ಅವನು ಅವಳು
ಇಬ್ಬರಿಗೂ ನೌಕರಿ
ಸಂಜೆ ಕೆಲಸ ಮುಗಿಸಿ ಮನೆಗೆ
ಬೆಳಕಿಗಾಗಿ, ಲೈಟು ಹಚ್ಚುತ್ತಾರೆ
ಮತ್ತು ಸೆಖೆ ತಾಳದೇ ಗಾಳಿಗಾಗಿ
ಫ್ಯಾನು ತಿರುಗಿಸುತ್ತಾರೆ
ಕರೆಂಟ್ ಬಿಲ್ ಏರುತ್ತಲೇ ಇದೆಯಲ್ಲ.... ?
ಸ್ವಲ್ಪ ಬೇಸರ ಹೋಗಲಾಡಿಸಲು
ಟಿವಿ ಆನ್ ಮಾಡುತ್ತಾರೆ
ಫ್ರಿಜ್ ಚಾಲೂ ಹಾಗೇ ಇರುತ್ತೆ...
ಬೆಳಗಿನ ಅಡುಗೆಯನ್ನು ಸ್ವಲ್ಪ ಬೇಯಿಸಲು
ಕರೆಂಟಿನ ಒಲೆ ಬಳಕೆಯಾಗುತ್ತದೆ
ಕರೆಂಟ್ ಬಿಲ್ ಏರುತ್ತಲೇ ಇದೆಯಲ್ಲ.... ?
ಊಟದ ನಂತರ
ಮಲಗಬೇಕು
ಸೊಳ್ಳೆಗಳ ಕಾಟ
ಸೊಳ್ಳೆ ಬತ್ತಿ ಹಚ್ಚಲೂ ಬೇಕು ಕರೆಂಟ್...
ಕರೆಂಟ್ ಬಿಲ್ ಏರುತ್ತಲೇ ಇದೆಯಲ್ಲ.... ?
ಏಳುತ್ತಾರೆ ... ಬೆಳಿಗ್ಗೆ
ಸ್ನಾನ ಮಾಡಬೇಕಲ್ಲ ..
ಗೀಜರ್ ಹಾಜರ್
ಅಡುಗೆ ಬೇಕಾತಲ್ಲ
ಮಿಕ್ಸರ್ ಶುರೋಕರ್
ಕರೆಂಟ್ ಬಿಲ್ ಏರುತ್ತಲೇ ಇದೆಯಲ್ಲ.... ?
ಟಿಫಿನ್ ಆಯಿತು
ಮಧ್ಯಾಹ್ನದ ಬಾಕ್ಸ್ ತಯಾರಿ
ಆಫೀಸಿಗೆ ಹೊರಡಬೇಕಲ್ಲ
ಹೊಸದಾಗಿ ಕಟ್ಟಿದ ಮನೆಗೆ
ತಂದಿಟ್ಟ ಬೆಲೆ ಬಾಳುವ ವಸ್ತುಗಳಿಗೆ ರಕ್ಷಣೆ..?
ಮನೆಗೊಂದು ವಿದ್ಯುತ್ ತಂತಿ ಬೇಲಿ
ಅದಕೂ ವಿದ್ಯುತ್ ಹರಿಯಲಿ
ಕರೆಂಟ್ ಬಿಲ್ ಏರುತ್ತಲೇ ಇದೆಯಲ್ಲ.... ?
ಮತ್ತೆ ಮೊದಲಿನಿಂದ .... ಪ್ರಾರಂಭ
ಕರೆಂಟ್ ಬಿಲ್ ತುಂಬಲೇಬೇಕು
ಹೊರಗಾಳಿ, ರುಬ್ಬಿದ ಅಡುಗೆಯ ರುಚಿ
ಯಕ್ಷಗಾನ ನಾಟಕ ಗಾಯನ ಕಳೆದುಕೊಂಡಿದ್ದಕ್ಕೆ,
ಹಳೆಯ ಗಡಿಗೆ,ನೆಲುವಿಗಿ,ಬೀಸಣಿಕೆ
ಬೇವಿನ ಸೊಪ್ಪಿನ ಹೊಗೆ ಜೊತೆ ಜೊತೆ
ಬೆಳೆಸಿದ ಅಪ್ಪಅಮ್ಮನ ಮರೆತಿದ್ದಕ್ಕೆ
ಕರೆಂಟ್ ಬಿಲ್ ತುಂಬಲೇಬೇಕಿದೆ
ಕಳೆದುಕೊಂಡ ತಪ್ಪಿಗೆ ಬಿಲ್ ಏರುತ್ತಲೇ ಇದೆ....?
ಪತ್ರೇಶ್ ಹಿರೇಮಠ್
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ