21 ಸೆಪ್ಟೆಂಬರ್, 2013

ನೆಟ್ ನಲ್ಲಿ ಕೂತು ಚರ್ಚೆ ಮಾಡೋರು ವೋಟ್ ಹಾಕ್ತಾರಾ ...?

ಫೇಸ್ಬುಕ್ ಸೇರಿದಂತೆ ಎಲ್ಲಾ ಸಾಮಾಜಿಕ ತಾಣಗಳಲ್ಲೂ ಈಗ ರಾಜಕೀಯದ್ದೇ ಸುದ್ದಿ. ರಾಹುಲ ಗಾಂಧಿ ಮುಂದಿನ ಪ್ರಧಾನಿಯಾಗಲಿ ಅಂತ ಖುದ್ದು ಪ್ರಧಾನಿ ಮನಮೋಹನ ಸಿಂಗ್ ಹೇಳಿದರಂತೆ. ಮೋದಿ ಪ್ರಧಾನಿ ಅಭ್ಯರ್ಥಿಯಾಗೋದು ಅಡ್ವಾಣಿಗೆ ಇಷ್ಟವಿಲ್ವಂತೆ. ಮೋದಿ ಪ್ರಧಾನಿಯಾದರೆ ನಾನು ಭಾರತದಲ್ಲಿ ಇರೋಲ್ಲ ಅಂತ ಜ್ಞಾನಪೀಠ ಸಾಹಿತಿ ಅನಂತಮೂರ್ತಿ ಅಂದರಂತೆ. ಅನಂತಮೂರ್ತಿಯವರು ವಿದೇಶಕ್ಕೆ ಹೋಗಲು ಕೆಲವರು ಮನಿ ಆರ್ಡರ್ ಮಾಡಿದರಂತೆ. ಇನ್ನೂ ಕೆಲವರು ಒಂದು ಹೆಜ್ಜೆ ಮುಂದೆ ಹೋಗಿ ಫೇಸ್ ಬುಕ್ ನಲ್ಲಿ ಮೋದಿ ಹೊಗಳುವವರು ನನಗೆ ಸರಿ ಬರೊಲ್ಲಾ .. ಮೋದಿ ಅಭಿಮಾನಿಗಳು ನಮ್ಮ ಅಕೌಂಟ್ನಿಂದ ಅನ್ ಫ್ರೆಂಡ್ ಆಗಿಬಿಡಿ ಅಂದರಂತೆ.

ಇದನ್ನೆಲ್ಲಾ ಮಾತಾಡುವವರಿಗೆ ನೈಜ ರಾಜಕಾರಣದ ಅನುಭವ ಇದೆಯಾ..? ಹೀಗೆಲ್ಲಾ ಟೀಕೆ ಮಾಡೋರು ಎಂದಾದರೂ ತಾಸುಗಟ್ಟಲೆ ಕಾದು ಮತ ಹಾಕಿದ್ದಾರಾ..? ಅಥವಾ ಎಂದಾದರೂ ಇಪ್ಪತ್ತು ಜನರ ಮನ ಒಲಿಸಿ ಯಾರಾದರು ಒಳ್ಳೆಯ ಅಭ್ಯರ್ಥಿಗೆ ಮತ ಹಾಕಿಸಲಿಕ್ಕೆ ಶ್ರಮಿಸಿದ್ದಾರಾ..?  ಚುನಾವಣೆ ದಿನವೇ ನಮಗ್ಯಾಕಪ್ಪಾ ಗಲಾಟೆ ಅಂತ ಟೂರ್ ಹಾಕಿಕೊಳ್ಳೋ ಎಷ್ಟೋ ಮಾತಿನ ಮಲ್ಲರನ್ನ ನಾನು ಕಣ್ಣಾರೆ ಕಂಡಿದ್ದಾಗಿದೆ.

ಮಾತೆತ್ತಿದರೆ ಗಾಂಧೀ ಕುಟುಂಬವನ್ನೇ ನಿಂದಿಸುವುದು ಬಿಟ್ಟರೆ ಮೋದಿ ಪ್ರಧಾನಿಯಾದರೆ ಏನು ಮಾಡುತ್ತಾನೆ ಅಂತ ಸ್ಪಷ್ಟವಾಗಿ ಮೋದಿ ಅಭಿಮಾನಿಗಳಿಗೆ ಗೊತ್ತಿಲ್ಲ. ಇನ್ನು ಮೋದಿ ತೆಗಳೋ ಭರದಲ್ಲಿ ಯುಪಿಎ ಮತ್ತು ಕಾಂಗ್ರೆಸ್ ಏನು ಅಭಿವೃದ್ಧಿ ಯೋಜನೆಗಳನ್ನು ಜಾರಿಗೆ ತಂದಿದೆ ಅಂತ ಕೂಡಾ ಗೊತ್ತಿಲ್ಲ..

ಫೇಸ್ ಬುಕ್ ನಲ್ಲಿ ಕೂತು ಟೀಕೆ ಮಾಡೋರಿಗೆ ಯುಪಿಎ ಜಾರಿಗೆ ತಂದ ಕಾರ್ಯಕ್ರಮಗಳನ್ನು ಕೇಳಿದರೆ ಒಂದೋ ಎರಡೋ ಹೇಳ್ತಾರೆ ಇಲ್ಲಾ ಅಂದರೆ ಹಗರಣಗಳ ಬಗ್ಗೆ ಮಾತಾಡ್ತಾರೆ... ಇನ್ನು ಎನ್ ಡಿಎ ಜಾರಿಗೆ ತಂದ ಯೋಜನೆಗಳ ಬಗ್ಗೆ ಮಾಹಿತಿ ಕೂಡಾ ಇರೋದಿಲ್ಲ... ಅಷ್ಟೇ ಏಕೆ ಯುವಜನತೆಗೆ ಸರ್ಕಾರ ಏನು ಕಾರ್ಯಕ್ರಮಗಳನ್ನು ಈ ಬಜೆಟ್ ನಲ್ಲಿ ನೀಡಿದೆ ಅನ್ನೋದು ಗೊತ್ತಿರಲಾರದೋರು ... ರಾಹುಲ್ ಗಿಂತ ಮೋದಿ ಬೆಟರ್ರು ... ಮೋದಿಗಿಂತ  ಅಡ್ವಾಣಿ ಬೆಟರ್ರು ಅಂತ ಟೈಪಿಸುತ್ತಾ ... ಕೊನೆಗೆ ಇವರೆಲ್ಲರಿಗಿಂತ ನಾನೇ ಪ್ರಧಾನಿಯಾಗಲು ಬೆಟರ್ರು ಅಂದ್ರೂ ಆಶ್ಚರ್ಯವಿಲ್ಲ ... ಏನಂತೀರಿ...?
 ಪತ್ರೇಶ್ ಹಿರೇಮಠ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ