30 ಏಪ್ರಿಲ್, 2020

ಕೊನೆಗೂ ಗೆದ್ದದ್ದು ಸಾವಲ್ಲ; ಇರ್ಫಾನ್ ಎಂಬ ಅಪ್ಪಟ ತಾರೆ!

ಪಾತ್ರದ ಅಂತರಂಗವನ್ನೇ ಬಿಚ್ಚಿಡುವ ಬೆರಗುಹುಟ್ಟಿಸುವ ಕಣ್ಣು, ಪರಿಚಿತ ಭಾವ ಹುಟ್ಟಿಸುವ ದನಿ ಮತ್ತು ಆಪ್ತ, ಒಡನಾಡಿ ಎಂಬಷ್ಟು ಆಪ್ತತೆ ಹುಟ್ಟಿಸುವ ವ್ಯಕ್ತಿತ್ವ. ಇದು ಇರ್ಫಾನ್ ಖಾನ್ ಎಂಬ ಜಗತ್ತು ಕಂಡ ಅಪರೂಪದ ನಟನನ್ನು ಕಣ್ಣ ಮುಂದೆ ತರುವ ಕನಿಷ್ಟ ವಿವರ. ಆದರೆ, ಇರ್ಫಾನ್ ಎಂದರೆ ಅಷ್ಟೇ ಆಗಿರಲಿಲ್ಲ. ನೋಟ, ಭಾವ, ನಟನೆ, ತೆರೆ ಮೇಲಿನ ಪಾತ್ರವನ್ನೂ ಮೀರಿದ ಇನ್ನೇನೋ ವಿಶೇಷ ಚುಂಬಕ ಶಕ್ತಿ ಇರ್ಫಾನ್ ವ್ಯಕ್ತಿತ್ವಕ್ಕೆ ಇತ್ತು ಎಂಬುದಕ್ಕೆ ಆತ ಜಗತ್ತನ್ನು ಭೌತಿಕವಾಗಿ ತೊರೆದುಹೋದ ಈ ಕ್ಷಣವೇ ಸಾಕ್ಷಿ.
ಬಹುಶಃ ಇತ್ತೀಚಿನ ದಶಕಗಳಲ್ಲೇ ಯಾವೊಬ್ಬ ವ್ಯಕ್ತಿಯ ಅಗಲಿಕೆಯೂ ನೀಡದಷ್ಟು ನೋವನ್ನು ಇರ್ಫಾನ್ ಸಾವು ತಂದಿದೆ. ದೇಶ, ಭಾಷೆಗಳ ಗಡಿ ಮೀರಿ, ಆತನ ಅಭಿನಯದ ಒಂದು ತುಣುಕು ನೋಡಿದವರು ಕೂಡ ಎದೆಯೊಡೆದುಹೋಗಿದ್ದಾರೆ. ಒಂದೇ ಒಂದು ಸಿನಿಮಾ ನೋಡಿದವರು ಕೂಡ ಅಕ್ಷರಶಃ ತಮ್ಮದೇ ಮನೆಮಂದಿಯನ್ನು ಕಳೆದುಕೊಂಡಂತೆ ಕಣ್ಣೀರಾಗಿದ್ದಾರೆ. ಒಬ್ಬ ಕಲಾವಿದನಾಗಿ ಇರ್ಫಾನ್ ಸಾಧಿಸಿದ್ದ ಯಶಸ್ಸು ಆತನಿಗೆ ಕೇವಲ ಜನಪ್ರಿಯತೆಯನ್ನು ಮಾತ್ರ ತಂದುಕೊಡಲಿಲ್ಲ; ಅಭಿಮಾನವನ್ನು ಮಾತ್ರ ತಂದುಕೊಡಲಿಲ್ಲ. ಅಪಾರ ಜನಸಮೂಹದೊಂದಿಗೆ ಒಂದು ಆಳವಾದ ಪ್ರೀತಿ ಮತ್ತು ಅಪರೂಪದ ನಂಟನ್ನೂ ಬೆಸೆದಿತ್ತು ಎಂಬುದಕ್ಕೆ ಗುರುವಾರ ಇಡೀ ದಿನ ಸಾಮಾಜಿಕ ಜಾಲತಾಣಗಳಲ್ಲಿ ತುಂಬಿತುಳುಕಿದ ವಿದಾಯದ, ನೋವಿನ ಸಂದೇಶಗಳೇ ಸಾಕ್ಷಿ.
ನಟನೊಬ್ಬ ಕೇವಲ ಪಾತ್ರವಾಗಿ ತೆರೆಗೆ ಸೀಮಿತವಾಗಿದ್ದರೆ, ಅಥವಾ ಸಹಜ ಬದುಕನ್ನು ಮೀರಿದ(ಲಾರ್ಜರ್ ದ್ಯಾನ್ ಲೈಫ್) ಹೀರೋಯಿಸಂ ಮೂಲಕ ವರ್ಚಸ್ಸು ವೃದ್ಧಿಸಿಕೊಂಡರೆ ಸಾಕಷ್ಟು ಜನಪ್ರಿಯತೆ, ಫ್ಯಾನ್ ಫಾಲೋಯಿಂಗ್, ಬಾಕ್ಸ್ ಆಫೀಸ್ ಯಶಸ್ಸು, ಹಣ ಗಳಿಸಬಹುದು. ಸೂಪರ್ ಸ್ಟಾರ್ ಹೆಗ್ಗಳಿಕೆಯನ್ನೂ ಗಳಿಸಬಹುದು. ಆದರೆ, ಒಬ್ಬ ಸಾದಾ ಸೀದಾ ಮನುಷ್ಯನ ಎದೆ ಕಲಕುವ, ಕಣ್ಣೀರು ಮಿಡಿಯುವ ಮಟ್ಟಿಗಿನ ಕಕ್ಕುಲತೆಯನ್ನು ಅಗಲಿಕೆಯ ಹೊತ್ತಲ್ಲಿ ಪಡೆಯುವುದು ಸಾಧ್ಯವಿಲ್ಲ. ಅದಕ್ಕೆ ಇರ್ಪಾನ್ ಖಾನ್ ಆಗಿರಬೇಕಾಗುತ್ತದೆ. ನಟನೆ, ಅಭಿನಯ, ವರ್ಚಸ್ಸು, ಸ್ಟಾರ್ ಡಂ ಗಳನ್ನೆಲ್ಲಾ ಮೀರಿದ ಅಸಲೀ ಅಂತಃಕರಣ ಇರಬೇಕಾಗುತ್ತದೆ. ಹುಚ್ಚು ಅಭಿಮಾನದ, ಉಮೇದಿನ ಶಿಳ್ಳೆಗಳ ಬದಲಿಗೆ ಥಿಯೇಟರಿನ ಆಸನಕ್ಕೊರಗಿದರವರ ಎದೆಯಲ್ಲಿ ತಣ್ಣಗೆ ಇಳಿಯುವ ಅಂತರಂಗ ಬೆಸೆಯುವ ಒಂದು ಸಾಚಾತನ ಬೇಕಾಗುತ್ತದೆ. ನಟನೆಯ ತಾಂತ್ರಿಕ ಕರಸತ್ತುಗಳ ಮೀರಿ ನಟನೊಬ್ಬನ ವ್ಯಕ್ತಿತ್ವ ಪಾತ್ರದ ಜೀವಂತಿಕೆಗೆ ಎರಕ ಹೋಯ್ದಿರಬೇಕಾಗುತ್ತದೆ. ಅಂತಹ ಮಾಂತ್ರಿಕತೆ ಅಥವಾ ವಿಚಿತ್ರ ಪ್ರಾಮಾಣಿಕತೆ ಪಾತ್ರ ಮತ್ತು ನಟನ ನಡುವೆ ಪ್ರತ್ಯೇಕಿಸಲಾಗದ ಬಂಧವಾಗಿ ಬೆಸೆದಿರಬೇಕಾಗುತ್ತದೆ.
ಕೊನೆಗೂ ಗೆದ್ದದ್ದು ಸಾವಲ್ಲ; ಇರ್ಫಾನ್ ಎಂಬ ಅಪ್ಪಟ ತಾರೆ!
ಅದು ಇರ್ಫಾನ್ ಶಕ್ತಿ ಮತ್ತು ಸಹಜತೆ ಎರಡೂ. ಹಾಗಾಗಿಯೇ ಇಂದು ಆತನಿಗೆ ಸಂತಾಪ ಸೂಚಿಸಿ, ಶ್ರದ್ಧಾಂಜಲಿ ಸಲ್ಲಿಸಿ ಬರುತ್ತಿರುವ ಪ್ರತಿಕ್ರಿಯೆಗಳಲ್ಲಿ, ಸಂದೇಶಗಳಲ್ಲಿ ಆತನ ನಟನೆಯ ಬಗ್ಗೆ, ಪ್ರತಿಭೆಯ ಬಗ್ಗೆ ಮಾತನಾಡಿದಷ್ಟೇ ಜನ, ಆತನ ವ್ಯಕ್ತಿತ್ವದ ಬಗ್ಗೆ, ಆತನ ಸಾಧನೆಯ ಬಗ್ಗೆ, ವಿನಮ್ರತೆಯ ಬಗ್ಗೆ, ಹಾಗೇ ಎದುರಿನ ಸವಾಲನ್ನು ಅಷ್ಟೇ ಘನತೆಯಿಂದ, ದಿಟ್ಟತನದಿಂದ ಎದುರುಗೊಂಡು ಸಾಧಿಸುತ್ತಿದ್ದ ಬಗ್ಗೆಯೂ ಮಾತನಾಡುತ್ತಿದ್ದಾರೆ. ಅದರಲ್ಲೂ ಇರ್ಫಾನ್ ಜೊತೆ ಕೆಲಸ ಮಾಡಿದ ನಟರು, ತಂತ್ರಜ್ಞರು, ರಂಗಕರ್ಮಿಗಳು, ಸಾಮಾಜಿಕ ಹೋರಾಟಗಾರರು,.. ಎಲ್ಲರೂ ಒಬ್ಬ ವ್ಯಕ್ತಿಯಾಗಿ ಇರ್ಫಾನ್ ಎಷ್ಟು ದೊಡ್ಡವರಾಗಿದ್ದರು, ಎಂಥ ಉನ್ನತ ಮಾನವೀಯ ಗುಣ ಹೊಂದಿದ್ದರು, ಎಷ್ಟು ಸಹಜ ಮತ್ತು ಕಾಳಜಿಯ ವ್ಯಕ್ತಿಯಾಗಿ ಅವರು ತಮ್ಮೊಂದಿಗೆ ಬೆರೆಯುತ್ತಿದ್ದರು ಎಂಬುದನ್ನೇ ಹೆಚ್ಚು ನೆನಪಿಸಿಕೊಂಡಿದ್ದಾರೆ.
ಬಹುಶಃ ಬಾಲಿವುಡ್ ಅಥವಾ ಭಾರತೀಯ ಸಿನಿಮಾ ಭಾಷೆಯಲ್ಲಿ ಯಾವುದೇ ಸ್ಟಾರ್ ಡಂ ಇರದ ನಟನಾಗಿಯೂ ಇರ್ಪಾನ್, ಈ ಪರಿಯ ಜನಪ್ರೀತಿಗೆ ಪಾತ್ರವಾಗಲು ಅವರ ನಟನೆ- ಅಭಿನಯ ಪ್ರತಿಭೆಯಷ್ಟೇ, ಅವರ ಅಂತರಂಗದ ವ್ಯಕ್ತಿತ್ವವೂ ಕಾರಣ.
ಇಂಗ್ಲಿಷಿನ ‘ದ ವಾರಿಯರ್’, ‘ದಿ ನೇಮ್ ಸೇಕ್’, ‘ಲೈಫ್ ಆಫ್ ಪೈ’, ‘ಸ್ಲಮ್ ಡಾಗ್ ಮಿಲೆನಿಯರ್’, ‘ಇನ್ ಫರ್ನೊ’ದಂತಹ ಸಿನಿಮಾಗಳು ಇರ್ಫಾನನನ್ನು ಜಾಗತಿಕ ರಂಗದಲ್ಲಿ ನಟನಾಗಿ ಪರಿಚಯಿಸಿದವು. ಹಿಂದಿಯಲ್ಲಿ ‘ಸಲಾಂ ಬಾಂಬೆ’ಯಿಂದ ಆರಂಭವಾಗಿ, ಭಾರೀ ಶ್ರೇಯಸ್ಸು ತಂದುಕೊಟ್ಟ ‘ಲಂಚ್ ಬಾಕ್ಸ್’, ‘ಪಾನ್ ಸಿಂಗ್ ತೋಮರ್’, ‘ಮಕ್ಬೂಲ್’, ‘ಹೈದರ್’, ‘ಪೀಕು’, ‘ಮದಾರಿ’, ‘ಕಾರವಾನ್’ ಮತ್ತು ಇತ್ತೀಚಿನ ‘ಅಂಗ್ರೇಜಿ ಮೀಡಿಯಂ’ವರೆಗೆ ಇರ್ಪಾನ್ ಅಭಿನಯಿಸಿದ ಸಿನಿಮಾಗಳು ಹಲವು. 90ರ ದಶಕದಲ್ಲಿ ಧಾರಾವಾಹಿಗಳಲ್ಲಿ ಚಿಕ್ಕಪುಟ್ಟ ಪಾತ್ರಗಳಲ್ಲಿ ಕೂಡ ನೋಡುಗರ ಮನಸ್ಸಿನಲ್ಲಿ ಅಚ್ಚೊತ್ತಿದ ನಟನೆ ಕೂಡ ಇರ್ಪಾನನದ್ದು. ಹಾಗೆ ನೋಡಿದರೆ; ಇರ್ಪಾನ್, ಈ ಸಿನಿಮಾ- ಧಾರಾವಾಹಿಗಳಲ್ಲಿ ಎಷ್ಟು ಗಮನ ಸೆಳೆದಿದ್ದರೋ ಅಷ್ಟೇ ರಂಗಭೂಮಿಯಲ್ಲೂ, ಸಾಮಾಜಿಕ ಚಟುವಟಿಕೆಗಳಲ್ಲೂ ಗಮನ ಸೆಳೆದಿದ್ದರು.
ಎರಡು ವರ್ಷದ ಹಿಂದೆ ತಮಗೆ ಗುಣಪಡಿಸಲಾಗದ ಅಪರೂಪದ ಕ್ಯಾನ್ಸರ್ ಇದೆ ಎಂಬುದು ಗೊತ್ತಾದ ಬಳಿಕವೂ ಆತನೊಳಗಿನ ಛಲಗಾರ, ಹೋರಾಟಗಾರ ಮತ್ತು ಅಪ್ಪಟ ಮನುಷ್ಯ ಎದೆಗುಂದಲಿಲ್ಲ. ಆಗ ಆತ ಲಂಡನ್ನಿನ ಕ್ಯಾನ್ಸರ್ ಚಿಕಿತ್ಸಾ ಆಸ್ಪತ್ರೆಯ ಹಾಸಿಗೆ ಮೇಲೆ ಕುಳಿತು ಬರೆದ ಪತ್ರ ಎಂಥವರ ಎದೆಯಲ್ಲೂ ಅಪರೂಪದ ನಟ ಎಂಬ ಈ ಮನುಷ್ಯನ ಗಟ್ಟಿತನದ ಬಗ್ಗೆ, ಪ್ರಬುದ್ಧತೆಯ ಬಗ್ಗೆ ಹೆಮ್ಮೆ ಮೂಡಿಸುವಂತಿತ್ತು. ಅದೇ ಹೊತ್ತಿಗೆ ಆ ಪತ್ರ ಇಂಥ ಅಪರೂಪದ ಮನುಷ್ಯ ಎಂಥ ಭೀಕರ ಖಾಯಿಲೆಯ ದವಡೆಗೆ ಸಿಲುಕಿದ್ದಾನಲ್ಲಾ ಎಂಬ ನೋವನ್ನು ಹುಟ್ಟಿಸುತ್ತಿತ್ತು.
ಅದಾದ ಬಳಿಕವೂ ಇರ್ಫಾನ್ ಮೊನ್ನೆ ಮೊನ್ನೆ ಕರೋನಾ ಲಾಕ್ ಡೌನ್ ನಿಂದಾಗಿ ಬೀದಿಪಾಲಾದ ವಲಸೆ ಕಾರ್ಮಿಕರಿಗಾಗಿ ಮಿಡಿದವರು. ಅವರಿಗಾಗಿ ತಮ್ಮ ಕೈಲಾದ ನೆರವು ನೀಡಿದರು. ಎರಡು ದಿನಗಳ ಹಿಂದೆ ತಮ್ಮ ತಾಯಿಯನ್ನು ಕಳೆದುಕೊಂಡಿದ್ದ ಇರ್ಫಾನ್, ಲಾಕ್ ಡೌನ್ ನಿಂದಾಗಿ ತಾಯಿಯ ಅಂತ್ಯಕ್ರಿಯೆಯಲ್ಲಿ ಖುದ್ದು ಭಾಗವಹಿಸಲಾಗದ ನೋವು ಅನುಭವಿಸಿದ್ದರು. ಅದಾದ ಮಾರನೇ ದಿನವೇ; ಮಂಗಳವಾರ ತಾನೇ ಆರೋಗ್ಯ ಸ್ಥಿತಿ ತೀರಾ ಹದಗೆಟ್ಟು ಮುಂಬೈನ ಖಾಸಗೀ ಆಸ್ಪತ್ರೆಗೆ ದಾಖಲಾಗಿದ್ದರು. ಬುಧವಾರ ಬೆಳಗ್ಗೆ ಹೊತ್ತಿಗೆ ಈ ಮಾಂತ್ರಿಕ, ಜೀವಕಾರುಣ್ಯದ ನಟ ಬಾರದ ಲೋಕಕ್ಕೆ ಹೋದ ಸುದ್ದಿ ಬಂದಿತು.
ಕೊನೆಗೂ ಗೆದ್ದದ್ದು ಸಾವಲ್ಲ; ಇರ್ಫಾನ್ ಎಂಬ ಅಪ್ಪಟ ತಾರೆ!
ಎರಡು ವರ್ಷದ ಹಿಂದೆ ಇಂತಹದ್ದೊಂದು ಭಯಂಕರ ಕಾಯಿಲೆಯ ವಿರುದ್ಧ ಹೋರಾಡುತ್ತಿದ್ದೇನೆ. ನಾನು ನನ್ನ ಆಟವನ್ನು ಪ್ರಾಮಾಣಿಕವಾಗಿ ಆಡುವೆ, ನೋಡೋಣ, ಆಟದ ಕೊನೆ ಹೇಗೆ ಎಂದು .. ಎಂದು ಇರ್ಪಾನ್ ಹೇಳಿದ್ದಾಗಲೇ ಇಡೀ ಜಗತ್ತು ಅವರು ಆ ಆಟದಲ್ಲಿ ಗೆದ್ದು ಬರಲಿ ಎಂದು ಹಾರೈಸಿತ್ತು. ಸಂಕಟದಿಂದ ಮಿಡಿದಿತ್ತು. ಇದೀಗ ಕೊನೆಗೂ ಸಾವೇ ಗೆದ್ದಿದೆ. ಆದರೆ, ಈ 53 ವರ್ಷಗಳ ಬದುಕಿನಲ್ಲಿ ಇರ್ಫಾನ್ ಸಂಪಾದಿಸಿದ ಜನರ ಪ್ರೀತಿ ಮತ್ತು ಅಭಿಮಾನದ ಮುಂದೆ ನಿಜಕ್ಕೂ ಸಾವು ಸೋತಿದೆ. ಇರ್ಫಾನ್ ಗೆದ್ದಿದ್ದಾರೆ. ನಟನೆಯಿಂದ, ಅಭಿನಯದಿಂದ ಮುಂಬೈನ ಮಸಾಲಾ ಸಿನಿಮಾ ಭಾಷೆಯಲ್ಲಿ ಸ್ಟಾರ್ ಎನಿಸಿಕೊಂಡಿದ್ದರೋ ಇಲ್ಲವೋ.. ಆದರೆ, ಈಗ ನಿಜವಾಗಿಯೂ ತಾರೆಯಾಗಿದ್ದಾರೆ.
ಸಾವು ಮತ್ತು ಬದುಕಿನ ಲೆಕ್ಕಾಚಾರಗಳನ್ನು ಮೀರಿ ಎಲ್ಲಾ ಸಿನಿಮಾ ಪ್ರಿಯರ, ರಂಗಪ್ರಿಯರ ಮತ್ತು ಆ ಮೂಲಕ ಜೀವಪ್ರೀತಿಯ ಮನಸ್ಸುಗಳಲ್ಲಿ ಅಜರಾಮರ ತಾರೆಯಾಗಿದ್ದಾರೆ. ಆತನ ಆ ಸಾಧನೆಯಲ್ಲಿ ಅವರೊಳಗಿನ ನಟನ ಪಾತ್ರದಷ್ಟೇ, ಅಂತಃಕರಣದ ನೈಜ ಮನುಷ್ಯನ ಪಾತ್ರವೂ ದೊಡ್ಡದಿದೆ ಎಂಬುದು ಇರ್ಫಾನ್ ವೈಶಿಷ್ಟ್ಯ.
ವಿದಾಯ ಇರ್ಫಾನ್, ನೀವಿರದೆಯೂ ಇಲ್ಲಿ ಇರುತ್ತೀರಿ,, ಎಲ್ಲರೆದೆಯಲ್ಲೂ.. ಹೋಗಿಬನ್ನಿ!
prathidhwani 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ