07 ಡಿಸೆಂಬರ್, 2011

ಬಳ್ಳಾರಿ ಫಲಿತಾಂಶ:ಕರ್ನಾಟಕ ಕಾಂಗ್ರೆಸ್ ಬದಲಾದೀತೇ?

       ಕಾಂಗ್ರೆಸ್ ಗೆ ಕರ್ನಾಟಕ ಕಬ್ಬಿಣದ ಕಡಲೆಯಾಗುತ್ತಿದೆ. ನಾನೊಬ್ಬ ಯುವ ಕಾಂಗ್ರೆಸ್ ಕಾರ್ಯಕರ್ತನಾಗಿ ಹೇಳುವ ಮಾತು. ಬಿಜೆಪಿ ಮತ್ತು ರಾಮುಲು ನಡುವಿನ ಒಳಜಗಳದಲ್ಲಿ ಬಳ್ಳಾರಿಯಲ್ಲಿ ಕಾಂಗ್ರೆಸ್ ಗೆಲ್ಲಬಹುದು ಎಂದು ಇಡೀ ರಾಜ್ಯವೇ ನಿರೀಕ್ಷಿಸಿತ್ತು. ಕಾಂಗ್ರೆಸ್ ನ ಘಟಾನುಘಟಿ ನಾಯಕರೆಲ್ಲಾ ಪ್ರಚಾರ ನಡೆಸಿದರೂ ಕಾಂಗ್ರೆಸ್ ಹಿಂದಿನ ವಿದಾನಸಭಾ ಚುನಾವಣೆಗಿಂತ ಕಡಿಮೆ ಮತಗಳಿಸಿ ಅವಮಾನ ಅನುಭವಿಸಿತು. 

ಮತದಾನ ಎರಡು ಮೂರು ದಿನ ಬಾಕಿ ಇರುವವರೆಗೂ ಅಬ್ಬರದ ವೀರಾವೇಶದ ಪ್ರಚಾರ ನಡೆಸುವ ಕಾಂಗ್ರೆಸ್ ನಾಯಕರು ಮತದಾನ ಹತ್ತಿರವಾದಂತೆ ಬರೀ ತಮ್ಮ ಮಾತುಗಳು, ಆಶ್ವಾಸನೆಗಳನ್ನು ನೀಡುತ್ತಾ ಕ್ಷೇತ್ರ ಬಿಟ್ಟು ತೆರಳುತ್ತಾರೆ. ಯುದ್ಧಕ್ಕೆ ಅಗತ್ಯವಿರುವ ಶಸ್ತ್ರಾಸ್ತ್ರ ಒದಗಿಸದೇ ತಪ್ಪಿಸಿಕೊಳ್ಳುತ್ತಾರೆ ಎಂಬ ಆಪಾದನೆ ಕಾಂಗ್ರೆಸ್ ನಾಯಕರ ಮೇಲಿದೆ. ಚುನಾವಣೆಗೆ ಬಂದು ಪ್ರಚಾರ ಮಾಡುವ ನಾಯಕರು ಕೊನೆಯ ದಿನದ ಕತ್ತಲ ರಾತ್ರಿಯ ಬಗ್ಗೆ ಆಲೋಚಿಸವುದಿಲ್ಲ ಎಂಬುದು ಬಹು ಸಂಖ್ಯಾತ ಕಾಂಗ್ರೆಸ್ ಕಾರ್ಯಕರ್ತರ ಕೊರಗು.ರಾಜ್ಯ ಕಾಂಗ್ರೆಸ್ ನ ಒಬ್ಬ ನಾಯಕರು ಜವಾಬ್ದಾರಿ ಹೊರಲು ತಯಾರಿಲ್ಲ.. ಮುಖ್ಯಮಂತ್ರಿ ಅಭ್ಯರ್ಥಿ ಯಾರು ಎಂದು ಕಾಂಗ್ರೆಸ್ ಹೈಕಮಾಂಡ್ ಸೂಚಿಸಲಿ ಆಗ ನೋಡಿ ಚುನಾವಣೆ ಜವಾಬ್ದಾರಿಯ ಪರಿಸ್ಥಿತಿಯೇ ಬದಲಾಗುತ್ತದೆ. ಮುಖ್ಯಮಂತ್ರಿ ಅಭ್ಯರ್ಥಿಯಾದವರು ಇಡೀ ವ್ಯವಸ್ಥೆಯ ನಿರ್ವಹಣೆ ಮಾಡುತ್ತಾರೆ. ಅಭ್ಯರ್ಥಿಯ ಆಯ್ಕೆಯಿಂದ ಹಿಡಿದು ಜವಾಬ್ದಾರಿ ನೀಡುವವರೆಗೆ ಕಾಂಗ್ರೆಸ್ ನ ವಿಳಂಬ ನೀತಿ ಕಾಂಗ್ರೆಸ್ ಸೋಲಲು ಕಾರಣವಾಗುತ್ತಿದೆ.
 
ಅಭ್ಯರ್ಥಿಯನ್ನು ಎಲ್ಲೋ ಕುಳಿತು ನೇಮಕಗೊಳಿಸುವುದು, ಗೆಲ್ಲುವ ಅಭ್ಯರ್ಥಿಯನ್ನು ಸಾಮಾಜಿಕ ನ್ಯಾಯದ ಕಾರಣಗಳಿಗಾಗಿ ಹಿಂದೆ ಸರಿಸಿ ಬೇರೊಬ್ಬರಿಗೆ ಅವಕಾಶ ನೀಡುವುದು ಕೂಡಾ ಕಾಂಗ್ರೆಸ್ ನಲ್ಲಿ ಕ್ರಿಯಾಶೀಲ ನಾಯಕರು ಸಂಘಟನೆಯಿಂದ ಹಿಂದೆ ಸರಿಯುವ ವಾತಾವರಣ ನಿರ್ಮಾಣವಾಗಿದೆ.ಹಿಂದಿನ ಕಾಂಗ್ರೆಸ್ ತನ್ನದೇ ಆದ ಮತ ಬ್ಯಾಂಕ್ ಹೊಂದಿತ್ತು. ಅಂದಿನ ಕಾಂಗ್ರೆಸ್ ನ ಸಾಂಪ್ರದಾಯಿಕ ಮತಗಳು ಇಂದಿನ ಹಣದ ಮೆರವಣಿಗೆಯಲ್ಲಿ ಎತ್ತಲೋ ಸಾಗುತ್ತಿವೆ.

ಚುನಾವಣೆಯಲ್ಲಿ ಮಾತ್ರ ಕ್ಷೇತ್ರಗಳಿಗೆ ಆಗಮಿಸಿ ಮತ್ತೆ ತಿರುಗಿ ಜಿಲ್ಲೆ ಮತ್ತು ಜನರತ್ತ ನೋಡದ ನಾಯಕರ ಸಂಖ್ಯೆಯೂ ಕಾಂಗ್ರೆಸ್ ನಲ್ಲಿ ಹೆಚ್ಚಾಗುತ್ತಿದೆ.ಚುನಾವಣೆಯಲ್ಲಿ ಭಯಂಕರ ಭಾಷಣ ಮಾಡುವ ನಾಯಕರು ಮತ್ತೆ ಜಿಲ್ಲೆಗೆ ಬರುವುದು ಮತ್ತೆ ಚುನಾವಣೆ ಬಂದಾಗಲೇ ಎಂಬುದು ಗಮನಾರ್ಹ. ಹಣಬಲವುಳ್ಳ ನಾಯಕರು ದೆಹಲಿ ಮಟ್ಟದಲ್ಲಿ ಉತ್ತಮ ಸಂಪರ್ಕಗಳ ಮೂಲಕ ಉನ್ನತ ಹುದ್ದೆ ಪಡೆಯುವ ಮೂಲಕ ಬಲಿಷ್ಠರಾಗುತ್ತಿದ್ದಾರೆ. ಇತ್ತ ಜಿಲ್ಲೆ ಮತ್ತು ಕ್ಷೇತ್ರ ಮಟ್ಟದಲ್ಲಿ ಕಾರ್ಯಕರ್ತರೊಂದಿಗೆ ನಿರಂತರ ಸಂಪರ್ಕವಿಟ್ಟುಕೊಂಡು, ಕಾರ್ಯಕರ್ತರ ಕಷ್ಟ ಸುಖಗಳಿಗೆ ಸ್ಪಂದಿಸುತ್ತಲೇ ಅವರು ಜಿಲ್ಲೆಯನ್ನು ದಾಟದೇ ಕಾಂಗ್ರೆಸ್ ನ ವೀಕ್ಷಕರೆಂಬ ಬಿಳಿಯಾನೆಗಳಿಗೆ ತಲುಪುವುದಿಲ್ಲ. ವೀಕ್ಷಕರೆಂಬ ಬಿಳಿಯಾನೆಗಳು ಪಕ್ಷಕ್ಕೆ ತಳಮಟ್ಟದಲ್ಲಿ ಸಂಘಟಿಸಲು ಶ್ರಮಿಸುವ ಇಂತವರು ಹೈಕಮಾಂಡ್ ಬಳಿಯೂ ಸುಳಿಯುವುದಿಲ್ಲ.

ಹೈಕಮಾಂಡ್ ನ ಸುತ್ತಲೂ ಇರುವ ನಾಯಕರ ಕೃಪಾ ಕಟಾಕ್ಷ ಹೊಂದಿರುವ ಸ್ವಯಂ ಘೋಷಿತ ನಾಯಕರು, ಸುಖಾ ಸುಮ್ಮನೆ ಶ್ರೀ ಮತಿ ಸೋನಿಯಾ ಗಾಂಧಿಯವರನ್ನು ಮತ್ತು ರಾಹುಲ್ ಗಾಂದಿಯವರನ್ನು ಹೊಗಳಿ ಉನ್ನತ ಸ್ಥಾನಕ್ಕೇರುವವರ ಸಂಖ್ಯೆ ಹೆಚ್ಚಾಗುತ್ತಿದೆ.

ಇನ್ನು ಮುಂದಾದರೂ ಕರ್ನಾಟಕ ಕಾಂಗ್ರೆಸ್ ಸಂಘಟಿಸುವ ಯುವಕರಿಗೆ ಪ್ರೋತ್ಸಾಹ ನೀಡುವ ಜೊತೆಗೆ, ಸಾಮಾಜಿಕ ನ್ಯಾಯವೆಂಬ ಒಳ್ಳೆಯ ಸಿದ್ಧಾಂತದಡಿ ಕ್ರಿಯಾಶೀಲ  ನಾಯಕರನ್ನು ಹಿಂದೆ ಸರಿಸದೇ, ಚತುರ ಹಾಗೂ ಜನರ ನಡುವೆ ಬೆರೆಯುವ ಕ್ರಿಯಾಶೀಲ ನಾಯಕರಿಗೆ ಆದ್ಯತೆ ನೀಡಬೇಕಿದೆ. ಜನರ ನಡುವಿರುವ ಜನನಾಯಕರಿಗೆ ಚುನಾವಣೆ ಜವಾಬ್ದಾರಿ ನೀಡಬೇಕಿದೆ.
ಬಳ್ಳಾರಿ ಚುನಾವಣೆ ಫಲಿತಾಂಶ ಇನ್ನು ಮುಂದಾದರೂ ಕಾಂಗ್ರೆಸ್ ಪಥ ಬದಲಿಸಿ.. ಹೊಸ ಹಾದಿ ಹಿಡಿಯಬಹುದೇ..?
                                                   ಪತ್ರೇಶ್ ಹಿರೇಮಠ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ