಯಿಂದ ಆ ವರದಿಯ ಪಾವಿತ್ರ್ಯ ಹಾಳಾಗಿದೆ ಎಂಬುದು ಬಿಜೆಪಿ ಆರೋಪವಾದರೆ, ಟೆಲಿಫೋನ್ ಕದ್ದಾಲಿಕೆ ಮೂಲಕ ಬಿಜೆಪಿ ತಪ್ಪು ಮಾಡಿದೆ ಎಂದು ಕಾಂಗ್ರೆಸ್ ಹೋರಾಟ ಆರಂಭಿಸಿದೆ. ಜೆಡಿಎಸ್ ಯಡಿಯೂರಪ್ಪ ರಾಜೀನಾಮೆ ನೀಡಬೇಕು ಅನ್ನುತ್ತಲೇ ಕುಮಾರಸ್ವಾಮಿ ನನ್ನ ತಪ್ಪಿದ್ದರೆ ತನಿಖೆಗೆ ಸಹಕಾರ ನೀಡುತ್ತೇನೆ ಎನ್ನುತ್ತಾರೆ.
ಒಟ್ಟಾರೆ ಎಲ್ಲಾ ಪಕ್ಷಗಳ ಮುಖಂಡರು ಗಣಿ ಹಗರಣದ ಬಾವಿಯಲ್ಲಿ ಬಿದ್ದಿದ್ದಾರೆ. ಹಾಗಾಗಿ ಈಗ ಕೆಲ ಪಕ್ಷಗಳು ಗಣಿ ವರದಿಗಿಂತ ಹೆಚ್ಚಾಗಿ ದೂರವಾಣಿ ಕದ್ದಾಲಿಕೆ ಬಗ್ಗೆ ಮಾತನಾಡುತ್ತಿವೆ. ಈ ರಾಜಕೀಯ ಪಕ್ಷಗಳ ಕಣ್ಣು ಮುಚ್ಚಿ ಹಾಲು ಕುಡಿಯುವ ಬೆಕ್ಕುಗಳಿಗೆ ಸಂತೋಷ ಹೆಗಡೆಯವರ ವರದಿ ಗಂಟೆ ಕಟ್ಟೀತೆ ಎನ್ನುವುದು ಯಕ್ಷ ಪ್ರಶ್ನೆ..?
ಇಂದಿನ ಪರಿಸ್ಥಿಯಲ್ಲಿ ಮಾಧ್ಯಮಗಳು ಕೂಡಾ ಅತಿ ವೇಗವಾಗಿ ಸುದ್ದಿ ಕೊಡುವ ನಿಟ್ಟಿನಲ್ಲಿ ಲೋಕಾಯುಕ್ತ ವರದಿಯನ್ನು ಪ್ರಕಟಣೆ ಮಾಡುವ ಮೂಲಕ ಅದರ ಗಾಂಭೀರ್ಯತೆಯನ್ನು ಕೂಡಾ ಕಡಿಮೆ ಮಾಡುವುದರ ಜೊತೆಗೆ ಲೋಕಾಯುಕ್ತರು ವರದಿ ಸಲ್ಲಿಸುವ ಹೊತ್ತಿಗೆ ಗಣಿ ವಿಷಯದ ತೀವ್ರತೆ ಕಡಿಮೆಯಾಗುವಂತೆ ನೋಡಿಕೊಳ್ಳುತ್ತಿದ್ದಾರೆ. 
ಗಣಿ ವರದಿಯಲ್ಲಿ ಪ್ರಸ್ತಾಪಿಸಲಾದ ಎಲ್ಲಾ ನಾಯಕರುಗಳು ಕೂಡಾ ನಾನೇನು ತಪ್ಪು ಮಾಡಿಲ್ಲ ವರದಿ ಬಂದ ನಂತರ ಪ್ರತಿಕ್ರಿಯೆ ನೀಡುತ್ತೇನೆ ಎನ್ನುತ್ತಿದ್ದಾರೆ. ಇದೆಲ್ಲದರ ನಡುವೆ ಕರ್ನಾಟಕ ಕಂಡ ಗೌರವಾನ್ವಿತ ಮುಖ್ಯಮಂತ್ರಿ ಯಡಿಯೂರಪ್ಪ ನಾನೇನು ತಪ್ಪು ಮಾಡಿಲ್ಲ , ನಾನು ಅಧಿಕಾರಕ್ಕೆ ಬಂದ ಮೇಲೆ ಯಾವುದೇ ಗಣಿಗಾರಿಕೆಗೆ ಪರವಾನಿಗೆ ನೀಡಿಲ್ಲ ಎನ್ನುತ್ತಿದ್ದಾರೆ.
ಕರ್ನಾಟಕದ ಜನತೆಗೆ ಉಪ್ಪು ತಿಂದವರು ನೀರು ಕುಡಿಯುತ್ತಾರೆ ಎನ್ನುವ ಮನೋಭಾವ ಉಳ್ಳವರು ಹಾಗಾಗಿ ಸುಮ್ಮನಿದ್ದಾರೆ. ಆದರೆ ಯಾವ ಪಕ್ಷದ ರಾಜಕಾರಿಣಿಗಳಿಗೂ (ಕೆಲ ನಾಯಕರನ್ನು ಹೊರತು ಪಡಿಸಿ) ಗಣಿ ವರದಿ ಅನುಷ್ಠಾನವಾಗುವುದು ಬೇಕಿಲ್ಲ. ಎಲ್ಲರ ಕೈಗಳೂ ಗಣಿಯ ಕೆಂಪು ಧೂಳಿನಲ್ಲೂ ಹೂತು ಹೋಗಿವೆ. ಕಳ್ಳನ ಕೈಯಲ್ಲೂ ಬೀಗ ಕೊಟ್ಟರೂ ರಾಜ್ಯ ಚೆನ್ನಾಗಿರುತ್ತೆ ಆದರೆ ರಾಜಕಾರಿಣಿಗಳ ಕೈಯಲ್ಲಿ ಇರೋದಿಲ್ಲ ವೆಂದು ಸಾರ್ವಜನಿಕರು  ಮಾತನಾಡಿಕೊಳ್ಳುವಂತಾಗಿದೆ.
30 ಸಲ ಕೋರ್ಟ ವಾರೆಂಟ್ ಕಳುಹಿಸಿದರೂ ನ್ಯಾಯಾಲಯಕ್ಕೆ ಹಾಜರಾಗದ ಮಂತ್ರಿಗಳು, ಮುತ್ತಿಕ್ಕಿ ಫೋಟೋ ತೆಗೆಸಿಕೊಳ್ಳುವ ಮಂತ್ರಿಗಳೀಗ ಅಮಲಿನ ಮಂತ್ರಿಗಳಾಗಿದ್ದಾರೆ. ಲಕ್ಷಕ್ಕೆ ಮೆಡಿಕಲ್ ಕಾಲೇಜಿನ ಸೀಟು ಮಾರಿದ ಮಂತ್ರಿಗಳಿದ್ದಾರೆ. ಕಾನೂನನ್ನೇ ಗಾಳಿಗೆ ತೂರಿ ಭೂಗಳ್ಳತನ, ಆಕ್ರಮ ಗಣಿಗಾರಿಕೆ , ಲಂಚ, ಸ್ವಜನ ಪಕ್ಷಪಾತ, ಇಂತಹ ಗುರುತರ ಆರೋಪ ಹೊತ್ತಿರುವ ಮಂತ್ರಿಗಳಿಂದ ರಾಜ್ಯದ ಜನತೆಗೆ ನ್ಯಾಯ ಸಿಕ್ಕೀತೆ...? 
ಕರ್ನಾಟಕದ ಅದೃಷ್ಟವೋ ಅಥವಾ ಭ್ರಷ್ಟರ ನಿಗ್ರಹಕ್ಕೆ ದೇವರೇ ಕಳುಹಿಸಿದ ವರವೋ ನ್ಯಾಯಮೂರ್ತಿ ಸಂತೋಷ ಹೆಗಡೆ ಎಂಬ ಬೆಳಕು ಕರ್ನಾಟಕಕ್ಕೆ ಹೊಸದಾರಿ ತೋರಿಸುತ್ತಿದೆ. ನಾಡು ಕಂಡ ಗಣ್ಯಾತಿಗಣ್ಯ ನಾಯಕರು, ಹಣದ ಸೊಕ್ಕಿನಲ್ಲಿ ಮೆರೆದವರು, ಬಲದ ಗರ್ವದಿಂದ ಉರಿದವರು, ಪಕ್ಷಗಳ ರಕ್ಷಣೆಯಲಿ ಉಳಿದವರು ಪರಪ್ಪನ ಅಗ್ರಹಾರ ಸೇರಬಹುದೇ...?
ಲೋಕಾಯುಕ್ತರಂತೂ ಒಂದು ಮಾತನ್ನಂತೂ ಈಗಾಗಲೇ ಹೇಳಿದ್ದಾರೆ, "ಕರ್ನಾಟಕ ಸರ್ಕಾರ ಈ ವರದಿಯನ್ನು ಆಧರಿಸಿ ಕ್ರಮ ಕೈಗೊಳ್ಳಲಿ ಬಿಡಲಿ ಈ ವರದಿಯಿಂದ ಸುಪ್ರೀಂಕೋರ್ಟನಲ್ಲಿ ನ್ಯಾಯ ಸಿಗುವ ವಿಶ್ವಾಸ ವ್ಯಕ್ತ ಪಡಿಸಿದ್ದಾರೆ.
ಇಂತಹ ಅಪರೂಪದ ನ್ಯಾಯಮೂರ್ತಿಗಳು, ಯು.ವಿ.ಸಿಂಗ್, ಗೋಕುಲ್, ಶೆಟ್ಟಿ ರಂತಹ ಅಧಿಕಾರಿಗಳು ಇರುವುದರಿಂದ ಭಾರತ ಮತ್ತು ಕರ್ನಾಟಕ ಮಾತೆ ಉಸಿರಾಡುತ್ತಿದ್ದಾಳೆ ... ಅಲ್ಲವೇ.....?
                                            
                                                          ಪತ್ರೇಶ್ ಹಿರೇಮಠ್