ಗಣಿಗಾರಿಕೆಯಿಂದ ಅಗಣಿತ ಅರಣ್ಯ ಸಂಪತ್ತು ಕರಗಿ ಹೋಗಿರುವ ಸಂಡೂರಿನಲ್ಲಿ ಈಗ ಮೌನ. ``ಕುಂಬಾರನಿಗೆ ವರುಷ ದೊಣ್ಣೆಗೆ ನಿಮಿಷ" ಎಂಬ ಗಾದೆ ಬಳ್ಳಾರಿಯ ಸದ್ಯದ ಸ್ಥಿತಿಗೆ ಅನ್ವರ್ಥ ಅನ್ನಿಸುತ್ತದೆ ಅಲ್ವಾ? ಅದರಲ್ಲೂ ಕಳೆದ ದಶಕಗಳಿಂದ ನಡೆದ ಗಣಿಗಾರಿಕೆಯ ಭರಾಟೆಯಿಂದ ಬಳ್ಳಾರಿ ತರಗುಟ್ಟಿ ಹೋಯಿತು. ಆದರೆ ಈಗ ಕೊಂಚ ನಿರಾಳ!! ನಿಟ್ಟುಸಿರು!!. ಈಗ ಇಲ್ಲಿಯ ಚರಿತ್ರೆಯಲ್ಲಿ ಗಣಿಗಾರಿಕೆಗೆ ಜಾಗವಿಲ್ಲ. ಗಣಿಗಾರಿಕೆ ಮತ್ತು ಅದಿರು ಹೊತ್ತ ಲಾರಿಗಳು ಅಪ್ಪಿ-ತಪ್ಪಿಯೂ ಕಣ್ಣಿಗೆ ಬೀಳುವುದಿಲ್ಲ. ಗಣಿ ಬಾವಿಗಳೆಲ್ಲಾ ಧಣಿವು ಆರಿಸಿಕೊಳ್ಳುತ್ತಿವೆ. ಗಣಿಗಾರಿಕೆಯಲ್ಲಿ ಸಕ್ರೀಯವಾಗಿದ್ದ ಮಾನವ ಹಾಗೂ ಮಿಷನರಿ ಸಂಪನ್ಮೂಲಗಳೆಲ್ಲಾ ಜಡಭರಿತವಾಗಿ ಹೋಗಿವೆ. ಒಂದು ಕಾಲದಲ್ಲಿ ಘರ್ಜಿಸುತ್ತಿದ್ದ ಇವರೆಲ್ಲಾ ಈಗ ಮಕಾಡೆ ಮಲಗಿದ್ದಾರೆ. ಈಗ ಯಾರಾ ಭಯವಿಲ್ಲದೆ ನಿರಾತಂಕವಾಗಿ ಗಣಿಗಾರಿಕೆ ಕರಾಳ ರೂಪವನ್ನು ನೋಡುವ ಸೌಭಾಗ್ಯ!!. ಗಣಿಗಾರಿಕೆ ನಡೆದ ಸ್ಥಳಗಳನ್ನು ನೋಡುತ್ತಾ ಸಾಗಿದಂತೆಲ್ಲಾ ಮನಸ್ಸು ಮರಗುತ್ತಾ ಹೋಗುತ್ತದೆ. ಬಯಲು ಸೀಮೆಯ ಮಲೆನಾಡನ್ನು ಕೆಲವೇ ವರ್ಷಗಳಲ್ಲಿ ಬಟಾ ಬಯಲು ಮಾಡಿದ ಈ ಅಕ್ರಮ ಸಕ್ರಮ ಗಣಿಗಾರಿಕೆ ಭೂತಕ್ಕೆ ಬಲಿಯಾದದ್ದು ಮಾತ್ರ ಶತಮಾನಗಳ ಪಾಕೃತಿಕ ಸಂಪತ್ತು.
ಸರ್ಕಾರದ ಅದಿರು ರಫ್ತು ನಿಷೇಧ, ಸಿ.ಇ.ಸಿ ಹಾಗೂ ಜಂಟಿ ಗಣಿ ಸರ್ವೆ ತಂಡಗಳ, ಲೋಕಾಯುಕ್ತರ ನಿರಂತರ ಕಾರ್ಯಚರಣೆ, ಪರಿಸರ ವಾದಿಗಳ ಅಚಲ ಹೊರಾಟ, ಹಸಿರು ಪೀಠದ ಕಟ್ಟಾಜ್ಞೆ, ಇವೆಲ್ಲಾದರ ಪರಿಣಾಮ ಸಂಡೂರಿನ ಗಣಿಗಾರಿಕೆಯ ಸದ್ದು ಅಡಗಿಸಿದೆ. ನೀವು ನಂಬಲ್ಲ. ಒಂದು ಕಾಲದಲ್ಲಿ ಮುಗಿಲು ಚುಂಬಿಸಲು ತವಕಿಸುತ್ತಿದ್ದ ಬೆಟ್ಟಗಳು ಈಗ ಕರಗಿ ಹೋಗಿವೆ. ಸಮತಟ್ಟಾದ ಜಾಗಗಳೆಲ್ಲಾ ಅದಿರಿನ ರಾಶಿಯಾಗಿವೆ. ಗಣಿಧಣಿಗಳ ಪೈಶಾಚಿಕ ಕೃತ್ಯಕ್ಕೆ ಹಸಿರ ನಾಡೆಲ್ಲಾ ಬರಡಾಗಿದೆ. ಭೂಮಿಯನ್ನು ಅನೇಕ ಪದರು-ಪದರುಗಳನ್ನಾಗಿ ಮಾಡಿ ಪಾತಳದವರೆಗೂ ಅದಿರನ್ನು ತೆಗೆಯುವ ಪ್ರಯತ್ನ ಇದುವರೆಗೆ ನಿರಾಂತಕವಾಗಿ ಸಾಗಿದ್ದನ್ನು ಈಗ ನೋಡಿಯೇ ಅನುಭವಕ್ಕೆ ತಂದುಕೊಳ್ಳಬೇಕು. ಹೊರಗಿನವರು ಸಂಡೂರಿಗೆ ಬಂದರೆ ಗರಬಡಿದು ಹೋಗುವುದರಲ್ಲಿ ಅನುಮಾನವೇ ಇಲ್ಲ. ಇಲ್ಲಿಯ ಪ್ರಭಾವಿ ವ್ಯಕ್ತಿಗಳು ತಮ್ಮ ಅತಿ ಆಸೆಗೆ ರೆಕ್ಕೆ ಪುಕ್ಕ ಕಟ್ಟಿ ಕಾನೂನಿನ ಕಣ್ಣಿಗೆ ಮಣ್ಣೆರಚಿ ಹಣ ಬಾಚುವುದಕ್ಕೆ ಅರಣ್ಯವನ್ನೇ ಸರ್ವನಾಶ ಮಾಡಿರುವುದು ಯಾವ ನ್ಯಾಯ? ಇಲ್ಲಿನ ಸಂಪತ್ತನ್ನು ಕೇವಲ ಲಾಭದ ದೃಷ್ಠಿಯಿಂದ ನೋಡಿದ ಗಣಿಧಣಿಗಳು ಪ್ರತಿಯಾಗಿ ಪ್ರಕೃತಿಯ ಲಾಲನೆಗಾಗಿ ಕೈಗೊಂಡ ಕ್ರಮಗಳು ಮಾತ್ರ ಶೂನ್ಯ. ಒಂದು ಕಾಲದಲ್ಲಿ ಬಿ.ಪಿ.ಎಲ್ ಕಾರ್ಡ್ ಹೊಂದಿದ್ದ ಅನೇಕರು ಗಣಿಕಾರಿಕೆ ಮಾಡಿ ಲಕ್ಷ್ಮೀ ಪುತ್ರರಾಗಿ ಹೋಗಿದ್ದಾರೆ. ಆದರೆ ಗಣಿಗಾರಿಕೆಯ ಸುತ್ತಾ-ಮುತ್ತಾ ವಾಸಿಸುವ ಜನರ ಬದುಕು ಇನ್ನೂ ಭರ್ಭರ. ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಪಾಳೆಗಾರಿಕೆ, ನಿರಂಕುಶತ್ವವನ್ನು ಒಪ್ಪಿಕೊಳ್ಳಬೇಕಾದ ಅನಿವಾರ್ಯತೆ ಇವರದ್ದು. ಇಲ್ಲಿಯವರು ಗಣಿಧಣಿಗಳ ಕಪಿಮುಷ್ಠಿಯಲ್ಲಿ ಸಿಕ್ಕಿ ಹಾಕಿಕೊಂಡು ಅವರ ಶೋಷಣೆಗೆ ನಲುಗಿ ಹೋಗಿದ್ದಾರೆ. ಇವರ ಕೂಗು ಈ ಗಣಿಯ ಮಣ್ಣಲ್ಲಿ ಮಣ್ಣಾಗಿ ಹೋಗುತ್ತಿರುವುದು ದೊಡ್ಡ ದುರಂತವೇ ಸರಿ. ಅಂದಹಾಗೆ ಇವರೇನು ಬಿಕಾರಿಗಳಲ್ಲ. ಚಿನ್ನದಷ್ಟೆ ಬೆಲೆ ಬಾಳುವ ಭೂಮಿಯ ಒಡೆಯರಾಗಿದ್ದರೂ ಒಪ್ಪತ್ತು ಊಟಕ್ಕೆ ಪರಿತಪಿಸಬೇಕಾದ ಸಂದ್ಗಿತೆ. ಈ ಅಮಾಯಕರಿಗೆ ಐದಾರು ಸಾವಿರ ರೂ ನೀಡಿ ಆಸೆಗಳನ್ನು ಮೂಗಿಗೆ ಸವರಿ ಇವರ ಬದುಕನ್ನೇ ಸರ್ವನಾಶ ಮಾಡಿದ್ದಾರೆ ಈ ಗಣಿ ಧಣಿಗಳು. ರಾತ್ರಿ ಕಳೆದು ಬೆಳಗಾಗುವುದರೊಳೆಗೆ ಈ ರೈತರ ಜಮೀನು ಮತ್ಯಾರದ್ದೋ ಆಗಲಿದೆ.!! ರೈತರು, ಅಬಲರು ಇಲ್ಲಿ ಗಣಿಧಣಿಗಳ ಮುಂದೆ ದುರ್ಬಲರಾಗುತ್ತಾರೆ. ಇವರ ದಬ್ಬಾಳಿಕೆ ದ್ವನಿ ಎತ್ತದೆ ಮೂಕರಂತೆ ನೋವುಂಡು ತಮ್ಮನ್ನೇ ತಾವು ಸಾಂತ್ವಾನ ಮಾಡಿಕೊಳ್ಳುತ್ತಾರೆ. ಇಲ್ಲಿನ ಅನೇಕ ರೈತರ ಸಾವಿರಾರು ಎಕರೆಗಳು ಈ ಅಕ್ರಮ ಗಣಿಗಾರಿಕೆಯ ಪಾಲಾಗಿರುವುದು ಅಕ್ಷರಸಃ ಸತ್ಯ. ಇದಕ್ಕೆ ಗಣಿಗಾರಿಕೆಯಿಂದ ದ್ವೀಪವಾದ ``ಕಮತ್ತೂರು" ಒಂದು ಜ್ವಲಂತ ಉದಾಹರಣೆ. ಇಲ್ಲಿಯ ಪ್ರತಿಯೊಬ್ಬರದ್ದೂ ಒಂದೊಂದು ಕಥೆ - ವ್ಯಥೆ ಇದೆ. ಮನಸ್ಸು ದುಖ ದುಮ್ಮಾನಗಳಿಂದ ಮಡುಗಟ್ಟಿದೆ. ಮಾತನಾಡಿಸಿದರೆ ಸಾಕು ಇವರ ಸಹನೆಯ ಕಟ್ಟೆ ಹೊಡೆಯುತ್ತದೆ. ಭಾರ ತುಂಬಿದ ಮಾತುಗಳು ಅಪ್ಪಳಿಸುತ್ತವೆ. ಆಕ್ರೋಶ ಆಕ್ರಂಧನ ಮುಗಿಲು ಮುಟ್ಟುತ್ತದೆ. ಅಳುವುದಕ್ಕೂ ಇವರ ಕಂಗಳಲ್ಲಿ ಕಣ್ಣಿರು ಇಲ್ಲ. ಯಾಕೆಂದರೆ ಕಣ್ಣಿರೆಲ್ಲಾ ಬತ್ತಿ ಹೋಗಿವೆ. ಇಲ್ಲಿಯವರು ಮೂಲಭೂತ ಸೌಕರ್ಯ ವಂಚಿತವಾಗಿದ್ದು ಇವರ ಬದುಕು ಬೆಂಗಾಡಾಗಿದೆ. ಇಲ್ಲಿ ಎಲ್ಲವೂ ಆಯೋಮಯ. ಇಂತಹ ಹತ್ತಾರು ಜ್ವಲಂತ ಉದಾಹರಣೆ ಈ ಗಣಿಗಾರಿಕೆ ಸುತ್ತಾ-ಮುತ್ತಾ ನಡೆದಾಡಿದರೆ ಕಣ್ಣಿಗೆ ಬೀಳುತ್ತವೆ.
ಇದಿಷ್ಟು ಒಂದಡೆಯಾದರೆ ಮೊತ್ತೊಂದಡೆ ಅದಗೆಟ್ಟ, ಕಡಿದಾದ, ದುರ್ಗಮ ರಸ್ತೆಗಳು ಪ್ರಯಾಣಿಕರನ್ನು ಪರದಾಡುವಂತೆ ಮಾಡುತ್ತವೆ. ಮನಸ್ಸು ಮಾಡಿದ್ದರೆ ಗಣಿ ಕಂಪನಿಗಳು ಈ ರಸ್ತೆಗಳನ್ನು ರಹದಾರಿಗಳನ್ನಾಗಿ ಮಾಡಬಹುದಿತ್ತು. ಆದರೆ ಗಣಿಧಣಿಗಳ ಇಚ್ಚಾಶಕ್ತಿಯ ಕೊರತೆ ಹಾಗೂ ಸ್ವಾರ್ಥದ ಸೆಲೆಯಲ್ಲಿ ಇದು ನಗಣ್ಯವಾಗಿದ್ದು ದೊಡ್ಡ ದುರಂತ. ಫಲವಾಗಿ ಇಂದಿಗೂ ಗಣಿಗಾರಿಕೆ, ಅದರು ಸಾಗಾಣಿಕೆ ಮಾಡುತ್ತಿದ್ದ ರಸ್ತೆಗಳು ಮೃತ್ಯು ಕೂಪಗಳಾಗಿವೆ. ಅಳವಾದ ಗುಂಡಿಗಳಲ್ಲಿ ರಸ್ತೆಗಳನ್ನು ಹುಡುಕಬೇಕಾದ ವ್ಯರ್ಥ ಪ್ರಯತ್ನ ಮಾಡಬೇಕಾಗಿದೆ. ಗಣಿಗಾರಿಕೆಗೆ ಅಂಕೆ ಬಿದ್ದಿದ್ದರಿಂದ ಕೊಂಚ ನಿರಾಳ ನಿಟ್ಟುಸಿರು ಬಿಡಬಹುದಾಗಿದೆ. ಜೊತೆ-ಜೊತೆಗೆ ಜರ್ಜಿರತವಾಗಿದ್ದ ಇಲ್ಲಿನ ಪ್ರಕೃತಿ ಮಾತೆ ಮೆಲ್ಲಗೆ ಮೈದಳೆಯುತ್ತಿದ್ದಾಳೆ. ಸಂಡೂರಿನ ಸುತ್ತಾ-ಮುತ್ತಾ ಹೊಸ ಮನ್ವಂತರ ಶ್ರಾವಣ ಮಾಸದ ಪ್ರಾರಂಭದೊಂದಿಗೆ ಶುರುವಾಗಿದೆ.
ಯಾವಗಾಲೂ ಮೋಡ ಕವಿದ ವಾತಾವರಣ, ಜೊತೆಗೆ ಕೂಲ್ ಕೂಲ್ ಹವಾಮಾನ. ಬೀಸುವ ತಂಗಾಳಿ, ತುಂತುರು ಮಳೆ, ಸೂರ್ಯನ ನೆರಳು-ಬೆಳಕಿನ ಆಟ, ತನ್ನ ಮೂಲ ರೂಪಕ್ಕೆ ಬರುತ್ತಿರುವ ಇಲ್ಲಿನ ಸಸ್ಸ ಸಂಕುಲ,ಪಕ್ಷಿಗಳ ಇಂಚರ, ಕೋತಿಗಳ ಚಿನ್ನಾಟ, ನವಿಲುಗಳ ನಾಟ್ಯ ಮನಸ್ಸಿಗೆ ಮುದ ನೀಡುತ್ತದೆ. ಸ್ಟಾಕ್ ಯಾರ್ಡ್ ಗಳಾಗಿದ್ದ ಬೇಸಾಯದ ಭೂವಿಗಳೆಲ್ಲಾ ಮತ್ತೇ ಬೆಳೆಗಳಿಂದ ನಳನಳಿಸುತ್ತಿವೆ. ನೇಗಿಲ ಯೋಗಿ ಹೊಲಗಳಲ್ಲಿ ಉಳುಮೆ ಮಾಡುತ್ತಿದ್ದಾನೆ. ಸ್ವಚ್ಚಂದ ಪರಿಸರಕ್ಕೆ ಇಲ್ಲಿಯವರು ಮೈ ತೆರೆದುಕೊಳ್ಳುತ್ತಿದ್ದಾರೆ. ವಾಕಿಂಗ್ ನ ಸುಖ ಅನುಭವಿಸುತ್ತಿದ್ದಾರೆ. ಕಪಾಟು ಸೇರಿದ್ದ ಬಿಳಿ ಬಟ್ಟೆಗಳೆಲ್ಲಾ ಮೈ ಮೇಲೆ ಕಾಣುತ್ತಿವೆ. ಕೆಮ್ಮು ದಮ್ಮು ನಿಧಾನವಾಗಿ ದೂರವಾಗುತ್ತಿದೆ. ರಸ್ತೆಯ ತುಂಬೆಲ್ಲಾ ಅದಿರು ಲಾರಿಗಳು ಅವರಿಸಿಕೊಳ್ಳುತ್ತಿದ್ದ ಕ್ಷಣಗಳು ಮಾಯವಾಗಿ ದನ-ಕರುಗಳು ಅಡ್ಡಾದಿಡ್ಡಿ ಬರುತ್ತವೆ. ನೆಪಥ್ಯಕ್ಕೆ ಸರಿದಿದ್ದ ಬಯಲು ಸೀಮೆಯ ಮಲೆನಾಡು ಮತ್ತೆ ಆಗತವಾಗು ಎಲ್ಲಾ ಲಕ್ಷಣಗಳು ಗೋಚರವಾಗುತ್ತಿವೆ. ಎಲ್ಲಾ ಪ್ರಾಣಿ-ಪಶು-ಪಕ್ಷಿಗಳು ಸ್ವಂಚ್ಚಂದವಾಗಿ ನಡೆದಾಡುತ್ತಿವೆ. ಕಾಡಿನ ಮಧ್ಯೆ ಅಲ್ಲಲ್ಲಿ ನೀರಿನ ಸೆಲೆಗಳು ನಮ್ಮನ್ನು ಸೆಳೆಯುತ್ತವೆ. ಒಟ್ಟಿನಲ್ಲಿ ಇಷ್ಟು ದಿನ ನಡೆದ ಗಣಿಕಾರಿಕೆಯಿಂದ ಅದಗೆಟ್ಟ ಪರಿಸರ ತಿಬ್ಬಳಿಸಿಕೊಳ್ಳುತ್ತಿದೆ. ಆದರೆ ಗಣಿಕಾರಿತಯನ್ನೇ ಆಶ್ರಯಿಸಿ ಬದುಕುತ್ತಿರುವ ಅನೇಕರ ಬದುಕು ಬೀದಿಗೆ ಬಂದಿರುವುದೂ ಸಹ ಅಷ್ಟೇ ವಾಸ್ತವ. ಅದರೆ ಅರಣ್ಯ ನಾಶದಿಂದ ನಮ್ಮ ಬದುಕನ್ನು ಕಟ್ಟಿಕೊಳ್ಳುತ್ತೇವೆ ಎನ್ನುವುದು ನಮ್ಮ ಭ್ರಮೆ ಅಲ್ಲದೆ ಮತ್ತೇನು?
ಇದೆಲ್ಲಾ ಇತ್ತೀಚೆಗೆ ನಾನು ಸುವರ್ಣ 24*7 ನೇದ್ದರ ಕವರೇಜ್ ಸ್ಟೋರಿಯ ವರದಿಗಾರರಾದ ಮೇಡಮ್ ವಿಜಯಲಕ್ಷ್ಮೀಯವರೊಂದಿಗೆ ಸಂಡೂರನ್ನು ಸುತ್ತು ಹಾಕಿದಾಗ ನನ್ನ ಅನುಭವಕ್ಕೆ ಬಂದ ಸಂಗತಿಗಳು. ಇವರೊಂದಿಗೆ ಸಂಡೂರಿನ ಪರಿಸರವಾದಿಗಳಾದ ಶ್ರೀ ಟಿ.ಎಂ ಶಿವಕುಮಾರ್, ಮೂಲಿಮನಿ ಈರಣ್ಣ, ಶ್ರೀಶೈಲ ಮತ್ತು ಸುವರ್ಣದ ಕ್ಯಾಮರಮೆನ್ ಗಳು ಜೊತೆಗಿದ್ದರು. ಯಾದಗಿರಿಯ ಸುವರ್ಣ ವರದಿಗಾರರ ಶ್ರೀ ಅನಂದ ಸೌಧಿ ಇಂತಹ ಒಂದು ಅದ್ಭುತ ಅನುಭವ ಪಡೆಯಲು ಕಾರಣರಾಗಿದ್ದು, ಥ್ಯಾಕ್ಸ್ ಟೂ ಯೂ ಸರ್,
. ಕಾಡು ಇದ್ದರೆ ನಾವು. ಕಾಡನ್ನು ರಕ್ಷಿಸಿದರೆ ಕಾಡು ನಮ್ಮನ್ನು ಕಾಯುತ್ತದೆ. ಈಗಲಾದರೂ ನಮ್ಮ ದುರಾಸೆ, ಎಲ್ಲಾ ಅನಾವಶ್ಯಕ ಅವಶ್ಯಕತೆಗಳನ್ನು ಬದಿಗೊತ್ತಿ ಕಾಡು ಕಾಪಾಡುವ ಕೆಲಸ ಮಾಡೋಣ. ನಾವೆಲ್ಲಾ ಇನ್ನಾದರೂ ಈ ಪ್ರಾಕೃತಿಕ ಸಂಪತ್ತನ್ನು ಉಳಿಸಿ ಬೆಳಸಿಕೊಳ್ಳುವತ್ತ ಮನಸ್ಸು ಮಾಡೋಣ. ಪ್ಲೀಸ್ ಪ್ಲೀಸ್ ಕಾಡು ಬೆಳಸಿ ನಾಡು ಉಳಿಸಿ.
ಇದೆಲ್ಲಾ ಇತ್ತೀಚೆಗೆ ನಾನು ಸುವರ್ಣ 24*7 ನೇದ್ದರ ಕವರೇಜ್ ಸ್ಟೋರಿಯ ವರದಿಗಾರರಾದ ಮೇಡಮ್ ವಿಜಯಲಕ್ಷ್ಮೀಯವರೊಂದಿಗೆ ಸಂಡೂರನ್ನು ಸುತ್ತು ಹಾಕಿದಾಗ ನನ್ನ ಅನುಭವಕ್ಕೆ ಬಂದ ಸಂಗತಿಗಳು. ಇವರೊಂದಿಗೆ ಸಂಡೂರಿನ ಪರಿಸರವಾದಿಗಳಾದ ಶ್ರೀ ಟಿ.ಎಂ ಶಿವಕುಮಾರ್, ಮೂಲಿಮನಿ ಈರಣ್ಣ, ಶ್ರೀಶೈಲ ಮತ್ತು ಸುವರ್ಣದ ಕ್ಯಾಮರಮೆನ್ ಗಳು ಜೊತೆಗಿದ್ದರು. ಯಾದಗಿರಿಯ ಸುವರ್ಣ ವರದಿಗಾರರ ಶ್ರೀ ಅನಂದ ಸೌಧಿ ಇಂತಹ ಒಂದು ಅದ್ಭುತ ಅನುಭವ ಪಡೆಯಲು ಕಾರಣರಾಗಿದ್ದು, ಥ್ಯಾಕ್ಸ್ ಟೂ ಯೂ ಸರ್,
. ಕಾಡು ಇದ್ದರೆ ನಾವು. ಕಾಡನ್ನು ರಕ್ಷಿಸಿದರೆ ಕಾಡು ನಮ್ಮನ್ನು ಕಾಯುತ್ತದೆ. ಈಗಲಾದರೂ ನಮ್ಮ ದುರಾಸೆ, ಎಲ್ಲಾ ಅನಾವಶ್ಯಕ ಅವಶ್ಯಕತೆಗಳನ್ನು ಬದಿಗೊತ್ತಿ ಕಾಡು ಕಾಪಾಡುವ ಕೆಲಸ ಮಾಡೋಣ. ನಾವೆಲ್ಲಾ ಇನ್ನಾದರೂ ಈ ಪ್ರಾಕೃತಿಕ ಸಂಪತ್ತನ್ನು ಉಳಿಸಿ ಬೆಳಸಿಕೊಳ್ಳುವತ್ತ ಮನಸ್ಸು ಮಾಡೋಣ. ಪ್ಲೀಸ್ ಪ್ಲೀಸ್ ಕಾಡು ಬೆಳಸಿ ನಾಡು ಉಳಿಸಿ.