08 ಫೆಬ್ರವರಿ, 2012

ರಾಜಕೀಯ ವಲಯದ ಸಾಂಸ್ಕೃತಿಕ ಜೀವಿ ಎಂ.ಪಿ.ಪ್ರಕಾಶ್ :ನೆನಪು

(ಇದೇ 8 ಫೆಭ್ರುವರಿ 2012ಕ್ಕೆ ಎಂ.ಪಿ.ಪ್ರಕಾಶ ನಮ್ಮೊಡನಿಲ್ಲದೇ ಒಂದು ವರ್ಷ.ತನ್ನಿಮಿತ್ತ ಈ ಲೇಖನ)

ಇಂದಿನ ರಾಜಕಾರಿಣಿಗಳ ಅರ್ಥಹೀನ ಮಾತು, ವೈಯುಕ್ತಿಕ ಹೀಯಾಳಿಕೆ , ವಿರೋಧಿಗಳ ಖಾಸಗಿತನವನ್ನು ಆಡಿಕೊಳ್ಳುವ ಹೀನತನವನ್ನು ಗಮನಿಸಿದಾಗ ಕರ್ನಾಟಕದ ರಾಜಕಾರಿಣಿಗಳು ಸದನದ ಗೌರವ ಎತ್ತಿ ಹಿಡಿಯುವ ಬದಲು ತೋಳೇರಿಸುವ ತೊಡೆ ತಟ್ಟುವ ಮಟ್ಟಕ್ಕೆ ತಲುಪಿ ವಿಧಾನ ಸಭೆಯ ಗೌರವ ಹಾಳುಗೆಡವಿದ್ದಾರೆ. ಇಂತಹ ಕೆಟ್ಟ ಪರಂಪರೆ ರಾಜಕಾರಿಣಿಗಳು ನಮ್ಮೆದುರಿಗಿರುವಾಗಲೇ ಹಳೆಯ ಸಂಸದೀಯ ಪಟುಗಳು ನಮ್ಮ ನೆನಪಿಗೆ ಬರುತ್ತಾರೆ.ಅದರಲ್ಲಿ ಎಲ್ಲಾ ರಂಗಗಳಲ್ಲಿ ತಮ್ಮ ವೈಯುಕ್ತಿಕ ಛಾಪು ಮೂಡಿಸಿದ್ದ ಎಂ.ಪಿ.ಪ್ರಕಾಶ್ .
ಜ್ನಾನಪೀಠ ಪ್ರಶಸ್ತಿ ಪುರಸ್ಕೃತ ಡಾ.ಯು.ಆರ್.ಅನಂತಮೂರ್ತಿಯವರು ಪ್ರಕಾಶ್ ನಿಧನದ ಸಂದರ್ಭದಲ್ಲಿ ಪ್ರಜಾವಾಣಿಯಲ್ಲಿ ಲೇಖನ ಬರೆದು " ಒಳದನಿಗೆ ಕಿವುಡಾಗದ ನಾಯಕ ಎಂ.ಪಿ.ಪ್ರಕಾಶ್" ಎಂಬ ಶೀರ್ಷಿಕೆ ನೀಡಿದಾಗಲೇ ಪ್ರಕಾಶ್ ರ ಶಕ್ತಿಯ ಅರಿವು ನನಗಾದದ್ದು. 

ಎಂ.ಪಿ.ಪ್ರಕಾಶ್ ರ ಬಗ್ಗೆ ನೊಬೆಲ್ ಪ್ರಶಸ್ತಿ ಪುರಸ್ಕೃತ ವಿ.ಎಸ್. ನೈಪಾಲ್ ತಮ್ಮ "ಎ ಮಿಲಿಯನ್ ಮ್ಯುಟಿನೀಸ್ ನೌ " ಪುಸ್ತಕದಲ್ಲಿ ಎಂ.ಪಿ.ಪ್ರಕಾಶರ ಕುರಿತಾಗಿ ಮೂವತ್ತು ಪುಟಗಳಷ್ಟು ಬರೆದು "ಭಾರತ ಕಂಡ ಬಹು ಪ್ರತಿಭಾವಂತ ರಾಜಕಾರಿಣಿ ,ಎಲ್ಲಾ ಕ್ಷೇತ್ರಗಳ ಸಮಗ್ರ ಮಾಹಿತಿ ಹೊಂದಿದ ಕಣಜ" ಎಂದು ಅಭಿಪ್ರಾಯ ದಾಖಲಿಸಿದ್ದಾರೆ.
ಅವರು ಇಂದು ನಮ್ಮೊಂದಿಗಿಲ್ಲ.ಆದರೆ ಅವರ ನೆನಪು,ವಿಚಾರಧಾರೆ,ಲೀಲಾಜಾಲ ಮಾತುಗಾರಿಕೆ ಮೂಲಕ ನಾಡಿನ ಗಮನ ಸೆಳೆದಿದ್ದ ಪ್ರತಿಭಾವಂತ ಎಂ.ಪಿ.ಪ್ರಕಾಶ್ ಕರ್ನಾಟಕ ನೆನಪಿಡುವಂತಹ ರಾಜಕಾರಿಣಿ. ಮರೆಯಲಾಗದ ವಿಜಯನಗರ ಸಾಮ್ರಾಜ್ಯ ಹೇಗೋ ಹಾಗೇ ಮರೆಯಲಾಗದ ಪ್ರಖರ ಸಾಂಸ್ಕೃತಿಕ ರಾಜಕಾರಣಿ ಎಂದರೂ ಅತಿಶಯೋಕ್ತಿಯೇನಲ್ಲ.
ಹಂಪಿ (ಪ್ರಕಾಶ್) ಉತ್ಸವ ಎಂದೇ ಕರೆಸಿಕೊಳ್ಳುವ  ಹಂಪಿ ಉತ್ಸವದ ರೂವಾರಿ, ಕನ್ನಡ ವಿಶ್ವವಿದ್ಯಾಲಯದ ಕನಸುಗಾರ, ಧಾರವಾಡ ಕೃಷಿ ವಿಶ್ವವಿದ್ಯಾಲಯ ಸ್ಥಾಪನೆ ಸಾಕಾರಗೊಳಿಸಿದ ಜನಪರ ಚಿಂತಕ, ಜಿಲ್ಲಾ ಉತ್ಸವಗಳ ಕನಸುಗಳ ಸಾಕಾರಿ ಎಂ.ಪಿ.ಪ್ರಕಾಶ್ ಕೇವಲ ರಾಜಕಾರಣಿಯಾಗಿರದೇ ಸೂಕ್ಷ ಮನಸ್ಸಿನ ನಾಯಕರಾಗಿದ್ದರು. ಹೆಗಡೆ ಸಂಪುಟದಲ್ಲಿ ಸಾರಿಗೆ ಸಚಿವರಾಗಿದ್ದಾಗ ಬಸ್ ಪಾಸ್ ನೀಡುವ ಯೋಜನೆ ಹಮ್ಮಿಕೊಳ್ಳುವ ಮೂಲಕ ಲಕ್ಷಾಂತರ ವಿದ್ಯಾರ್ಥಿಗಳ ಶಿಕ್ಷಣಕ್ಕೆ ನೆರವಾದರು. ಹಾಳು ಪಾಳು ಬಿದ್ದಿದ್ದ ,ಹೂವಿನ ಹಡಗಲಿ ಎಂದರೆ ಎಲ್ಲಿದೆ ಎನ್ನುತ್ತಿದ್ದ ಹಡಗಲಿಯನ್ನು ರಾಷ್ಟ್ರದ ಭೂಪಟದಲ್ಲಿ ಗುರುತಿಸುವಂತೆ ಅಭಿವೃಧ್ಧಿ ಪಡಿಸಿದರು.ಅಷ್ಟೆಲ್ಲಾ ಅಭಿವೃಧ್ದಿ ಮಾಡಿದರೂ ಜನತೆ ಜಾತಿ, ಧರ್ಮ ,ಒಳ ಪಂಗಡಗಳ ಹೆಸರಿನಲ್ಲಿ ಅವರನ್ನು ಸೋಲಿಸುತ್ತಿದ್ದರು.

ಓದು ಅವರ ಪ್ರಮುಖ ಹವ್ಯಾಸ .ನಿರಂತರ ಅಧ್ಯಯನದ ಮೂಲಕ ಲೀಲಾಜಾಲವಾಗಿ ತಾಸುಗಟ್ಟಲೇ ಕೇಳುಗರು ತಲ್ಲೀನರಾಗಿರುವಂತೆ ಮಾತನಾಡುತ್ತಿದ್ದ ಪ್ರಕಾಶ್ ವೇದಿಕೆಗಳಲ್ಲಿ ರಾಜಕಾರಣಕ್ಕಿಂತ ಸಾಹಿತ್ಯ,ಸಂಸ್ಕೃತಿ, ಕಲೆ,ರಂಗಭೂಮಿ,ಅರ್ಥಶಾಸ್ತ್ರ,ಇತಿಹಾಸ, ದೇಶ ವಿದೇಶಗಳ ಕುರಿತಾಗಿ ಕುಳಿತವರಿಗೆ ಸಮಯ ಹೋಗಿದ್ದು ತಿಳಿಯದಂತೆ ಮಾತನಾಡುತ್ತಿದ್ದರು. ಎಂ.ಪಿ.ಪ್ರಕಾಶ್ ರ ಭಾಷಣವೆಂದರೆ ಇವತ್ತು ಏನಾದರೂ ಹೊಸದನ್ನು ಪ್ರಕಾಶ್ ಹೇಳಬಹುದೇನೋ ಎಂದು ಜನ ಕೇಳಲು ಬರುತ್ತಿದ್ದರು.ಪ್ರಕಾಶ್ ರನ್ನು ರಾಜಕಾರಣಿಯಾಗಿ ನೋಡುವುದಕ್ಕಿಂತ  ಒಬ್ಬ ಬರಹಗಾರನಾಗಿ,ಲೇಖಕನಾಗಿ,ಅಂಕಣಕಾರನಾಗಿ,ರಂಗಕರ್ಮಿಯಾಗಿ, ನಟನಾಗಿ,ಸೂಜಿಗಲ್ಲಿನಂತೆ ಸೆಳೆಯುವ ಲೀಲಾಜಾಲ ಮಾತುಗಾರನಾಗಿ,ಇತಿಹಾಸದ ವಿಚಾರಗಳನ್ನು ಅಂಕಿ ಅಂಶ ಸಮೇತ ಹೇಳುವ ವಿದ್ವಾಂಸರಾಗಿ ಪ್ರಕಾಶ್ ಇಂದಿಗೂ ನಮ್ಮ ನೆನಪಿನಲ್ಲಿ ಅಚ್ಚಳಿಯದೇ ಉಳಿಯುತ್ತಾರೆ.
ನಾಡು ಕಟ್ಟುವ ಕನಸು ಹೊಂದಿದ ಪ್ರಕಾಶ್ ರಿಗೆ ರಾಜಕಾರಣದ ಪ್ರಮುಖ ಹುದ್ದೆ ಎಂದು ದೊರೆಯಲಿಲ್ಲ. ಮುಖ್ಯಮಂತ್ರಿ ಹುದ್ದೆಗೆ ಲಾಯಕ್ಕಾಗಿದ್ದ ಪ್ರಕಾಶ್ ಗೆ ಅದು ಮರೀಚಿಕೆಯಾಗಿ ಉಳಿಯಿತು.ಬಯಸದೇ ಬಂದ ಭಾಗ್ಯವಾದ ಉಪ ಮುಖ್ಯಮಂತ್ರಿ ಹುದ್ದೆ ಬಹಳ ದಿನವೂ ಇರಲಿಲ್ಲ. ರಾಜಕಾರಣದಲ್ಲಿ ಅಧಿಕಾರದಲ್ಲಿ ಇದ್ದಷ್ಟು ದಿನ ಪ್ರಕಾಶ್ ರ ಬಂಗಲೆಯ ಮುಂದೆ ಸಾಹಿತಿಗಳು, ಕಲಾವಿದರು, ಚಿತ್ರರಂಗದವರು, ಕಿರುತೆರೆ ಕಲಾವಿದರೇ ತುಂಬಿರುತ್ತಿದ್ದರು. ಪ್ರಕಾಶ್ ರ ಅಗಲಿಕೆ ಇಂದಿಗೂ ಸಾರಸ್ವತ ಲೋಕದ ಜನರಿಗೆ ನೋವಿನ ವಿಷಯವೇ.ತಮ್ಮ ಮತ ಕ್ಷೇತ್ರ ಹೂವಿನಹಡಗಲಿಯಲ್ಲಿ ರಂಗಭಾರತಿ ಎನ್ನುವ ನಾಟಕ ತಂಡ ಕಟ್ಟಿ ಐವತ್ತಕ್ಕೂ ಹೆಚ್ಚು ನಾಟಕಗಳನ್ನು ನಿರ್ದೇಶಿಸುವುದರ ಜೊತೆಗೆ ನಟಿಸಿ ದೇಶದಾದ್ಯಂತ ಪ್ರದರ್ಶನ ನೀಡಿದ್ದರು.ಈ ಸಾಧನೆಗಾಗಿಯೇ ನಾಟಕ ಅಕಾಡೆಮಿ ಫೆಲೋಶಿಪ್ ಪಡೆದಿದ್ದರು. 

 ಬಳ್ಳಾರಿ ಜಿಲ್ಲೆಗೆ ಹಂಪಿ ಉತ್ಸವದ ಮೂಲಕ ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಂಸ್ಕೃತಿಕ ಹಿರಿಮೆ ಕಲ್ಪಿಸಿಕೊಟ್ಟ ಕೀರ್ತಿ ಪ್ರಕಾಶ್ ರಿಗೆ ಸಲ್ಲಬೇಕು. ಹಂಪಿ ಉತ್ಸವ ನಡೆಯುವ ಮೂರು ದನಗಳ ಕಾಲ ಎಲ್ಲಾ  ವೇದಿಕೆಗಳಲ್ಲಿ ತಿರುಗಾಡುತ್ತಾ ಕಲಾವಿದರೊಂದಿಗೆ ಬೆರೆಯುತ್ತಾ ಜನೋತ್ಸವದಲ್ಲಿ ತಾವು ಕಲಾವಿದರಾಗಿಬಿಡುತ್ತಿದ್ದರು. ವಿಚಾರ ಸಂಕಿರಣದಲ್ಲಿ ಭಾಗವಹಿಸಿ ಇತಿಹಾಸ ತಜ್ಞರೊಂದಿಗೆ ಸೇರಿ ಹಂಪಿಯ ಗತ ವೈಭವದಲ್ಲಿ ಮುಳುಗೇಳುತ್ತಿದ್ದರು.ರಾಜಕಾರಣದ ಸೋಲು ಗೆಲುವುಗಳನ್ನು ಸಮನಾಗಿ ಸ್ವೀಕರಿಸುವ ಸ್ಥಿತಪ್ರಜ್ಞ ರಾಜಕಾರಿಣಿಯಾಗಿದ್ದ ಪ್ರಕಾಶ್ ಬದುಕಿದ್ದಷ್ಟೂ ದಿನವೂ ತಾವು ನಂಬಿದ ಮೌಲ್ಯಗಳು ಮುಕ್ಕಾಗದಂತೆ ನೋಡಿಕೊಂಡರು.ತಮ್ಮಾ ಕಟ್ಟಾ ವಿರೋಧಿಯನ್ನು ಅತ್ಯಂತ ಗೌರವಪೂರ್ವಕವಾಗಿ ಮಾತನಾಡುವಷ್ಟು ಸಹನಾಶೀಲರಾಗಿದ್ದರು.
ರಾಜಕಾರಣವೆಂದರೆ ಖಾದಿ ಧರಿಸುವುದಲ್ಲ, ರಾಜಕಾರಣವೆಂದರೆ ಗುತ್ತಿಗೆದಾರನಾಗಿ ಕಾಮಗಾರಿ ಮಾಡುವುದಲ್ಲ, ಬೈಕ್ ಹತ್ತಿ ಸುಮ್ಮನೆ ಕಛೇರಿಗಳಿಗೆ ಲಂಚ ತಿಂದು ಕೆಲಸ ಮಾಡಿಸುವುದಲ್ಲ.ರಾಜಕಾರಣವೆಂದರೆ ತತ್ವ, ಸಿದ್ದಾಂತ,ಬದ್ಧತೆ ಎನ್ನುತ್ತಿದ್ದ ಪ್ರಕಾಶರ ಮಾತುಗಳು ಇಂದಿನ ರಾಜಕಾರಿಣಿಗಳನ್ನು ನೋಡಿದಾಗ ಮತ್ತೆ ಮತ್ತೆ ನೆನಪಾಗುತ್ತವೆ. ಅವರ ಆದರ್ಶ , ಜ್ಷಾನ, ಪಾಂಡಿತ್ಯ, ಸಂಸದೀಯ ಪಟುವಾಗಿ ಮಾತನಾಡುವ ಶೈಲಿಯನ್ನು ಮತ್ತೆ ಮತ್ತೆ ನೆನಪಿಸುವ ಪ್ರಕಾಶ್ ದೈಹಿಕವಾಗಿ ನಮ್ಮೊಂದಿಗೆ ಇಲ್ಲದಿದ್ದರೂ....?ಅವರ ನೆನಪು ನಮ್ಮನ್ನು ಕಾಡುತ್ತಲೇ ಇದೆ.
                                                                         
                                                               ಪತ್ರೇಶ್ ಹಿರೇಮಠ್