25 ಜನವರಿ, 2012

ಕರಿಬಸವೇಶ್ವರಿ ಎಂ. ಬರೆದ ಕವನ - ಹೀಂಗಾ ಬಾ ನೆನಪೇ


ಹೀಂಗಾ ಬಾ . . . . . ನೆನಪೇ . . . . .
ಗೆಜ್ಜೀಯ ಕಟಗೊಂಡು
ಭರ ಭರನೆ  ಹೆಜ್ಜೀಯ ಹಾಕ್ಕೊಂಡು
ಬಂತೊಂದು ನನ್ನೆದೆಯಾ ನೆನಪು . . . . .

ಬಂದಂತ ನೆನಪು
ಬರಿ ನೆನಪಲ್ಲ ಅದು
ನನ್ನೆದೆಯಾ ರಸಗಳಿಗೆಯಾ ಜುಲುಪು . . . .

ನೆನಪ ಜುಲುಪನು ಬಿಚ್ಚಿ
ಬೇಸರದ ನೋವಿಗೆ ಮುಲಾಮು ಹಚ್ಚಿ
ಎದೆಯ ಗೂಡಿನ ಕಾಲನು ಬಿಚ್ಚಿ . . . .
ಕುಣಿದೆ . . .
ತಕಥೈ . . . .  ತಕಥೈ . . . . . ತಕಥೈ . . . .
ನಲಿದೆ . . .
ತಕಥೈ . . . .  ತಕಥೈ . . . . ತಕಥೈ . . .


 ಎದೆಯ ಕುಣಿಸಿದ ನೆನಪೇ
ನೋವೆನಿಸಿದರೂ ಮುದ ನೀಡಿದ
ಮಧುರ ಯಾತನೆಯ ನೆನಪೇ . . . .

ಮತ್ತೆ ಮತ್ತೆ  ಸುತ್ತಿ ಸುಳಿದು
ಹಿಂದ . . . . ಮುಂದ . . . ನೋಡದೇ ದಣಿದು
ಹೀಂಗಾ ಬಾ ನೆನಪೇ . . .
ಇದು ನಿನ್ನ ಮನಿ ಎಂದು ತಿಳಿದು
ಹೀಂಗಾ ಬಾ ನೆನಪೇ..
ಇದಾ ನಿನ್ನ ಮನಿ ಎಂದು ತಿಳಿದು . . .


ಕರಿಬಸವೇಶ್ವರಿ ಎಂ.
ನಿಂಬಳಗೇರಿ. ಕೂಡ್ಲಿಗಿ ತಾ!!

24 ಜನವರಿ, 2012

ಮಠಾಧೀಶರಿಗೇಕೆ ರಾಜಕಾರಣ.....?

 ಕರ್ನಾಟಕ ರಾಜಕಾರಣದಲ್ಲೀಗ ಖಾದಿಗಳಿಗಿಂತ ಕಾವಿಯದೇ ದರ್ಬಾರ್. ಮುಖ್ಯಮಂತ್ರಿ ಯಾರಾಗಬೇಕು? ಮಂತ್ರಿಗಳು ಯಾರಾಗಬೇಕು?ಯಾರನ್ನು ಇಳಿಸಬೇಕು.. ಯಾರನ್ನು ಗದ್ದಿಗೆಗೆ ಕೂರಿಸಬೇಕು ಎನ್ನುವದನ್ನು ನಿರ್ಧರಿಸುವವರು ಮಠಾಧೀಶರು ಎಂದರೆ ಅತಿಶಯೋಕ್ತಿಯೇನಲ್ಲ. ಈ ಹಿಂದೆ ಪೇಜಾವರ ಶ್ರೀಗಳನ್ನು ಹೊರತು ಪಡಿಸಿದರೆ ಯಾರೂ ರಾಜಕಾರಣದ ಬಗ್ಗೆ ಮಾತನಾಡುತ್ತಲೇ ಇರಲಿಲ್ಲ.ಅದರಲ್ಲೂ ವೀರಶೈವ ಮಠಾಧೀಶರಂತೂ ರಾಜಕಾರಣದ ಸನಿಹವೂ ಹೋಗುತ್ತಿರಲಿಲ್ಲ.ಆದರೆ ಇತ್ತೀಚೆಗೆ ಕರ್ನಾಟಕ ರಾಜಕಾರಣದಲ್ಲಿ ವೀರಶೈವ ಮಠಾಧೀಶರ ಹಸ್ತಕ್ಷೇಪ ಢಾಳಾಗಿ ಕಾಣುತ್ತಿದೆ.ಜನತೆ ಮಠಗಳ ಬಗ್ಗೆ ತಾತ್ಸಾರ ಮೂಡುವಂತೆ ಮಠಾಧೀಶರು ರಾಜಕಾರಿಣಿಗಳ ಪರ ಮಾತನಾಡುತ್ತಿದ್ದಾರೆ .

ಇದಕ್ಕೆ ಮೂಲ ಕಾರಣ ಯಡಿಯೂರಪ್ಪ.ವಿರೋಧ ಪಕ್ಷದ ನಾಯಕನಾಗಿದ್ದಷ್ಟು ದಿನಗಳ ಕಾಲ ಯಡಿಯೂರಪ್ಪನವರು ಮಾಡಿದ ಕೆಲಸವೆಂದರೆ ಪಕ್ಷ ಸಂಘಟನೆಗೆ ಯಾವುದೇ ಊರಿಗೆ ಹೋಗಲಿ ಆಲ್ಲಿರುವ ಮಠ, ಮಂದಿರ, ಸ್ವಾಮೀಜಿಗಳ ದರ್ಶನಾಶಿರ್ವಾದ ಪಡೆದು ಪುನೀತರಾದದ್ದು.ನಾಡಿನಾದ್ಯಂತ ಇರುವ ಎಲ್ಲಾ ಮಠಾಧೀಶರ ಸಂಪರ್ಕ ಗಳಿಸಿದ್ದು ಯಡಿಯೂರಪ್ಪ ಮುಖ್ಯಮಂತ್ರಿಯಾಗುವ ಹೊತ್ತಿಗೆ ವೀರಶೈವ ಮಠಾಧೀಶರ ಬೆಂಬಲ ಸಿಕ್ಕಿದ್ದು ಇವೆಲ್ಲವೂಗಳೂ ಕಾಕತಾಳೀಯ ಘಟನೆಯಾದರೂ ಇದರ ಸಮರ್ಥ ಲಾಭ ಪಡೆದ ಕರ್ನಾಟಕದ ಏಕೈಕ ವೀರಶೈವ ನಾಯಕನೆಂದರೆ ಯಡಿಯೂರಪ್ಪ.


ವೀರೇಂದ್ರ ಪಾಟೀಲ, ಬೊಮ್ಮಾಯಿ, ಜೆ.ಹೆಚ.ಪಟೇಲ , ಎಂ.ಪಿ.ಪ್ರಕಾಶ ರಂತಹ ವೀರಶೈವ ನಾಯಕರಿದ್ದರೂ ಇಡೀ ವೀರಶೈವ ಸಮುದಾಯದ ಅಭಿವೃಧ್ಧಿಗೆ ಅವರು ಚಿಂತನೆ ನಡೆಸಲಿಲ್ಲ.ವಿವಿಧ ಚಿಂತನೆ,ಸಮಾಜವಾದದ ಹಿನ್ನೆಲೆಯಿಂದ ಬಂದ ಈ ನಾಯಕರು ಎಲ್ಲಾ ಸಮುದಾಯದ ನಾಯಕರಾಗಲು ಹೋಗಿ ವೀರಶೈವರ ನಾಯಕರೂ ಆಗಲಿಲ್ಲ ಕೊನೆಗೆ ಇನ್ನುಳಿದ ಸಮುದಾಯಗಳು ಇವರನ್ನು ನಂಬದೇ ಇವರ ಸಮಾಜವಾದ ಇವರಿಗೆ ಮುಳುವಾಯಿತು. ಸಮಾಜವಾದದ ಸಂದಿಗ್ಧ ಸ್ಥಿತಿಯಲ್ಲಿದ್ದ ಪಟೇಲರನ್ನು ಮತ್ತು ಎಂ.ಪಿ.ಪ್ರಕಾಶರನ್ನ ಯಾವ ಮಠಾಧೀಶರು ಬೆಂಬಲಿಸಲಿಲ್ಲ.ಇಂತಹ ಸಂದರ್ಭದಲ್ಲಿ  ಮಠಾಧೀಶರ ಮತ್ತು ವೀರಶೈವರ ಆಶಾಕಿರಣವಾಗಿ ಗೋಚರಿಸಿದ್ದೇ ಯಡಿಯೂರಪ್ಪ.

ಕಾಂಗ್ರೆಸ್ ವೀರೇಂದ್ರ ಪಾಟೀಲ್ ರನ್ನು ಅಧಿಕಾರದಿಂದ ಕಿತ್ತು ಹಾಕಿದ ನಂತರ,ದೇವೇಗೌಡರ ಕುಟುಂಬ ವೀರಶೈವ ನಾಯಕರನ್ನು ಹಣಿಯತೊಡಗಿದಾಗ , ಕುಮಾರಸ್ವಾಮಿ ಅಧಿಕಾರ ನೀಡದೇ ದ್ರೋಹ ಮಾಡಿದಾಗ ರಾಜ್ಯದ ವೀರಶೈವರಿಗೆ ಅನ್ಯಾಯವಾಯಿತು ಎಂಬಂತೆ ಪ್ರಚಾರ ಮಾಡಿ ಜೊತೆಗೆ ಮಠಾಧೀಶರು ಕೂಡಾ ಒಂದು ಬಾರಿ ನಮ್ಮ ವೀರಶೈವ ಯಡಿಯೂರಪ್ಪ ಅಧಿಕಾರಕ್ಕೆ ಬರಲಿ ಎನ್ನುವ ಮಾತು ಸೇರಿ ಯಡಿಯೂರಪ್ಪ ಮುಖ್ಯಮಂತ್ರಿಯಾದರು.ಆದರೆ ಕರ್ನಾಟಕದ ಮಠಾಧೀಶರ ನಮ್ಮಿಂದಲೇ ಬಿಜೆಪಿ ಆಸ್ತಿತ್ವಕ್ಕೆ ಬಂತು ಎನ್ನುವ ರೀತಿಯಲ್ಲಿ ಯಡಿಯೂರಪ್ಪನನ್ನು , ಮಂತ್ರಿಮಂಡಳವನ್ನು, ಅಧಿಕಾರಿಗಳನ್ನು ಉಪಯೋಗಿಸಕೊಳ್ಳತೊಡಗಿದರು. ಈ ಬಾರಿ ಖುದ್ದು ಮಠಾಧೀಶರೇ ಯಡಿಯೂರಪ್ಪನವರನ್ನು ಬೆಂಬಲಿಸಿದರೂ ಜನತೆ ತಿರಸ್ಕರಿಸುತ್ತಾರೆ ಎಂಬುದನ್ನು ಮಠಾಧೀಶರು ಮರೆಯಬಾರದು.

 ಈ ನಾಡಿನ ಅಸಂಖ್ಯಾತ ಬಡವರಿಗೆ,ದೀನ ದಲಿತರಿಗೆ ಜಾತಿಬೇಧವಿಲ್ಲದೇ ದಾಸೋಹ ಶಿಕ್ಷಣ ನೀಡಿದ ಹಿರಿಮೆ ನಮ್ಮ ಮಠಗಳಿಗೆ ಸಲ್ಲಬೇಕು.ಅಂದು ಜೋಳಿಗೆ ಹಿಡಿದು ಮನೆಮನೆಗೆ ತಿರುಗಿ ಭಿಕ್ಷೆ ಎತ್ತಿ ದಾಸೋಹ ಶಿಕ್ಷಣ ನೀಡಿದ ಸ್ವಾಮೀಜಿಗಳ ಮೌಲ್ಯಗಳು ನಿಮ್ಮ ರಾಜಕಾರಣದ ಪ್ರವೇಶದ ಮೂಲಕ ಹಾಳಾಗುತ್ತಿವೆ.ಇವತ್ತು ಮಠ ಮಾನ್ಯಗಳಿಗೆ ಹಣ ನೀಡಿದಾಗ ವಿರೋಧ ಪಕ್ಷಗಳು ಬೊಬ್ಬೆ ಹಾಕುತ್ತಿವೆ ಆದರೆ ಸರ್ಕಾರ ನೀಡಿದ ಹಣ ಬಡವರ ವಸತಿ ನಿಲಯಕ್ಕೋ ಅಂಧ ಮಕ್ಕಳ ಶಿಕ್ಷಣಕ್ಕೋ ಅನಾಥರ ರಕ್ಷಣೆಗೆ ಬಳಕೆಯಾದರೆ ಸಾರ್ಥಕ . ಅದು ಮಠದ ವಾಣೀಜ್ಯೀಕರಣಕ್ಕೆ ಬಳಕೆಯಾದರೆ ಸಮಾಜ ಒಪ್ಪುವುದಿಲ್ಲ.
ವೀರಶೈವರೊಬ್ಬರು ನಾಡಿನ ಮುಖ್ಯಮಂತ್ರಿಯಾಗಬೇಕೆಂಬ ನಿಮ್ಮ ಹಂಬಲ ಈಡೇರಿದೆ.ಆದರೆ ಭ್ರಷ್ಟಾಚಾರದ ಕೂಪದಲ್ಲಿ ಮುಳುಗಿದ ವ್ಯಕ್ತಿಯನ್ನು ಮುಖ್ಯಮಂತ್ರಿಯಾಗಿ ಮುಂದುವರಿಸಬೇಕೆಂಬ ನಿಮ್ಮ ಆಶಯ ನೆಲದ ಕಾನೂನಿಗೆ ವಿರುಧ್ಧ ಎಂಬುದನ್ನು ಮರೆಯಬಾರದು.ಹಠ ಮಾಡಿ ಮುಖ್ಯಮಂತ್ರಿಯಾಗಲು ಹೊರಟಿರುವ ಯಡಿಯೂರಪ್ಪನವರಿಗೆ ಕರೆದು ಬುಧ್ಧಿ ಹೇಳುವ ದಾಷ್ಟ್ಯತೆ ಪ್ರದರ್ಶನ ಮಾಡಿ ನಿಮ್ಮ ಗೌರವ ಉಳಿಸಿಕೊಳ್ಳಿ.ಮೊದಲು ಯಡಿಯೂರಪ್ಪ ನಿರ್ದೋಷಿಯಾಗಲಿ ಅಲ್ಲವೇ..?
ಕಾಂಗ್ರೆಸ್ ನೊಳಗಿನ ಗುದ್ದಾಟ,ಕಾಲೆಳೆಯುವ ಚಾಳಿ, ಜನತಾದಳದ ಕುಟುಂಬ ರಾಜಕಾರಣ, ಇಲ್ಲಿಯವರೆವಿಗೂ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಗೆಲ್ಲಲು ,ನಡೆಯಲು ಕಾರಣ ಎಂಬುದನ್ನು ಎರಡೂ ಪಕ್ಷಗಳು ಅರಿಯಬೇಕು.ಜನತೆ ಬಿಜೆಪಿ ತಿರಸ್ಕರಿಸಲು ತುದಿಗಾಲಲ್ಲಿ ನಿಂತಿದ್ದರೂ ವಿರೋಧ ಪಕ್ಷಗಳ ಮುಖಂಡರ ಸ್ವ ಪ್ರತಿಷ್ಠೆಯಿಂದಾಗಿ ಜನರ ಆಶಯವನ್ನು ಬಳಸಿಕೊಳ್ಳುವಲ್ಲಿ ಕಾಂಗ್ರೆಸ್,ಜೆಡಿಎಸ್ ಎಡವುತ್ತಿವೆ.ಇನ್ನು ಮುಂದಾದರೂ ಮಠಾಧೀಶರು ಸಮಾಜ ಅಭಿವೃಧ್ಧಿ  ಮಾಡುವ ಜೊತೆಗೆ ನಾಡು ಉಳಿಸಿ ಬೆಳೆಸುವ ನಾಯಕನನ್ನು ಬೆಳೆಸಬಲ್ಲರೇ...?
                                                                                        ಪತ್ರೇಶ್ ಹಿರೇಮಠ್