25 ಏಪ್ರಿಲ್, 2020

ಕಾಂಗ್ರೆಸ್‍ನ ಸತ್ಯದ ಕಹಿಯೂ.. ಬಿಜೆಪಿಯ ಕನಸುಗಳ ಮಾರಾಟಗಾರರ ಆಕóರ್ಷಣೆಯೂ..?

 ಭಾರತದಲ್ಲಿ ಮಾತಾಡುವ ಮೂಲಕ, ಮಾತನ್ನೇ ಬಂಡವಾಳವಾಗಿಸಿಕೊಂಡು, ಸುಳ್ಳುಗಳನ್ನೇ ಮಾತಾಗಿಸಿ, ವದಂತಿಗಳನ್ನು ಸತ್ಯವಾಗಿಸಿ, ಸತ್ಯಗಳನ್ನು ಸುಳ್ಳಿನ ಅಡಿಯಾಳಾಗಿಸಿ, ಸುಳ್ಳುಗಳ ಆಕಾಶ ಗೋಪುರ ಕಟ್ಟಿ, ದೇಶದ ಜನತೆಯನ್ನು ಆ ಗೋಪುರ ಹತ್ತಿಸಿದ್ದೇವೆ ಎನ್ನುವ ಭ್ರಮೆಯಲ್ಲಿರಿಸಿ ಅಧಿಕಾರಕ್ಕೆ ಯಾರಾದರೂ ಬಂದಿದ್ದರೆ ಅದು ಭಾರತೀಯ ಜನತಾ ಪಕ್ಷ ಮತ್ತು ಅದಕ್ಕೆ ಕಾರಣರಾದವರು ಬಿಜೆಪಿಯ ಮಾತಿನ ಮಲ್ಲರು ಜೊತೆಜೊತೆಗೆ ಬಿಜೆಪಿಯ ವಿವಿಧ ಅಂಗ ಸಂಸ್ಥೆಗಳ ಭಕ್ತಮಂಡಳಿ.

ಭಾರತೀಯ ಜನತಾ ಪಕ್ಷ ಅಧಿಕಾರಕ್ಕೆ ಬರಲು ಅತಿ ಹೆಚ್ಚು ನೆಚ್ಚಿದ್ದು ಮಾತುಗಾರರನ್ನು ಅದರಲ್ಲೂ ಹಿಪ್ನಾಟಿಸಂ ಶೈಲಿಯ ಮಾತಿನ ಮಲ್ಲರನ್ನು. ಓದಿಕೊಂಡಿರುವ ಜೊತೆಗೆ ಓದಿಕೊಂಡಿದ್ದನ್ನು ಆಯಾ ಸಂದರ್ಭಕ್ಕೆ ತಕ್ಕಂತೆ ತಿರುಚುವ ಮಾತಿರುಮಣಿಗಳನ್ನು ಹುಡುಕಿ ಮಾತಾಡಿಸಲು ಶುರು ಹಚ್ಚಿದ ಬಿಜೆಪಿ ಸೀದಾ ಜನರ ಮನದೊಳಗೆ ಆಕ್ರೋಶ ಹುಟ್ಟಿಸುವ ಕಾಂಗ್ರೆಸ್ ರಾಜಕೀಯ ನಾಯಕರ ಸಿರಿವಂತಿಕೆ ಕೋಮುವಾದ, ವಂಶಪಾರಂಪರ್ಯ ರಾಜಕಾರಣವನ್ನು ಜನರ ಮನದೊಳಗೆ ತುಂಬಿ ಒಂದು ಪಕ್ಷದ ಬಗ್ಗೆ ರೇಜಿಗೆ ತುಂಬುವ ಕೆಲಸವನ್ನು ವ್ಯವಸ್ಥಿತವಾಗಿ ಮಾತು ಹಾಗೂ ಬರವಣಿಗೆ ಮೂಲಕ ಮಾಡಿದರು.

ಕರ್ನಾಟಕದ ವಿಷಯಕ್ಕೆ ಬರುವುದಾದರೆ ಮಾಜಿ ಸಚಿವ ದಿ. ಬಿ ವಿ ಆಚಾರ್ಯ, ಸಚಿವರಾದ ಸುರೇಶಕುಮಾರ್, ಸಿಟಿ ರವಿ, ಸಂಸದೆ ಶೋಭಾ ಕರಂದ್ಲಾಜೆ, ಶಾಸಕರಾದ ಅರವಿಂದ ಲಿಂಬಾವಳಿ ಸುನಿಲ್ ಕುಮಾರ್ ಮಾಜಿ ವಿಧಾನ ಪರಿಷತ್ ಸದಸ್ಯ ಗೋ ಮಧುಸೂಧನ, ರವಿಕುಮಾರ್, ವಾಮನಾಚಾರ್ಯ, ಚಕ್ರವರ್ತಿ ಸೂಲಿಬೆಲೆ ಮಾಧ್ಯಮಗಳಲ್ಲಿ ವಿವಿಧ ಸಭೆ ಸಮಾರಂಭಗಳಲ್ಲಿ ಮಾಡಿದ್ದು ಇದನ್ನೇ.

ಉತ್ತರ ಪ್ರದೇಶದ ಅಯೋಧ್ಯೆಯ ರಾಮಮಂದಿರದಿಂದ ಹಿಡಿದು ಚಿಕ್ಕಮಗಳೂರಿನ ಬಾಬಾಬುಡನಗಿರಿಯ ದತ್ತಪೀಠದವರೆಗೆ ಮಾತಾಡಿ ಮಾತಾಡಿಯೇ ಇವರೆಲ್ಲಾ ಶಾಸಕರಾದರು ಸಚಿವರಾದರು. ವಿಶೇಷವೆಂದರೆ ಈ ನಾಯಕರ ಮಾತುಗಳು ಇಂದಿಗೂ ನಿಂತಿಲ್ಲ. ಬೆಂಕಿಯ ಕೆನ್ನಾಲಿಗೆ ಇವರ ನಾಲಿಗೆ ದಾಟಿ ಹೊರಹೋಗಿಲ್ಲ. ಮಾತಿನ ಬೆಲೆ ಕಾಂಗ್ರೆಸ್‍ಗಿಂತ ಬಿಜೆಪಿಗೆ ಹೆಚ್ಚು ಗೊತ್ತಿದೆ. ಹಾಗಾಗಿ ಅವರು ಇನ್ನು ಮಾತಾಡುತ್ತಲೇ ಇದ್ದಾರೆ.. !

ಕಾಂಗ್ರೆಸ್ ಪಕ್ಷ ಸ್ವಾತಂತ್ರ ಚಳುವಳಿಯಲ್ಲಿ ಪ್ರಖರ ಮಾತಿನ ಶಕ್ತಿಯುಳ್ಳ ನಾಯಕರನ್ನು ಹೊಂದಿದ್ದು ಬಿಟ್ಟರೆ ಇತ್ತೀಚೆಗೆ ಇಂತಹ ತೀಕ್ಷಣ ಮಾತಿನ ಛಾತಿಯುಳ್ಳ ನಾಯಕರನ್ನು ಮೇಲೆತ್ತುವ ಪ್ರಯತ್ನ ಮಾಡಲಿಲ್ಲ. ದೇಶದಲ್ಲಿ ಮಾತಿನ ಮೂಲಕವೇ ಬಿಜೆಪಿ ಮಾತುಗಾರನ ಬಂಡವಾಳ ಬಯಲಿಗೆಳೆಯುವ ಮೂಲಕ ಕಾಂಗ್ರೆಸ್ ಮರುಕಟ್ಟುವ ಸನ್ನಿವೇಶ ಸೃಷ್ಟಿಯಾಗಿದೆ. ಬಿಜೆಪಿ ನಾಯಕರ ಸುಳ್ಳುಗಳನ್ನು ಮಾಧ್ಯಮಗಳಲ್ಲಿ ಸೊಗಸಾಗಿ ಬಿಂಬಿಸುವವರ ಕೊರತೆ ಇಡೀ ದೇಶದಲ್ಲಿ ಕಾಣುತ್ತಿದೆ. ಮಾಧ್ಯಮಗಳು ಬಿಜೆಪಿ ಪರವಾಗಿವೆ ಎನ್ನುವ ಆರೋಪಕ್ಕಿಂತ ಬಿಜೆಪಿಯ ವೈಫಲ್ಯವನ್ನು ಪರಿಣಾಮಕಾರಿಯಾಗಿ ಹೇಳುವ ನಾಯಕರ ಕೊರತೆ ಕಾಂಗ್ರೆಸ್ ಪಕ್ಷವನ್ನು ಕಾಡುತ್ತಿದೆ. ಪರಿಣಾಮಕಾರಿಯಾಗಿ ಸಂಸದೀಯಭಾಷೆಯ ನೇರದಾಳಿ ಹಾಗೂ ದಾಖಲೆಗಳ ಮೂಲಕ ಮಾಧ್ಯಮಗಳ ಮುಂದೆ ಕಾಂಗ್ರೆಸ್ ನಾಯಕರು ತೆರಳಬೇಕಿದೆ. ಕೇವಲ ಪ್ರಧಾನಿ ಮೋದಿಯನ್ನು ಟೀಕಿಸುವುದು, ಕೋಮುವಾದದ ಬಗ್ಗೆ ಮಾತಾಡುವುದು ಬಿಟ್ಟು ಮೋದಿಯವರ ಆಡಳಿತ ವೈಫಲ್ಯವನ್ನು ಎತ್ತಿ ಹಿಡಿಯುವಲ್ಲಿ ಕಾಂಗ್ರೆಸ್ ಎಡವಿದೆ.

ಕರ್ನಾಟಕದ ಮಟ್ಟಿಗೆ ಹೇಳುವುದಾದರೆ ಮಾಜಿ ಸಂಸದರಾದÀ ವಿ ಎಸ್ ಉಗ್ರಪ್ಪ, ಬಿ ಎಲ್ ಶಂಕರ್, ಸಂಸದ ಎಲ್ ಹನುಮಂತಯ್ಯ, ಫ್ರೊ.ರಾಜೀವಗೌಡ್, ಮಾಜಿ ಸಚಿವ ಕೃಷ್ಣ ಭೈರೇಗೌಡ, ಮಾಜಿ ವಿಧಾನ ಪರಿಷತ್ ಸದಸ್ಯ ವಿ ಆರ್ ಸುದರ್ಶನ್, ಸಿ ಎಂ ಇಬ್ರಾಹಿಂ, ಕೆ ದಿವಾಕರ್, ನಾಗರಾಜ ಯಾದವ್, ರಾಣಿ ಸತೀಶ್, ಮುರಳೀಧರ ಹಾಲಪ್ಪ ಸೇರಿದಂತೆ ಯುವ ಪೀಳಿಗೆಯ ವಿಧಾನ ಪರಿಷತ್ ಸದಸ್ಯ ರಿಜ್ವಾನ್ ಅರ್ಷದ್, ಎ ಎನ್ ನಟರಾಜಗೌಡ, ಮಂಜುನಾಥ್ ಅದ್ದೆ, ಸೂರ್ಯಮುಕುಂದರಾಜ್, ಲಾವಣ್ಯ ಬಲ್ಲಾಳ್, ಮಂಚನಹಳ್ಳಿ ಐಶ್ವರ್ಯ ಮಹದೇವ್‍ರಂತಹ ಪರಿಣಾಮಕಾರಿಯಾಗಿ ಅಧಿಕೃತವಾಗಿ ಭಾಷೆಯ ಮೇಲೆ ಹಿಡಿತವುಳ್ಳ ಕೆಲವೇ ಕೆಲವು ನಾಯಕರು ಸೊಗಸಾಗಿ ಮಾತನಾಡುವವರಿದ್ದಾರೆ. ಆದರೆ ಅವರಿಗೆ ಪ್ರಮುಖ ಆಯಕಟ್ಟಿನ ಹುದ್ದೆಗಳೇ ದೊರಕುವುದಿಲ್ಲ. ಅವರು ಮಾತಾಡುತ್ತಲೇ ಇದ್ದಾರೆ ಅಧಿಕಾರ ಬೇರೆಯವರಿಗೆ ದೊರಕುತ್ತದೆ. ಸಂಕಷ್ಟದ ಸಮಯದಲ್ಲಿ ಪಕ್ಷವನ್ನು ಸಮರ್ಥಿಸಿಕೊಳ್ಳಲು ಇಂತಹ ನಾಯಕರು ಬೇಕು. ಅಧಿಕಾರವಿದ್ದಾಗ ಇವರ ಬುದ್ಧಿವಂತಿಕೆ ಪಾಂಡಿತ್ಯ ಜ್ಷಾನಕ್ಕೆ ಬೆಲೆ ಬರುವುದಿಲ್ಲ.

ಕನಸುಗಳನ್ನು ಮಾರಾಟ ಮಾಡುತ್ತಲೇ ಸುಳ್ಳಿನ ಸಾಮ್ರಾಜ್ಯ ವಿಸ್ತರಿಸುತ್ತಿರುವ ಬಿಜೆಪಿಗೆ ತಡೆಯೊಡ್ಡಲು ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೊಗಸಾದ ಮಾತುಗಾರರ ಅವಶ್ಯಕತೆ ಹಿಂದೆಂದಿಗಿಂತಲೂ ಹೆಚ್ಚು ಅವಶ್ಯಕತೆ ಇದೆ. ಕರ್ನಾಟಕದಲ್ಲಿ ಬಿಜೆಪಿಯ ಬಗ್ಗೆ ಹೇಳಲು ಸಾವಿರ ವೈಫಲ್ಯಗಳಿವೆ. ಕೇಳಲು ಕರ್ನಾಟಕದ ಜನತೆ ಕಾಯುತ್ತಿದೆ, ಸೊಗಸಾಗಿ ಹೇಳುವ ಬಾಯಿಗಳನ್ನು ಕಾಂಗ್ರೆಸ್ ಬಳಸಿಕೊಂಡು ಬಿಜೆಪಿ ವಿರುದ್ಧದ ಅಲೆಯನ್ನು ಮೆಟ್ಟಿಲಾಗಿಸಿ ಅಧಿಕಾರಕ್ಕೆ ಹತ್ತಿರಾಗಲು ಸುಸಮಯ.

ಕರ್ನಾಟಕ ಕಾಂಗ್ರೆಸ್ ಮಾಧ್ಯಮ ಮತ್ತು ಸಂವಹನ ವಿಭಾಗಕ್ಕೆ ಮಾಜಿ ಸಂಸದ ವಿ ಎಸ್ ಉಗ್ರಪ್ಪ ಅಧ್ಯಕ್ಷರಾಗಿದ್ದು ಚುರುಕಿನ ಗ್ರಹಣ ಶಕ್ತಿಯ, ಓದು ಮತ್ತು ಬರವಣಿಗೆ ಬಲ್ಲ, ವಾಕ್ಚಾತುರ್ಯವುಳ್ಳ ಯುವಕರನ್ನು ವಕ್ತಾರರಾಗಿ, ಪ್ಯಾನೆಲಿಸ್ಟ್‍ಗಳಾಗಿ ನೇಮಿಸಿದ್ದಾರೆ. ಸಾಮಾಜಿಕ ಜಾಲತಾಣ ಮತ್ತು ಬರಹಗಳಲ್ಲಿ ಕ್ರಿಯಾಶೀಲನಾಗಿದ್ದ ನಾನು ಕೂಡಾ ಹೊಸದಾಗಿ ನೇಮಕಗೊಂಡಿದ್ದೇನೆ.

ಕಾಂಗ್ರೆಸ್ ಮಾತಿನ ಶಕ್ತಿಯನ್ನು, ಮಾತಿನ ತೀಕ್ಷಣತೆಯನ್ನು ಅರ್ಥ ಮಾಡಿಕೊಳ್ಳದೇ ಹೋದರೇ ‘’ಒಂದು ಸುಳ್ಳನ್ನು ನೂರುಬಾರಿ ಹೇಳಿದರೆ ಸತ್ಯವಾಗುತ್ತೆ’’ ಎನ್ನುವ ಹಿಟ್ಲರ್‍ನ ಆಸ್ಥಾನ ಮಂತ್ರಿ ಗೊಬೆಲ್ಸ್ ನೀತಿ ಅನುಸರಿಸಿ ಬಿಜೆಪಿ ಮತ್ತೆ ಸಾಮ್ರಾಜ್ಯ ವಿಸ್ತರಿಸಿದರೂ ಅಚ್ಚರಿಯಿಲ್ಲ. ಕಾಂಗ್ರೆಸ್ ಅಧ್ಯಕ್ಚ ಡಿಕೆ ಶಿವಕುಮಾರ್ ದಿನೇಶ್ ಗುಂಡೂರಾವ್, ವಿಪಕ್ಷ ನಾಯಕ ಸಿದ್ಧರಾಮಯ್ಯ, ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ಜಿ ಪರಮೇಶ್ವರ್, ಸೇರಿದಂತೆ ಎಲ್ಲಾ ನಾಯಕರು ಮಾಧ್ಯಮ ಮತ್ತು ಜನರನ್ನು ಎದುರಿಸುವ ವಕ್ತಾರರ ತಂಡವನ್ನು ಸಜ್ಜುಗೊಳಿಸಲು ಯೋಚಿಸಬೇಕಿದೆ.
ಪತ್ರೇಶ್ ಹಿರೇಮಠ್
 ವಕ್ತಾರರು 
ಕೆಪಿಸಿಸಿ ಬೆಂಗಳೂರು
9844338881

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ