10 ಜೂನ್, 2012

ಶ್ರೀರಾಮನಂತಾಗಬೇಕು..? ಪತ್ರೇಶ್ ಹಿರೇಮಠ ಬರೆದ ಕವನ

ನಾನು ಶ್ರೀರಾಮನಂತೆ
ಆದರ್ಶವಾದಿಯಾಗಬೇಕೆನ್ನುತ್ತೇನೆ...?

ಹೇಗೋ ಆದರ್ಶದ ಬೆನ್ನು ಹಿಡಿದು
ಬಸ್ಸು ಹತ್ತಿ
ಪ್ರೇಯಸಿಯ ಮಗ್ಗಲು ಕುಳಿತು
ಲಲ್ಲು ಹೊಡೆಯುವಾಗ
ನಿತ್ರಾಣ ಅಜ್ಜಿ  ಪಕ್ಕ ನಿಂತು ಸುಸ್ತಾಗುವುದು ಕಾಣುತ್ತದೆ..?
ಏಳುವಂತಿಲ್ಲ, ಕೂರುವಂತಿಲ್ಲ,
ರಾಮಾದರ್ಶ ಬಸ್ಸಿನ ಚಕ್ರದಲ್ಲಿ
ಸಿಲುಕಿ ಧೂಳಡರುತ್ತದೆ....?

ನಾನು ಶ್ರೀರಾಮನಂತೆ
ಏಕಪತ್ನೀವ್ರತಸ್ಥನಾಗಬೇಕೆನ್ನುತ್ತೇನೆ...?

ವ್ರತದ ಧ್ಯಾನಕ್ಕೆ ಭಂಗಕರಾಗಿ
ಪಕ್ಕ ಹಾಯುವ ಚೂಡಿ,ಮಿಡಿ,ಅತ್ತರು ನನ್ನ ತಾಕಿ
ನನ್ನೊಂದಿಗೆ ಸಂಘರ್ಷಕ್ಕಿಳಿದು
ಕಾಮ ಭುಗಿಲ್ಲೆನ್ನುತ್ತದೆ..
ಇಲ್ಲಿ ರಾಮ ಆಸ್ತಿತ್ವಹೀನನಾಗುತ್ತಾನೆ..?

ನಾನು ಶ್ರೀರಾಮನಂತೆ
ನಿಷ್ಠಾವಂತ, ಸತ್ಯದುರಂಧರನಾಗಬೇಕೆನ್ನುತ್ತೇನೆ...?

ಆದರೆ ನನ್ನವಳ ದುಬಾರಿ ಶಾಪಿಂಗ್ , ಬಂಗಾರ, ತೆಳು ನೈಟಿ,
ಫ್ರಿಡ್ಜು, ಮಿಕ್ಸಿ,ಸ್ಕೂಟಿ,ಕಾರುಗಳ ಆಶೆಯಲ್ಲಿ
ರಾಮನ ನಿಷ್ಠೆ ನೆಲದಲ್ಲಿ ಹೂತುಹೋಗಿ
ಕೈ ತಂತಾನೇ ಟೇಬಲ್ ಕೆಳಗೆ ಹೋಗುತ್ತದೆ...?

ಯಾಂತ್ರಿಕ ಜಗತ್ತು
ಐಷಾರಾಮಿ ಬದುಕು
ನೀರಸವಾದಾಗ
ನಾನು ಶ್ರೀರಾಮನಾಗುವ ಬಯಕೆ...?
ಈಡೇರತ್ತುದೇನೋ
ಎಂದು ಕಾದಿದ್ದೇನೆ...?

                                 ಪತ್ರೇಶ್ ಹಿರೇಮಠ್