27 ಮೇ, 2012

ಎಂ.ಪಿ.ಪ್ರಕಾಶ ಬಗ್ಗೆ ಹರಪನಹಳ್ಳಿ ಶಿವಕುಮಾರ ಬಾಗಳಿ ಬರೆದ ಕವನ

ಮರೆಯಾಯಿತು ಹೂವಿನ ಹಡಗು
ಶುರುವಾಯಿತು ಜನತೆಯ ಕೊರಗು
ಕಣ್ಮರೆಯಾಯಿತು ಪ್ರಕಾಶನ ಮೆರುಗು
ನಮ್ಮಿಂದ  ಅಗಲಿತು ಈ ಹೂವಿನ ಹಡಗು

ಬಡವರ ಜೀವನಕ್ಕೆ ಬೆಳಕು
ರಾಜಕೀಯ ಬದುಕಿಗೆ ಹೊಳಪು
ರಂಗ ಕಲಾವಿದರಿಗೆ ಹುರುಪು
ನಮ್ಮೊಂದಿಗೆ ಇರುವುದು ಮಾಸದ ಪ್ರಕಾಶನ ನೆನಪು

ಜನ ಬಲದಲಿ ತೇಲಿದ ಈ ಹಡಗು
ಹಣ ಬಲದಲಿ ಮುಳುಗಿದ  ಈ ಹಡಗು
ಬಿರುಗಾಳಿಗೆ ಬಗ್ಗದೆ ಸಾಗಿದ  ಈ ಹಡಗು
ಇನ್ಮುಂದೆ ನಾವೂ ನೋಡುವುದು ಬರೀ ಗೊಡಗು

ಭ್ರಷ್ಟಾಚಾರದ ಸುಳಿಗೆ ಸಿಲುಕದ ಹಡಗು
ಶಿಷ್ಟಾಚಾರಕ್ಕೆ ಒಳಗಾದ ಹಡಗು
ಒಳಸಂಚಿನ ತಂತ್ರಗಳ ತುಳಿತಕ್ಕೆ ಬಲಿಯಾದ ಹಡಗು
ಕೊನೆಯವರೆಗೂ ಅಜಾತ ಶತೃವಾಯಿತು ಈ ಹೂವಿನ ಹಡಗು...


ಶಿವಕುಮಾರ.ಹಾ.ಬಾಗಳಿ
ಆಂಗ್ಲ ಉಪನ್ಯಾಸಕರು ಎಸ್
.ಎಸ್.ಹೆಚ್.ಜೈನ್ ಪಿ.ಯು.ಕಾಲೇಜ್   ಹರಪನಹಳ್ಳಿ

08 ಫೆಬ್ರವರಿ, 2012

ರಾಜಕೀಯ ವಲಯದ ಸಾಂಸ್ಕೃತಿಕ ಜೀವಿ ಎಂ.ಪಿ.ಪ್ರಕಾಶ್ :ನೆನಪು

(ಇದೇ 8 ಫೆಭ್ರುವರಿ 2012ಕ್ಕೆ ಎಂ.ಪಿ.ಪ್ರಕಾಶ ನಮ್ಮೊಡನಿಲ್ಲದೇ ಒಂದು ವರ್ಷ.ತನ್ನಿಮಿತ್ತ ಈ ಲೇಖನ)

ಇಂದಿನ ರಾಜಕಾರಿಣಿಗಳ ಅರ್ಥಹೀನ ಮಾತು, ವೈಯುಕ್ತಿಕ ಹೀಯಾಳಿಕೆ , ವಿರೋಧಿಗಳ ಖಾಸಗಿತನವನ್ನು ಆಡಿಕೊಳ್ಳುವ ಹೀನತನವನ್ನು ಗಮನಿಸಿದಾಗ ಕರ್ನಾಟಕದ ರಾಜಕಾರಿಣಿಗಳು ಸದನದ ಗೌರವ ಎತ್ತಿ ಹಿಡಿಯುವ ಬದಲು ತೋಳೇರಿಸುವ ತೊಡೆ ತಟ್ಟುವ ಮಟ್ಟಕ್ಕೆ ತಲುಪಿ ವಿಧಾನ ಸಭೆಯ ಗೌರವ ಹಾಳುಗೆಡವಿದ್ದಾರೆ. ಇಂತಹ ಕೆಟ್ಟ ಪರಂಪರೆ ರಾಜಕಾರಿಣಿಗಳು ನಮ್ಮೆದುರಿಗಿರುವಾಗಲೇ ಹಳೆಯ ಸಂಸದೀಯ ಪಟುಗಳು ನಮ್ಮ ನೆನಪಿಗೆ ಬರುತ್ತಾರೆ.ಅದರಲ್ಲಿ ಎಲ್ಲಾ ರಂಗಗಳಲ್ಲಿ ತಮ್ಮ ವೈಯುಕ್ತಿಕ ಛಾಪು ಮೂಡಿಸಿದ್ದ ಎಂ.ಪಿ.ಪ್ರಕಾಶ್ .
ಜ್ನಾನಪೀಠ ಪ್ರಶಸ್ತಿ ಪುರಸ್ಕೃತ ಡಾ.ಯು.ಆರ್.ಅನಂತಮೂರ್ತಿಯವರು ಪ್ರಕಾಶ್ ನಿಧನದ ಸಂದರ್ಭದಲ್ಲಿ ಪ್ರಜಾವಾಣಿಯಲ್ಲಿ ಲೇಖನ ಬರೆದು " ಒಳದನಿಗೆ ಕಿವುಡಾಗದ ನಾಯಕ ಎಂ.ಪಿ.ಪ್ರಕಾಶ್" ಎಂಬ ಶೀರ್ಷಿಕೆ ನೀಡಿದಾಗಲೇ ಪ್ರಕಾಶ್ ರ ಶಕ್ತಿಯ ಅರಿವು ನನಗಾದದ್ದು. 

ಎಂ.ಪಿ.ಪ್ರಕಾಶ್ ರ ಬಗ್ಗೆ ನೊಬೆಲ್ ಪ್ರಶಸ್ತಿ ಪುರಸ್ಕೃತ ವಿ.ಎಸ್. ನೈಪಾಲ್ ತಮ್ಮ "ಎ ಮಿಲಿಯನ್ ಮ್ಯುಟಿನೀಸ್ ನೌ " ಪುಸ್ತಕದಲ್ಲಿ ಎಂ.ಪಿ.ಪ್ರಕಾಶರ ಕುರಿತಾಗಿ ಮೂವತ್ತು ಪುಟಗಳಷ್ಟು ಬರೆದು "ಭಾರತ ಕಂಡ ಬಹು ಪ್ರತಿಭಾವಂತ ರಾಜಕಾರಿಣಿ ,ಎಲ್ಲಾ ಕ್ಷೇತ್ರಗಳ ಸಮಗ್ರ ಮಾಹಿತಿ ಹೊಂದಿದ ಕಣಜ" ಎಂದು ಅಭಿಪ್ರಾಯ ದಾಖಲಿಸಿದ್ದಾರೆ.
ಅವರು ಇಂದು ನಮ್ಮೊಂದಿಗಿಲ್ಲ.ಆದರೆ ಅವರ ನೆನಪು,ವಿಚಾರಧಾರೆ,ಲೀಲಾಜಾಲ ಮಾತುಗಾರಿಕೆ ಮೂಲಕ ನಾಡಿನ ಗಮನ ಸೆಳೆದಿದ್ದ ಪ್ರತಿಭಾವಂತ ಎಂ.ಪಿ.ಪ್ರಕಾಶ್ ಕರ್ನಾಟಕ ನೆನಪಿಡುವಂತಹ ರಾಜಕಾರಿಣಿ. ಮರೆಯಲಾಗದ ವಿಜಯನಗರ ಸಾಮ್ರಾಜ್ಯ ಹೇಗೋ ಹಾಗೇ ಮರೆಯಲಾಗದ ಪ್ರಖರ ಸಾಂಸ್ಕೃತಿಕ ರಾಜಕಾರಣಿ ಎಂದರೂ ಅತಿಶಯೋಕ್ತಿಯೇನಲ್ಲ.
ಹಂಪಿ (ಪ್ರಕಾಶ್) ಉತ್ಸವ ಎಂದೇ ಕರೆಸಿಕೊಳ್ಳುವ  ಹಂಪಿ ಉತ್ಸವದ ರೂವಾರಿ, ಕನ್ನಡ ವಿಶ್ವವಿದ್ಯಾಲಯದ ಕನಸುಗಾರ, ಧಾರವಾಡ ಕೃಷಿ ವಿಶ್ವವಿದ್ಯಾಲಯ ಸ್ಥಾಪನೆ ಸಾಕಾರಗೊಳಿಸಿದ ಜನಪರ ಚಿಂತಕ, ಜಿಲ್ಲಾ ಉತ್ಸವಗಳ ಕನಸುಗಳ ಸಾಕಾರಿ ಎಂ.ಪಿ.ಪ್ರಕಾಶ್ ಕೇವಲ ರಾಜಕಾರಣಿಯಾಗಿರದೇ ಸೂಕ್ಷ ಮನಸ್ಸಿನ ನಾಯಕರಾಗಿದ್ದರು. ಹೆಗಡೆ ಸಂಪುಟದಲ್ಲಿ ಸಾರಿಗೆ ಸಚಿವರಾಗಿದ್ದಾಗ ಬಸ್ ಪಾಸ್ ನೀಡುವ ಯೋಜನೆ ಹಮ್ಮಿಕೊಳ್ಳುವ ಮೂಲಕ ಲಕ್ಷಾಂತರ ವಿದ್ಯಾರ್ಥಿಗಳ ಶಿಕ್ಷಣಕ್ಕೆ ನೆರವಾದರು. ಹಾಳು ಪಾಳು ಬಿದ್ದಿದ್ದ ,ಹೂವಿನ ಹಡಗಲಿ ಎಂದರೆ ಎಲ್ಲಿದೆ ಎನ್ನುತ್ತಿದ್ದ ಹಡಗಲಿಯನ್ನು ರಾಷ್ಟ್ರದ ಭೂಪಟದಲ್ಲಿ ಗುರುತಿಸುವಂತೆ ಅಭಿವೃಧ್ಧಿ ಪಡಿಸಿದರು.ಅಷ್ಟೆಲ್ಲಾ ಅಭಿವೃಧ್ದಿ ಮಾಡಿದರೂ ಜನತೆ ಜಾತಿ, ಧರ್ಮ ,ಒಳ ಪಂಗಡಗಳ ಹೆಸರಿನಲ್ಲಿ ಅವರನ್ನು ಸೋಲಿಸುತ್ತಿದ್ದರು.

ಓದು ಅವರ ಪ್ರಮುಖ ಹವ್ಯಾಸ .ನಿರಂತರ ಅಧ್ಯಯನದ ಮೂಲಕ ಲೀಲಾಜಾಲವಾಗಿ ತಾಸುಗಟ್ಟಲೇ ಕೇಳುಗರು ತಲ್ಲೀನರಾಗಿರುವಂತೆ ಮಾತನಾಡುತ್ತಿದ್ದ ಪ್ರಕಾಶ್ ವೇದಿಕೆಗಳಲ್ಲಿ ರಾಜಕಾರಣಕ್ಕಿಂತ ಸಾಹಿತ್ಯ,ಸಂಸ್ಕೃತಿ, ಕಲೆ,ರಂಗಭೂಮಿ,ಅರ್ಥಶಾಸ್ತ್ರ,ಇತಿಹಾಸ, ದೇಶ ವಿದೇಶಗಳ ಕುರಿತಾಗಿ ಕುಳಿತವರಿಗೆ ಸಮಯ ಹೋಗಿದ್ದು ತಿಳಿಯದಂತೆ ಮಾತನಾಡುತ್ತಿದ್ದರು. ಎಂ.ಪಿ.ಪ್ರಕಾಶ್ ರ ಭಾಷಣವೆಂದರೆ ಇವತ್ತು ಏನಾದರೂ ಹೊಸದನ್ನು ಪ್ರಕಾಶ್ ಹೇಳಬಹುದೇನೋ ಎಂದು ಜನ ಕೇಳಲು ಬರುತ್ತಿದ್ದರು.ಪ್ರಕಾಶ್ ರನ್ನು ರಾಜಕಾರಣಿಯಾಗಿ ನೋಡುವುದಕ್ಕಿಂತ  ಒಬ್ಬ ಬರಹಗಾರನಾಗಿ,ಲೇಖಕನಾಗಿ,ಅಂಕಣಕಾರನಾಗಿ,ರಂಗಕರ್ಮಿಯಾಗಿ, ನಟನಾಗಿ,ಸೂಜಿಗಲ್ಲಿನಂತೆ ಸೆಳೆಯುವ ಲೀಲಾಜಾಲ ಮಾತುಗಾರನಾಗಿ,ಇತಿಹಾಸದ ವಿಚಾರಗಳನ್ನು ಅಂಕಿ ಅಂಶ ಸಮೇತ ಹೇಳುವ ವಿದ್ವಾಂಸರಾಗಿ ಪ್ರಕಾಶ್ ಇಂದಿಗೂ ನಮ್ಮ ನೆನಪಿನಲ್ಲಿ ಅಚ್ಚಳಿಯದೇ ಉಳಿಯುತ್ತಾರೆ.
ನಾಡು ಕಟ್ಟುವ ಕನಸು ಹೊಂದಿದ ಪ್ರಕಾಶ್ ರಿಗೆ ರಾಜಕಾರಣದ ಪ್ರಮುಖ ಹುದ್ದೆ ಎಂದು ದೊರೆಯಲಿಲ್ಲ. ಮುಖ್ಯಮಂತ್ರಿ ಹುದ್ದೆಗೆ ಲಾಯಕ್ಕಾಗಿದ್ದ ಪ್ರಕಾಶ್ ಗೆ ಅದು ಮರೀಚಿಕೆಯಾಗಿ ಉಳಿಯಿತು.ಬಯಸದೇ ಬಂದ ಭಾಗ್ಯವಾದ ಉಪ ಮುಖ್ಯಮಂತ್ರಿ ಹುದ್ದೆ ಬಹಳ ದಿನವೂ ಇರಲಿಲ್ಲ. ರಾಜಕಾರಣದಲ್ಲಿ ಅಧಿಕಾರದಲ್ಲಿ ಇದ್ದಷ್ಟು ದಿನ ಪ್ರಕಾಶ್ ರ ಬಂಗಲೆಯ ಮುಂದೆ ಸಾಹಿತಿಗಳು, ಕಲಾವಿದರು, ಚಿತ್ರರಂಗದವರು, ಕಿರುತೆರೆ ಕಲಾವಿದರೇ ತುಂಬಿರುತ್ತಿದ್ದರು. ಪ್ರಕಾಶ್ ರ ಅಗಲಿಕೆ ಇಂದಿಗೂ ಸಾರಸ್ವತ ಲೋಕದ ಜನರಿಗೆ ನೋವಿನ ವಿಷಯವೇ.ತಮ್ಮ ಮತ ಕ್ಷೇತ್ರ ಹೂವಿನಹಡಗಲಿಯಲ್ಲಿ ರಂಗಭಾರತಿ ಎನ್ನುವ ನಾಟಕ ತಂಡ ಕಟ್ಟಿ ಐವತ್ತಕ್ಕೂ ಹೆಚ್ಚು ನಾಟಕಗಳನ್ನು ನಿರ್ದೇಶಿಸುವುದರ ಜೊತೆಗೆ ನಟಿಸಿ ದೇಶದಾದ್ಯಂತ ಪ್ರದರ್ಶನ ನೀಡಿದ್ದರು.ಈ ಸಾಧನೆಗಾಗಿಯೇ ನಾಟಕ ಅಕಾಡೆಮಿ ಫೆಲೋಶಿಪ್ ಪಡೆದಿದ್ದರು. 

 ಬಳ್ಳಾರಿ ಜಿಲ್ಲೆಗೆ ಹಂಪಿ ಉತ್ಸವದ ಮೂಲಕ ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಂಸ್ಕೃತಿಕ ಹಿರಿಮೆ ಕಲ್ಪಿಸಿಕೊಟ್ಟ ಕೀರ್ತಿ ಪ್ರಕಾಶ್ ರಿಗೆ ಸಲ್ಲಬೇಕು. ಹಂಪಿ ಉತ್ಸವ ನಡೆಯುವ ಮೂರು ದನಗಳ ಕಾಲ ಎಲ್ಲಾ  ವೇದಿಕೆಗಳಲ್ಲಿ ತಿರುಗಾಡುತ್ತಾ ಕಲಾವಿದರೊಂದಿಗೆ ಬೆರೆಯುತ್ತಾ ಜನೋತ್ಸವದಲ್ಲಿ ತಾವು ಕಲಾವಿದರಾಗಿಬಿಡುತ್ತಿದ್ದರು. ವಿಚಾರ ಸಂಕಿರಣದಲ್ಲಿ ಭಾಗವಹಿಸಿ ಇತಿಹಾಸ ತಜ್ಞರೊಂದಿಗೆ ಸೇರಿ ಹಂಪಿಯ ಗತ ವೈಭವದಲ್ಲಿ ಮುಳುಗೇಳುತ್ತಿದ್ದರು.ರಾಜಕಾರಣದ ಸೋಲು ಗೆಲುವುಗಳನ್ನು ಸಮನಾಗಿ ಸ್ವೀಕರಿಸುವ ಸ್ಥಿತಪ್ರಜ್ಞ ರಾಜಕಾರಿಣಿಯಾಗಿದ್ದ ಪ್ರಕಾಶ್ ಬದುಕಿದ್ದಷ್ಟೂ ದಿನವೂ ತಾವು ನಂಬಿದ ಮೌಲ್ಯಗಳು ಮುಕ್ಕಾಗದಂತೆ ನೋಡಿಕೊಂಡರು.ತಮ್ಮಾ ಕಟ್ಟಾ ವಿರೋಧಿಯನ್ನು ಅತ್ಯಂತ ಗೌರವಪೂರ್ವಕವಾಗಿ ಮಾತನಾಡುವಷ್ಟು ಸಹನಾಶೀಲರಾಗಿದ್ದರು.
ರಾಜಕಾರಣವೆಂದರೆ ಖಾದಿ ಧರಿಸುವುದಲ್ಲ, ರಾಜಕಾರಣವೆಂದರೆ ಗುತ್ತಿಗೆದಾರನಾಗಿ ಕಾಮಗಾರಿ ಮಾಡುವುದಲ್ಲ, ಬೈಕ್ ಹತ್ತಿ ಸುಮ್ಮನೆ ಕಛೇರಿಗಳಿಗೆ ಲಂಚ ತಿಂದು ಕೆಲಸ ಮಾಡಿಸುವುದಲ್ಲ.ರಾಜಕಾರಣವೆಂದರೆ ತತ್ವ, ಸಿದ್ದಾಂತ,ಬದ್ಧತೆ ಎನ್ನುತ್ತಿದ್ದ ಪ್ರಕಾಶರ ಮಾತುಗಳು ಇಂದಿನ ರಾಜಕಾರಿಣಿಗಳನ್ನು ನೋಡಿದಾಗ ಮತ್ತೆ ಮತ್ತೆ ನೆನಪಾಗುತ್ತವೆ. ಅವರ ಆದರ್ಶ , ಜ್ಷಾನ, ಪಾಂಡಿತ್ಯ, ಸಂಸದೀಯ ಪಟುವಾಗಿ ಮಾತನಾಡುವ ಶೈಲಿಯನ್ನು ಮತ್ತೆ ಮತ್ತೆ ನೆನಪಿಸುವ ಪ್ರಕಾಶ್ ದೈಹಿಕವಾಗಿ ನಮ್ಮೊಂದಿಗೆ ಇಲ್ಲದಿದ್ದರೂ....?ಅವರ ನೆನಪು ನಮ್ಮನ್ನು ಕಾಡುತ್ತಲೇ ಇದೆ.
                                                                         
                                                               ಪತ್ರೇಶ್ ಹಿರೇಮಠ್

25 ಜನವರಿ, 2012

ಕರಿಬಸವೇಶ್ವರಿ ಎಂ. ಬರೆದ ಕವನ - ಹೀಂಗಾ ಬಾ ನೆನಪೇ


ಹೀಂಗಾ ಬಾ . . . . . ನೆನಪೇ . . . . .
ಗೆಜ್ಜೀಯ ಕಟಗೊಂಡು
ಭರ ಭರನೆ  ಹೆಜ್ಜೀಯ ಹಾಕ್ಕೊಂಡು
ಬಂತೊಂದು ನನ್ನೆದೆಯಾ ನೆನಪು . . . . .

ಬಂದಂತ ನೆನಪು
ಬರಿ ನೆನಪಲ್ಲ ಅದು
ನನ್ನೆದೆಯಾ ರಸಗಳಿಗೆಯಾ ಜುಲುಪು . . . .

ನೆನಪ ಜುಲುಪನು ಬಿಚ್ಚಿ
ಬೇಸರದ ನೋವಿಗೆ ಮುಲಾಮು ಹಚ್ಚಿ
ಎದೆಯ ಗೂಡಿನ ಕಾಲನು ಬಿಚ್ಚಿ . . . .
ಕುಣಿದೆ . . .
ತಕಥೈ . . . .  ತಕಥೈ . . . . . ತಕಥೈ . . . .
ನಲಿದೆ . . .
ತಕಥೈ . . . .  ತಕಥೈ . . . . ತಕಥೈ . . .


 ಎದೆಯ ಕುಣಿಸಿದ ನೆನಪೇ
ನೋವೆನಿಸಿದರೂ ಮುದ ನೀಡಿದ
ಮಧುರ ಯಾತನೆಯ ನೆನಪೇ . . . .

ಮತ್ತೆ ಮತ್ತೆ  ಸುತ್ತಿ ಸುಳಿದು
ಹಿಂದ . . . . ಮುಂದ . . . ನೋಡದೇ ದಣಿದು
ಹೀಂಗಾ ಬಾ ನೆನಪೇ . . .
ಇದು ನಿನ್ನ ಮನಿ ಎಂದು ತಿಳಿದು
ಹೀಂಗಾ ಬಾ ನೆನಪೇ..
ಇದಾ ನಿನ್ನ ಮನಿ ಎಂದು ತಿಳಿದು . . .


ಕರಿಬಸವೇಶ್ವರಿ ಎಂ.
ನಿಂಬಳಗೇರಿ. ಕೂಡ್ಲಿಗಿ ತಾ!!

24 ಜನವರಿ, 2012

ಮಠಾಧೀಶರಿಗೇಕೆ ರಾಜಕಾರಣ.....?

 ಕರ್ನಾಟಕ ರಾಜಕಾರಣದಲ್ಲೀಗ ಖಾದಿಗಳಿಗಿಂತ ಕಾವಿಯದೇ ದರ್ಬಾರ್. ಮುಖ್ಯಮಂತ್ರಿ ಯಾರಾಗಬೇಕು? ಮಂತ್ರಿಗಳು ಯಾರಾಗಬೇಕು?ಯಾರನ್ನು ಇಳಿಸಬೇಕು.. ಯಾರನ್ನು ಗದ್ದಿಗೆಗೆ ಕೂರಿಸಬೇಕು ಎನ್ನುವದನ್ನು ನಿರ್ಧರಿಸುವವರು ಮಠಾಧೀಶರು ಎಂದರೆ ಅತಿಶಯೋಕ್ತಿಯೇನಲ್ಲ. ಈ ಹಿಂದೆ ಪೇಜಾವರ ಶ್ರೀಗಳನ್ನು ಹೊರತು ಪಡಿಸಿದರೆ ಯಾರೂ ರಾಜಕಾರಣದ ಬಗ್ಗೆ ಮಾತನಾಡುತ್ತಲೇ ಇರಲಿಲ್ಲ.ಅದರಲ್ಲೂ ವೀರಶೈವ ಮಠಾಧೀಶರಂತೂ ರಾಜಕಾರಣದ ಸನಿಹವೂ ಹೋಗುತ್ತಿರಲಿಲ್ಲ.ಆದರೆ ಇತ್ತೀಚೆಗೆ ಕರ್ನಾಟಕ ರಾಜಕಾರಣದಲ್ಲಿ ವೀರಶೈವ ಮಠಾಧೀಶರ ಹಸ್ತಕ್ಷೇಪ ಢಾಳಾಗಿ ಕಾಣುತ್ತಿದೆ.ಜನತೆ ಮಠಗಳ ಬಗ್ಗೆ ತಾತ್ಸಾರ ಮೂಡುವಂತೆ ಮಠಾಧೀಶರು ರಾಜಕಾರಿಣಿಗಳ ಪರ ಮಾತನಾಡುತ್ತಿದ್ದಾರೆ .

ಇದಕ್ಕೆ ಮೂಲ ಕಾರಣ ಯಡಿಯೂರಪ್ಪ.ವಿರೋಧ ಪಕ್ಷದ ನಾಯಕನಾಗಿದ್ದಷ್ಟು ದಿನಗಳ ಕಾಲ ಯಡಿಯೂರಪ್ಪನವರು ಮಾಡಿದ ಕೆಲಸವೆಂದರೆ ಪಕ್ಷ ಸಂಘಟನೆಗೆ ಯಾವುದೇ ಊರಿಗೆ ಹೋಗಲಿ ಆಲ್ಲಿರುವ ಮಠ, ಮಂದಿರ, ಸ್ವಾಮೀಜಿಗಳ ದರ್ಶನಾಶಿರ್ವಾದ ಪಡೆದು ಪುನೀತರಾದದ್ದು.ನಾಡಿನಾದ್ಯಂತ ಇರುವ ಎಲ್ಲಾ ಮಠಾಧೀಶರ ಸಂಪರ್ಕ ಗಳಿಸಿದ್ದು ಯಡಿಯೂರಪ್ಪ ಮುಖ್ಯಮಂತ್ರಿಯಾಗುವ ಹೊತ್ತಿಗೆ ವೀರಶೈವ ಮಠಾಧೀಶರ ಬೆಂಬಲ ಸಿಕ್ಕಿದ್ದು ಇವೆಲ್ಲವೂಗಳೂ ಕಾಕತಾಳೀಯ ಘಟನೆಯಾದರೂ ಇದರ ಸಮರ್ಥ ಲಾಭ ಪಡೆದ ಕರ್ನಾಟಕದ ಏಕೈಕ ವೀರಶೈವ ನಾಯಕನೆಂದರೆ ಯಡಿಯೂರಪ್ಪ.


ವೀರೇಂದ್ರ ಪಾಟೀಲ, ಬೊಮ್ಮಾಯಿ, ಜೆ.ಹೆಚ.ಪಟೇಲ , ಎಂ.ಪಿ.ಪ್ರಕಾಶ ರಂತಹ ವೀರಶೈವ ನಾಯಕರಿದ್ದರೂ ಇಡೀ ವೀರಶೈವ ಸಮುದಾಯದ ಅಭಿವೃಧ್ಧಿಗೆ ಅವರು ಚಿಂತನೆ ನಡೆಸಲಿಲ್ಲ.ವಿವಿಧ ಚಿಂತನೆ,ಸಮಾಜವಾದದ ಹಿನ್ನೆಲೆಯಿಂದ ಬಂದ ಈ ನಾಯಕರು ಎಲ್ಲಾ ಸಮುದಾಯದ ನಾಯಕರಾಗಲು ಹೋಗಿ ವೀರಶೈವರ ನಾಯಕರೂ ಆಗಲಿಲ್ಲ ಕೊನೆಗೆ ಇನ್ನುಳಿದ ಸಮುದಾಯಗಳು ಇವರನ್ನು ನಂಬದೇ ಇವರ ಸಮಾಜವಾದ ಇವರಿಗೆ ಮುಳುವಾಯಿತು. ಸಮಾಜವಾದದ ಸಂದಿಗ್ಧ ಸ್ಥಿತಿಯಲ್ಲಿದ್ದ ಪಟೇಲರನ್ನು ಮತ್ತು ಎಂ.ಪಿ.ಪ್ರಕಾಶರನ್ನ ಯಾವ ಮಠಾಧೀಶರು ಬೆಂಬಲಿಸಲಿಲ್ಲ.ಇಂತಹ ಸಂದರ್ಭದಲ್ಲಿ  ಮಠಾಧೀಶರ ಮತ್ತು ವೀರಶೈವರ ಆಶಾಕಿರಣವಾಗಿ ಗೋಚರಿಸಿದ್ದೇ ಯಡಿಯೂರಪ್ಪ.

ಕಾಂಗ್ರೆಸ್ ವೀರೇಂದ್ರ ಪಾಟೀಲ್ ರನ್ನು ಅಧಿಕಾರದಿಂದ ಕಿತ್ತು ಹಾಕಿದ ನಂತರ,ದೇವೇಗೌಡರ ಕುಟುಂಬ ವೀರಶೈವ ನಾಯಕರನ್ನು ಹಣಿಯತೊಡಗಿದಾಗ , ಕುಮಾರಸ್ವಾಮಿ ಅಧಿಕಾರ ನೀಡದೇ ದ್ರೋಹ ಮಾಡಿದಾಗ ರಾಜ್ಯದ ವೀರಶೈವರಿಗೆ ಅನ್ಯಾಯವಾಯಿತು ಎಂಬಂತೆ ಪ್ರಚಾರ ಮಾಡಿ ಜೊತೆಗೆ ಮಠಾಧೀಶರು ಕೂಡಾ ಒಂದು ಬಾರಿ ನಮ್ಮ ವೀರಶೈವ ಯಡಿಯೂರಪ್ಪ ಅಧಿಕಾರಕ್ಕೆ ಬರಲಿ ಎನ್ನುವ ಮಾತು ಸೇರಿ ಯಡಿಯೂರಪ್ಪ ಮುಖ್ಯಮಂತ್ರಿಯಾದರು.ಆದರೆ ಕರ್ನಾಟಕದ ಮಠಾಧೀಶರ ನಮ್ಮಿಂದಲೇ ಬಿಜೆಪಿ ಆಸ್ತಿತ್ವಕ್ಕೆ ಬಂತು ಎನ್ನುವ ರೀತಿಯಲ್ಲಿ ಯಡಿಯೂರಪ್ಪನನ್ನು , ಮಂತ್ರಿಮಂಡಳವನ್ನು, ಅಧಿಕಾರಿಗಳನ್ನು ಉಪಯೋಗಿಸಕೊಳ್ಳತೊಡಗಿದರು. ಈ ಬಾರಿ ಖುದ್ದು ಮಠಾಧೀಶರೇ ಯಡಿಯೂರಪ್ಪನವರನ್ನು ಬೆಂಬಲಿಸಿದರೂ ಜನತೆ ತಿರಸ್ಕರಿಸುತ್ತಾರೆ ಎಂಬುದನ್ನು ಮಠಾಧೀಶರು ಮರೆಯಬಾರದು.

 ಈ ನಾಡಿನ ಅಸಂಖ್ಯಾತ ಬಡವರಿಗೆ,ದೀನ ದಲಿತರಿಗೆ ಜಾತಿಬೇಧವಿಲ್ಲದೇ ದಾಸೋಹ ಶಿಕ್ಷಣ ನೀಡಿದ ಹಿರಿಮೆ ನಮ್ಮ ಮಠಗಳಿಗೆ ಸಲ್ಲಬೇಕು.ಅಂದು ಜೋಳಿಗೆ ಹಿಡಿದು ಮನೆಮನೆಗೆ ತಿರುಗಿ ಭಿಕ್ಷೆ ಎತ್ತಿ ದಾಸೋಹ ಶಿಕ್ಷಣ ನೀಡಿದ ಸ್ವಾಮೀಜಿಗಳ ಮೌಲ್ಯಗಳು ನಿಮ್ಮ ರಾಜಕಾರಣದ ಪ್ರವೇಶದ ಮೂಲಕ ಹಾಳಾಗುತ್ತಿವೆ.ಇವತ್ತು ಮಠ ಮಾನ್ಯಗಳಿಗೆ ಹಣ ನೀಡಿದಾಗ ವಿರೋಧ ಪಕ್ಷಗಳು ಬೊಬ್ಬೆ ಹಾಕುತ್ತಿವೆ ಆದರೆ ಸರ್ಕಾರ ನೀಡಿದ ಹಣ ಬಡವರ ವಸತಿ ನಿಲಯಕ್ಕೋ ಅಂಧ ಮಕ್ಕಳ ಶಿಕ್ಷಣಕ್ಕೋ ಅನಾಥರ ರಕ್ಷಣೆಗೆ ಬಳಕೆಯಾದರೆ ಸಾರ್ಥಕ . ಅದು ಮಠದ ವಾಣೀಜ್ಯೀಕರಣಕ್ಕೆ ಬಳಕೆಯಾದರೆ ಸಮಾಜ ಒಪ್ಪುವುದಿಲ್ಲ.
ವೀರಶೈವರೊಬ್ಬರು ನಾಡಿನ ಮುಖ್ಯಮಂತ್ರಿಯಾಗಬೇಕೆಂಬ ನಿಮ್ಮ ಹಂಬಲ ಈಡೇರಿದೆ.ಆದರೆ ಭ್ರಷ್ಟಾಚಾರದ ಕೂಪದಲ್ಲಿ ಮುಳುಗಿದ ವ್ಯಕ್ತಿಯನ್ನು ಮುಖ್ಯಮಂತ್ರಿಯಾಗಿ ಮುಂದುವರಿಸಬೇಕೆಂಬ ನಿಮ್ಮ ಆಶಯ ನೆಲದ ಕಾನೂನಿಗೆ ವಿರುಧ್ಧ ಎಂಬುದನ್ನು ಮರೆಯಬಾರದು.ಹಠ ಮಾಡಿ ಮುಖ್ಯಮಂತ್ರಿಯಾಗಲು ಹೊರಟಿರುವ ಯಡಿಯೂರಪ್ಪನವರಿಗೆ ಕರೆದು ಬುಧ್ಧಿ ಹೇಳುವ ದಾಷ್ಟ್ಯತೆ ಪ್ರದರ್ಶನ ಮಾಡಿ ನಿಮ್ಮ ಗೌರವ ಉಳಿಸಿಕೊಳ್ಳಿ.ಮೊದಲು ಯಡಿಯೂರಪ್ಪ ನಿರ್ದೋಷಿಯಾಗಲಿ ಅಲ್ಲವೇ..?
ಕಾಂಗ್ರೆಸ್ ನೊಳಗಿನ ಗುದ್ದಾಟ,ಕಾಲೆಳೆಯುವ ಚಾಳಿ, ಜನತಾದಳದ ಕುಟುಂಬ ರಾಜಕಾರಣ, ಇಲ್ಲಿಯವರೆವಿಗೂ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಗೆಲ್ಲಲು ,ನಡೆಯಲು ಕಾರಣ ಎಂಬುದನ್ನು ಎರಡೂ ಪಕ್ಷಗಳು ಅರಿಯಬೇಕು.ಜನತೆ ಬಿಜೆಪಿ ತಿರಸ್ಕರಿಸಲು ತುದಿಗಾಲಲ್ಲಿ ನಿಂತಿದ್ದರೂ ವಿರೋಧ ಪಕ್ಷಗಳ ಮುಖಂಡರ ಸ್ವ ಪ್ರತಿಷ್ಠೆಯಿಂದಾಗಿ ಜನರ ಆಶಯವನ್ನು ಬಳಸಿಕೊಳ್ಳುವಲ್ಲಿ ಕಾಂಗ್ರೆಸ್,ಜೆಡಿಎಸ್ ಎಡವುತ್ತಿವೆ.ಇನ್ನು ಮುಂದಾದರೂ ಮಠಾಧೀಶರು ಸಮಾಜ ಅಭಿವೃಧ್ಧಿ  ಮಾಡುವ ಜೊತೆಗೆ ನಾಡು ಉಳಿಸಿ ಬೆಳೆಸುವ ನಾಯಕನನ್ನು ಬೆಳೆಸಬಲ್ಲರೇ...?
                                                                                        ಪತ್ರೇಶ್ ಹಿರೇಮಠ್

07 ಡಿಸೆಂಬರ್, 2011

ಬಳ್ಳಾರಿ ಫಲಿತಾಂಶ:ಕರ್ನಾಟಕ ಕಾಂಗ್ರೆಸ್ ಬದಲಾದೀತೇ?

       ಕಾಂಗ್ರೆಸ್ ಗೆ ಕರ್ನಾಟಕ ಕಬ್ಬಿಣದ ಕಡಲೆಯಾಗುತ್ತಿದೆ. ನಾನೊಬ್ಬ ಯುವ ಕಾಂಗ್ರೆಸ್ ಕಾರ್ಯಕರ್ತನಾಗಿ ಹೇಳುವ ಮಾತು. ಬಿಜೆಪಿ ಮತ್ತು ರಾಮುಲು ನಡುವಿನ ಒಳಜಗಳದಲ್ಲಿ ಬಳ್ಳಾರಿಯಲ್ಲಿ ಕಾಂಗ್ರೆಸ್ ಗೆಲ್ಲಬಹುದು ಎಂದು ಇಡೀ ರಾಜ್ಯವೇ ನಿರೀಕ್ಷಿಸಿತ್ತು. ಕಾಂಗ್ರೆಸ್ ನ ಘಟಾನುಘಟಿ ನಾಯಕರೆಲ್ಲಾ ಪ್ರಚಾರ ನಡೆಸಿದರೂ ಕಾಂಗ್ರೆಸ್ ಹಿಂದಿನ ವಿದಾನಸಭಾ ಚುನಾವಣೆಗಿಂತ ಕಡಿಮೆ ಮತಗಳಿಸಿ ಅವಮಾನ ಅನುಭವಿಸಿತು. 

ಮತದಾನ ಎರಡು ಮೂರು ದಿನ ಬಾಕಿ ಇರುವವರೆಗೂ ಅಬ್ಬರದ ವೀರಾವೇಶದ ಪ್ರಚಾರ ನಡೆಸುವ ಕಾಂಗ್ರೆಸ್ ನಾಯಕರು ಮತದಾನ ಹತ್ತಿರವಾದಂತೆ ಬರೀ ತಮ್ಮ ಮಾತುಗಳು, ಆಶ್ವಾಸನೆಗಳನ್ನು ನೀಡುತ್ತಾ ಕ್ಷೇತ್ರ ಬಿಟ್ಟು ತೆರಳುತ್ತಾರೆ. ಯುದ್ಧಕ್ಕೆ ಅಗತ್ಯವಿರುವ ಶಸ್ತ್ರಾಸ್ತ್ರ ಒದಗಿಸದೇ ತಪ್ಪಿಸಿಕೊಳ್ಳುತ್ತಾರೆ ಎಂಬ ಆಪಾದನೆ ಕಾಂಗ್ರೆಸ್ ನಾಯಕರ ಮೇಲಿದೆ. ಚುನಾವಣೆಗೆ ಬಂದು ಪ್ರಚಾರ ಮಾಡುವ ನಾಯಕರು ಕೊನೆಯ ದಿನದ ಕತ್ತಲ ರಾತ್ರಿಯ ಬಗ್ಗೆ ಆಲೋಚಿಸವುದಿಲ್ಲ ಎಂಬುದು ಬಹು ಸಂಖ್ಯಾತ ಕಾಂಗ್ರೆಸ್ ಕಾರ್ಯಕರ್ತರ ಕೊರಗು.ರಾಜ್ಯ ಕಾಂಗ್ರೆಸ್ ನ ಒಬ್ಬ ನಾಯಕರು ಜವಾಬ್ದಾರಿ ಹೊರಲು ತಯಾರಿಲ್ಲ.. ಮುಖ್ಯಮಂತ್ರಿ ಅಭ್ಯರ್ಥಿ ಯಾರು ಎಂದು ಕಾಂಗ್ರೆಸ್ ಹೈಕಮಾಂಡ್ ಸೂಚಿಸಲಿ ಆಗ ನೋಡಿ ಚುನಾವಣೆ ಜವಾಬ್ದಾರಿಯ ಪರಿಸ್ಥಿತಿಯೇ ಬದಲಾಗುತ್ತದೆ. ಮುಖ್ಯಮಂತ್ರಿ ಅಭ್ಯರ್ಥಿಯಾದವರು ಇಡೀ ವ್ಯವಸ್ಥೆಯ ನಿರ್ವಹಣೆ ಮಾಡುತ್ತಾರೆ. ಅಭ್ಯರ್ಥಿಯ ಆಯ್ಕೆಯಿಂದ ಹಿಡಿದು ಜವಾಬ್ದಾರಿ ನೀಡುವವರೆಗೆ ಕಾಂಗ್ರೆಸ್ ನ ವಿಳಂಬ ನೀತಿ ಕಾಂಗ್ರೆಸ್ ಸೋಲಲು ಕಾರಣವಾಗುತ್ತಿದೆ.
 
ಅಭ್ಯರ್ಥಿಯನ್ನು ಎಲ್ಲೋ ಕುಳಿತು ನೇಮಕಗೊಳಿಸುವುದು, ಗೆಲ್ಲುವ ಅಭ್ಯರ್ಥಿಯನ್ನು ಸಾಮಾಜಿಕ ನ್ಯಾಯದ ಕಾರಣಗಳಿಗಾಗಿ ಹಿಂದೆ ಸರಿಸಿ ಬೇರೊಬ್ಬರಿಗೆ ಅವಕಾಶ ನೀಡುವುದು ಕೂಡಾ ಕಾಂಗ್ರೆಸ್ ನಲ್ಲಿ ಕ್ರಿಯಾಶೀಲ ನಾಯಕರು ಸಂಘಟನೆಯಿಂದ ಹಿಂದೆ ಸರಿಯುವ ವಾತಾವರಣ ನಿರ್ಮಾಣವಾಗಿದೆ.ಹಿಂದಿನ ಕಾಂಗ್ರೆಸ್ ತನ್ನದೇ ಆದ ಮತ ಬ್ಯಾಂಕ್ ಹೊಂದಿತ್ತು. ಅಂದಿನ ಕಾಂಗ್ರೆಸ್ ನ ಸಾಂಪ್ರದಾಯಿಕ ಮತಗಳು ಇಂದಿನ ಹಣದ ಮೆರವಣಿಗೆಯಲ್ಲಿ ಎತ್ತಲೋ ಸಾಗುತ್ತಿವೆ.

ಚುನಾವಣೆಯಲ್ಲಿ ಮಾತ್ರ ಕ್ಷೇತ್ರಗಳಿಗೆ ಆಗಮಿಸಿ ಮತ್ತೆ ತಿರುಗಿ ಜಿಲ್ಲೆ ಮತ್ತು ಜನರತ್ತ ನೋಡದ ನಾಯಕರ ಸಂಖ್ಯೆಯೂ ಕಾಂಗ್ರೆಸ್ ನಲ್ಲಿ ಹೆಚ್ಚಾಗುತ್ತಿದೆ.ಚುನಾವಣೆಯಲ್ಲಿ ಭಯಂಕರ ಭಾಷಣ ಮಾಡುವ ನಾಯಕರು ಮತ್ತೆ ಜಿಲ್ಲೆಗೆ ಬರುವುದು ಮತ್ತೆ ಚುನಾವಣೆ ಬಂದಾಗಲೇ ಎಂಬುದು ಗಮನಾರ್ಹ. ಹಣಬಲವುಳ್ಳ ನಾಯಕರು ದೆಹಲಿ ಮಟ್ಟದಲ್ಲಿ ಉತ್ತಮ ಸಂಪರ್ಕಗಳ ಮೂಲಕ ಉನ್ನತ ಹುದ್ದೆ ಪಡೆಯುವ ಮೂಲಕ ಬಲಿಷ್ಠರಾಗುತ್ತಿದ್ದಾರೆ. ಇತ್ತ ಜಿಲ್ಲೆ ಮತ್ತು ಕ್ಷೇತ್ರ ಮಟ್ಟದಲ್ಲಿ ಕಾರ್ಯಕರ್ತರೊಂದಿಗೆ ನಿರಂತರ ಸಂಪರ್ಕವಿಟ್ಟುಕೊಂಡು, ಕಾರ್ಯಕರ್ತರ ಕಷ್ಟ ಸುಖಗಳಿಗೆ ಸ್ಪಂದಿಸುತ್ತಲೇ ಅವರು ಜಿಲ್ಲೆಯನ್ನು ದಾಟದೇ ಕಾಂಗ್ರೆಸ್ ನ ವೀಕ್ಷಕರೆಂಬ ಬಿಳಿಯಾನೆಗಳಿಗೆ ತಲುಪುವುದಿಲ್ಲ. ವೀಕ್ಷಕರೆಂಬ ಬಿಳಿಯಾನೆಗಳು ಪಕ್ಷಕ್ಕೆ ತಳಮಟ್ಟದಲ್ಲಿ ಸಂಘಟಿಸಲು ಶ್ರಮಿಸುವ ಇಂತವರು ಹೈಕಮಾಂಡ್ ಬಳಿಯೂ ಸುಳಿಯುವುದಿಲ್ಲ.

ಹೈಕಮಾಂಡ್ ನ ಸುತ್ತಲೂ ಇರುವ ನಾಯಕರ ಕೃಪಾ ಕಟಾಕ್ಷ ಹೊಂದಿರುವ ಸ್ವಯಂ ಘೋಷಿತ ನಾಯಕರು, ಸುಖಾ ಸುಮ್ಮನೆ ಶ್ರೀ ಮತಿ ಸೋನಿಯಾ ಗಾಂಧಿಯವರನ್ನು ಮತ್ತು ರಾಹುಲ್ ಗಾಂದಿಯವರನ್ನು ಹೊಗಳಿ ಉನ್ನತ ಸ್ಥಾನಕ್ಕೇರುವವರ ಸಂಖ್ಯೆ ಹೆಚ್ಚಾಗುತ್ತಿದೆ.

ಇನ್ನು ಮುಂದಾದರೂ ಕರ್ನಾಟಕ ಕಾಂಗ್ರೆಸ್ ಸಂಘಟಿಸುವ ಯುವಕರಿಗೆ ಪ್ರೋತ್ಸಾಹ ನೀಡುವ ಜೊತೆಗೆ, ಸಾಮಾಜಿಕ ನ್ಯಾಯವೆಂಬ ಒಳ್ಳೆಯ ಸಿದ್ಧಾಂತದಡಿ ಕ್ರಿಯಾಶೀಲ  ನಾಯಕರನ್ನು ಹಿಂದೆ ಸರಿಸದೇ, ಚತುರ ಹಾಗೂ ಜನರ ನಡುವೆ ಬೆರೆಯುವ ಕ್ರಿಯಾಶೀಲ ನಾಯಕರಿಗೆ ಆದ್ಯತೆ ನೀಡಬೇಕಿದೆ. ಜನರ ನಡುವಿರುವ ಜನನಾಯಕರಿಗೆ ಚುನಾವಣೆ ಜವಾಬ್ದಾರಿ ನೀಡಬೇಕಿದೆ.
ಬಳ್ಳಾರಿ ಚುನಾವಣೆ ಫಲಿತಾಂಶ ಇನ್ನು ಮುಂದಾದರೂ ಕಾಂಗ್ರೆಸ್ ಪಥ ಬದಲಿಸಿ.. ಹೊಸ ಹಾದಿ ಹಿಡಿಯಬಹುದೇ..?
                                                   ಪತ್ರೇಶ್ ಹಿರೇಮಠ್

12 ಆಗಸ್ಟ್, 2011

ಸ್ವರೂಪ್ ಕೊಟ್ಟೂರ್ ಲೇಖನ-ಗಣಿಗಾರಿಕೆ ಸ್ಥಗಿತ ಸಂಡೂರಿನ ಮಡಿಲಲ್ಲಿ ಕಳೆದ ಒಂದು ದಿನದ ಅನುಭವದ ಮೆಲಕು

ಗಣಿಗಾರಿಕೆಯಿಂದ ಅಗಣಿತ ಅರಣ್ಯ ಸಂಪತ್ತು ಕರಗಿ ಹೋಗಿರುವ ಸಂಡೂರಿನಲ್ಲಿ ಈಗ ಮೌನ. ``ಕುಂಬಾರನಿಗೆ ವರುಷ ದೊಣ್ಣೆಗೆ ನಿಮಿಷ" ಎಂಬ ಗಾದೆ ಬಳ್ಳಾರಿಯ ಸದ್ಯದ ಸ್ಥಿತಿಗೆ ಅನ್ವರ್ಥ ಅನ್ನಿಸುತ್ತದೆ ಅಲ್ವಾ? ಅದರಲ್ಲೂ ಕಳೆದ ದಶಕಗಳಿಂದ ನಡೆದ ಗಣಿಗಾರಿಕೆಯ ಭರಾಟೆಯಿಂದ ಬಳ್ಳಾರಿ ತರಗುಟ್ಟಿ ಹೋಯಿತು. ಆದರೆ ಈಗ ಕೊಂಚ ನಿರಾಳ!! ನಿಟ್ಟುಸಿರು!!. ಈಗ ಇಲ್ಲಿಯ ಚರಿತ್ರೆಯಲ್ಲಿ ಗಣಿಗಾರಿಕೆಗೆ ಜಾಗವಿಲ್ಲ. ಗಣಿಗಾರಿಕೆ ಮತ್ತು ಅದಿರು ಹೊತ್ತ ಲಾರಿಗಳು ಅಪ್ಪಿ-ತಪ್ಪಿಯೂ ಕಣ್ಣಿಗೆ ಬೀಳುವುದಿಲ್ಲ. ಗಣಿ ಬಾವಿಗಳೆಲ್ಲಾ ಧಣಿವು ಆರಿಸಿಕೊಳ್ಳುತ್ತಿವೆ. ಗಣಿಗಾರಿಕೆಯಲ್ಲಿ ಸಕ್ರೀಯವಾಗಿದ್ದ ಮಾನವ ಹಾಗೂ ಮಿಷನರಿ ಸಂಪನ್ಮೂಲಗಳೆಲ್ಲಾ ಜಡಭರಿತವಾಗಿ ಹೋಗಿವೆ. ಒಂದು ಕಾಲದಲ್ಲಿ ಘರ್ಜಿಸುತ್ತಿದ್ದ ಇವರೆಲ್ಲಾ ಈಗ ಮಕಾಡೆ ಮಲಗಿದ್ದಾರೆ. ಈಗ ಯಾರಾ ಭಯವಿಲ್ಲದೆ ನಿರಾತಂಕವಾಗಿ ಗಣಿಗಾರಿಕೆ ಕರಾಳ ರೂಪವನ್ನು ನೋಡುವ ಸೌಭಾಗ್ಯ!!. ಗಣಿಗಾರಿಕೆ ನಡೆದ ಸ್ಥಳಗಳನ್ನು ನೋಡುತ್ತಾ ಸಾಗಿದಂತೆಲ್ಲಾ ಮನಸ್ಸು ಮರಗುತ್ತಾ ಹೋಗುತ್ತದೆ. ಬಯಲು ಸೀಮೆಯ ಮಲೆನಾಡನ್ನು ಕೆಲವೇ ವರ್ಷಗಳಲ್ಲಿ ಬಟಾ ಬಯಲು ಮಾಡಿದ ಈ ಅಕ್ರಮ ಸಕ್ರಮ ಗಣಿಗಾರಿಕೆ ಭೂತಕ್ಕೆ ಬಲಿಯಾದದ್ದು ಮಾತ್ರ ಶತಮಾನಗಳ ಪಾಕೃತಿಕ ಸಂಪತ್ತು. 
ಸರ್ಕಾರದ ಅದಿರು ರಫ್ತು ನಿಷೇಧ, ಸಿ.ಇ.ಸಿ ಹಾಗೂ ಜಂಟಿ ಗಣಿ ಸರ್ವೆ ತಂಡಗಳ, ಲೋಕಾಯುಕ್ತರ  ನಿರಂತರ ಕಾರ್ಯಚರಣೆ, ಪರಿಸರ ವಾದಿಗಳ ಅಚಲ ಹೊರಾಟ, ಹಸಿರು ಪೀಠದ ಕಟ್ಟಾಜ್ಞೆ, ಇವೆಲ್ಲಾದರ ಪರಿಣಾಮ ಸಂಡೂರಿನ ಗಣಿಗಾರಿಕೆಯ ಸದ್ದು ಅಡಗಿಸಿದೆ. ನೀವು ನಂಬಲ್ಲ. ಒಂದು ಕಾಲದಲ್ಲಿ ಮುಗಿಲು ಚುಂಬಿಸಲು ತವಕಿಸುತ್ತಿದ್ದ ಬೆಟ್ಟಗಳು ಈಗ ಕರಗಿ ಹೋಗಿವೆ. ಸಮತಟ್ಟಾದ ಜಾಗಗಳೆಲ್ಲಾ ಅದಿರಿನ ರಾಶಿಯಾಗಿವೆ. ಗಣಿಧಣಿಗಳ ಪೈಶಾಚಿಕ ಕೃತ್ಯಕ್ಕೆ ಹಸಿರ ನಾಡೆಲ್ಲಾ ಬರಡಾಗಿದೆ. ಭೂಮಿಯನ್ನು ಅನೇಕ ಪದರು-ಪದರುಗಳನ್ನಾಗಿ ಮಾಡಿ ಪಾತಳದವರೆಗೂ ಅದಿರನ್ನು ತೆಗೆಯುವ ಪ್ರಯತ್ನ ಇದುವರೆಗೆ ನಿರಾಂತಕವಾಗಿ ಸಾಗಿದ್ದನ್ನು ಈಗ ನೋಡಿಯೇ ಅನುಭವಕ್ಕೆ ತಂದುಕೊಳ್ಳಬೇಕು. ಹೊರಗಿನವರು ಸಂಡೂರಿಗೆ ಬಂದರೆ ಗರಬಡಿದು ಹೋಗುವುದರಲ್ಲಿ ಅನುಮಾನವೇ ಇಲ್ಲ. ಇಲ್ಲಿಯ ಪ್ರಭಾವಿ ವ್ಯಕ್ತಿಗಳು ತಮ್ಮ ಅತಿ ಆಸೆಗೆ ರೆಕ್ಕೆ ಪುಕ್ಕ ಕಟ್ಟಿ ಕಾನೂನಿನ ಕಣ್ಣಿಗೆ ಮಣ್ಣೆರಚಿ ಹಣ ಬಾಚುವುದಕ್ಕೆ ಅರಣ್ಯವನ್ನೇ ಸರ್ವನಾಶ ಮಾಡಿರುವುದು ಯಾವ ನ್ಯಾಯ? ಇಲ್ಲಿನ ಸಂಪತ್ತನ್ನು ಕೇವಲ ಲಾಭದ ದೃಷ್ಠಿಯಿಂದ ನೋಡಿದ ಗಣಿಧಣಿಗಳು ಪ್ರತಿಯಾಗಿ ಪ್ರಕೃತಿಯ ಲಾಲನೆಗಾಗಿ ಕೈಗೊಂಡ ಕ್ರಮಗಳು ಮಾತ್ರ ಶೂನ್ಯ. 
ಒಂದು ಕಾಲದಲ್ಲಿ ಬಿ.ಪಿ.ಎಲ್ ಕಾರ್ಡ್ ಹೊಂದಿದ್ದ ಅನೇಕರು ಗಣಿಕಾರಿಕೆ ಮಾಡಿ ಲಕ್ಷ್ಮೀ ಪುತ್ರರಾಗಿ ಹೋಗಿದ್ದಾರೆ. ಆದರೆ ಗಣಿಗಾರಿಕೆಯ ಸುತ್ತಾ-ಮುತ್ತಾ ವಾಸಿಸುವ ಜನರ ಬದುಕು ಇನ್ನೂ ಭರ್ಭರ. ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಪಾಳೆಗಾರಿಕೆ, ನಿರಂಕುಶತ್ವವನ್ನು ಒಪ್ಪಿಕೊಳ್ಳಬೇಕಾದ ಅನಿವಾರ್ಯತೆ ಇವರದ್ದು. ಇಲ್ಲಿಯವರು ಗಣಿಧಣಿಗಳ ಕಪಿಮುಷ್ಠಿಯಲ್ಲಿ ಸಿಕ್ಕಿ ಹಾಕಿಕೊಂಡು ಅವರ ಶೋಷಣೆಗೆ ನಲುಗಿ ಹೋಗಿದ್ದಾರೆ. ಇವರ ಕೂಗು ಈ ಗಣಿಯ ಮಣ್ಣಲ್ಲಿ ಮಣ್ಣಾಗಿ ಹೋಗುತ್ತಿರುವುದು ದೊಡ್ಡ ದುರಂತವೇ ಸರಿ. ಅಂದಹಾಗೆ ಇವರೇನು ಬಿಕಾರಿಗಳಲ್ಲ. ಚಿನ್ನದಷ್ಟೆ ಬೆಲೆ ಬಾಳುವ ಭೂಮಿಯ ಒಡೆಯರಾಗಿದ್ದರೂ ಒಪ್ಪತ್ತು ಊಟಕ್ಕೆ ಪರಿತಪಿಸಬೇಕಾದ ಸಂದ್ಗಿತೆ. ಈ ಅಮಾಯಕರಿಗೆ ಐದಾರು ಸಾವಿರ ರೂ ನೀಡಿ ಆಸೆಗಳನ್ನು ಮೂಗಿಗೆ ಸವರಿ ಇವರ ಬದುಕನ್ನೇ ಸರ್ವನಾಶ ಮಾಡಿದ್ದಾರೆ ಈ ಗಣಿ ಧಣಿಗಳು. ರಾತ್ರಿ ಕಳೆದು ಬೆಳಗಾಗುವುದರೊಳೆಗೆ ಈ ರೈತರ ಜಮೀನು ಮತ್ಯಾರದ್ದೋ ಆಗಲಿದೆ.!! ರೈತರು, ಅಬಲರು ಇಲ್ಲಿ ಗಣಿಧಣಿಗಳ ಮುಂದೆ ದುರ್ಬಲರಾಗುತ್ತಾರೆ. ಇವರ ದಬ್ಬಾಳಿಕೆ ದ್ವನಿ ಎತ್ತದೆ ಮೂಕರಂತೆ ನೋವುಂಡು ತಮ್ಮನ್ನೇ ತಾವು ಸಾಂತ್ವಾನ ಮಾಡಿಕೊಳ್ಳುತ್ತಾರೆ. ಇಲ್ಲಿನ ಅನೇಕ ರೈತರ ಸಾವಿರಾರು ಎಕರೆಗಳು ಈ ಅಕ್ರಮ ಗಣಿಗಾರಿಕೆಯ ಪಾಲಾಗಿರುವುದು ಅಕ್ಷರಸಃ ಸತ್ಯ. ಇದಕ್ಕೆ ಗಣಿಗಾರಿಕೆಯಿಂದ ದ್ವೀಪವಾದ ``ಕಮತ್ತೂರು" ಒಂದು ಜ್ವಲಂತ ಉದಾಹರಣೆ. ಇಲ್ಲಿಯ ಪ್ರತಿಯೊಬ್ಬರದ್ದೂ ಒಂದೊಂದು ಕಥೆ - ವ್ಯಥೆ ಇದೆ. ಮನಸ್ಸು ದುಖ ದುಮ್ಮಾನಗಳಿಂದ ಮಡುಗಟ್ಟಿದೆ. ಮಾತನಾಡಿಸಿದರೆ ಸಾಕು ಇವರ ಸಹನೆಯ ಕಟ್ಟೆ ಹೊಡೆಯುತ್ತದೆ. ಭಾರ ತುಂಬಿದ ಮಾತುಗಳು ಅಪ್ಪಳಿಸುತ್ತವೆ. ಆಕ್ರೋಶ ಆಕ್ರಂಧನ ಮುಗಿಲು ಮುಟ್ಟುತ್ತದೆ. ಅಳುವುದಕ್ಕೂ ಇವರ ಕಂಗಳಲ್ಲಿ ಕಣ್ಣಿರು ಇಲ್ಲ. ಯಾಕೆಂದರೆ ಕಣ್ಣಿರೆಲ್ಲಾ ಬತ್ತಿ ಹೋಗಿವೆ. ಇಲ್ಲಿಯವರು ಮೂಲಭೂತ ಸೌಕರ್ಯ ವಂಚಿತವಾಗಿದ್ದು ಇವರ ಬದುಕು ಬೆಂಗಾಡಾಗಿದೆ. ಇಲ್ಲಿ ಎಲ್ಲವೂ ಆಯೋಮಯ. ಇಂತಹ ಹತ್ತಾರು ಜ್ವಲಂತ ಉದಾಹರಣೆ ಈ ಗಣಿಗಾರಿಕೆ ಸುತ್ತಾ-ಮುತ್ತಾ ನಡೆದಾಡಿದರೆ ಕಣ್ಣಿಗೆ ಬೀಳುತ್ತವೆ. 

ಇದಿಷ್ಟು ಒಂದಡೆಯಾದರೆ ಮೊತ್ತೊಂದಡೆ ಅದಗೆಟ್ಟ, ಕಡಿದಾದ, ದುರ್ಗಮ ರಸ್ತೆಗಳು ಪ್ರಯಾಣಿಕರನ್ನು ಪರದಾಡುವಂತೆ ಮಾಡುತ್ತವೆ. ಮನಸ್ಸು ಮಾಡಿದ್ದರೆ ಗಣಿ ಕಂಪನಿಗಳು ಈ ರಸ್ತೆಗಳನ್ನು ರಹದಾರಿಗಳನ್ನಾಗಿ ಮಾಡಬಹುದಿತ್ತು. ಆದರೆ ಗಣಿಧಣಿಗಳ ಇಚ್ಚಾಶಕ್ತಿಯ ಕೊರತೆ ಹಾಗೂ ಸ್ವಾರ್ಥದ ಸೆಲೆಯಲ್ಲಿ ಇದು ನಗಣ್ಯವಾಗಿದ್ದು ದೊಡ್ಡ ದುರಂತ. ಫಲವಾಗಿ ಇಂದಿಗೂ ಗಣಿಗಾರಿಕೆ, ಅದರು ಸಾಗಾಣಿಕೆ ಮಾಡುತ್ತಿದ್ದ ರಸ್ತೆಗಳು ಮೃತ್ಯು ಕೂಪಗಳಾಗಿವೆ. ಅಳವಾದ ಗುಂಡಿಗಳಲ್ಲಿ ರಸ್ತೆಗಳನ್ನು ಹುಡುಕಬೇಕಾದ ವ್ಯರ್ಥ ಪ್ರಯತ್ನ ಮಾಡಬೇಕಾಗಿದೆ. ಗಣಿಗಾರಿಕೆಗೆ ಅಂಕೆ ಬಿದ್ದಿದ್ದರಿಂದ ಕೊಂಚ ನಿರಾಳ ನಿಟ್ಟುಸಿರು ಬಿಡಬಹುದಾಗಿದೆ. ಜೊತೆ-ಜೊತೆಗೆ ಜರ್ಜಿರತವಾಗಿದ್ದ ಇಲ್ಲಿನ ಪ್ರಕೃತಿ ಮಾತೆ ಮೆಲ್ಲಗೆ ಮೈದಳೆಯುತ್ತಿದ್ದಾಳೆ. ಸಂಡೂರಿನ ಸುತ್ತಾ-ಮುತ್ತಾ ಹೊಸ ಮನ್ವಂತರ ಶ್ರಾವಣ ಮಾಸದ ಪ್ರಾರಂಭದೊಂದಿಗೆ ಶುರುವಾಗಿದೆ.
ಯಾವಗಾಲೂ ಮೋಡ ಕವಿದ ವಾತಾವರಣ, ಜೊತೆಗೆ ಕೂಲ್ ಕೂಲ್ ಹವಾಮಾನ. ಬೀಸುವ ತಂಗಾಳಿ, ತುಂತುರು ಮಳೆ, ಸೂರ್ಯನ ನೆರಳು-ಬೆಳಕಿನ ಆಟ, ತನ್ನ ಮೂಲ ರೂಪಕ್ಕೆ ಬರುತ್ತಿರುವ ಇಲ್ಲಿನ ಸಸ್ಸ ಸಂಕುಲ,ಪಕ್ಷಿಗಳ ಇಂಚರ, ಕೋತಿಗಳ ಚಿನ್ನಾಟ, ನವಿಲುಗಳ ನಾಟ್ಯ ಮನಸ್ಸಿಗೆ ಮುದ ನೀಡುತ್ತದೆ. ಸ್ಟಾಕ್ ಯಾರ್ಡ್ ಗಳಾಗಿದ್ದ ಬೇಸಾಯದ ಭೂವಿಗಳೆಲ್ಲಾ ಮತ್ತೇ ಬೆಳೆಗಳಿಂದ ನಳನಳಿಸುತ್ತಿವೆ. ನೇಗಿಲ ಯೋಗಿ ಹೊಲಗಳಲ್ಲಿ ಉಳುಮೆ ಮಾಡುತ್ತಿದ್ದಾನೆ. ಸ್ವಚ್ಚಂದ ಪರಿಸರಕ್ಕೆ ಇಲ್ಲಿಯವರು ಮೈ ತೆರೆದುಕೊಳ್ಳುತ್ತಿದ್ದಾರೆ. ವಾಕಿಂಗ್ ನ ಸುಖ ಅನುಭವಿಸುತ್ತಿದ್ದಾರೆ. ಕಪಾಟು ಸೇರಿದ್ದ ಬಿಳಿ ಬಟ್ಟೆಗಳೆಲ್ಲಾ ಮೈ ಮೇಲೆ ಕಾಣುತ್ತಿವೆ. ಕೆಮ್ಮು ದಮ್ಮು ನಿಧಾನವಾಗಿ ದೂರವಾಗುತ್ತಿದೆ. ರಸ್ತೆಯ ತುಂಬೆಲ್ಲಾ ಅದಿರು ಲಾರಿಗಳು ಅವರಿಸಿಕೊಳ್ಳುತ್ತಿದ್ದ ಕ್ಷಣಗಳು ಮಾಯವಾಗಿ ದನ-ಕರುಗಳು ಅಡ್ಡಾದಿಡ್ಡಿ ಬರುತ್ತವೆ. ನೆಪಥ್ಯಕ್ಕೆ ಸರಿದಿದ್ದ ಬಯಲು ಸೀಮೆಯ ಮಲೆನಾಡು ಮತ್ತೆ ಆಗತವಾಗು ಎಲ್ಲಾ ಲಕ್ಷಣಗಳು ಗೋಚರವಾಗುತ್ತಿವೆ. ಎಲ್ಲಾ ಪ್ರಾಣಿ-ಪಶು-ಪಕ್ಷಿಗಳು ಸ್ವಂಚ್ಚಂದವಾಗಿ ನಡೆದಾಡುತ್ತಿವೆ. ಕಾಡಿನ ಮಧ್ಯೆ ಅಲ್ಲಲ್ಲಿ ನೀರಿನ ಸೆಲೆಗಳು ನಮ್ಮನ್ನು ಸೆಳೆಯುತ್ತವೆ. ಒಟ್ಟಿನಲ್ಲಿ ಇಷ್ಟು ದಿನ ನಡೆದ ಗಣಿಕಾರಿಕೆಯಿಂದ ಅದಗೆಟ್ಟ ಪರಿಸರ ತಿಬ್ಬಳಿಸಿಕೊಳ್ಳುತ್ತಿದೆ. ಆದರೆ ಗಣಿಕಾರಿತಯನ್ನೇ ಆಶ್ರಯಿಸಿ ಬದುಕುತ್ತಿರುವ ಅನೇಕರ ಬದುಕು ಬೀದಿಗೆ ಬಂದಿರುವುದೂ ಸಹ ಅಷ್ಟೇ ವಾಸ್ತವ. ಅದರೆ ಅರಣ್ಯ ನಾಶದಿಂದ ನಮ್ಮ ಬದುಕನ್ನು ಕಟ್ಟಿಕೊಳ್ಳುತ್ತೇವೆ ಎನ್ನುವುದು ನಮ್ಮ ಭ್ರಮೆ ಅಲ್ಲದೆ ಮತ್ತೇನು?

ಇದೆಲ್ಲಾ ಇತ್ತೀಚೆಗೆ ನಾನು ಸುವರ್ಣ 24*7 ನೇದ್ದರ ಕವರೇಜ್ ಸ್ಟೋರಿಯ ವರದಿಗಾರರಾದ ಮೇಡಮ್ ವಿಜಯಲಕ್ಷ್ಮೀಯವರೊಂದಿಗೆ ಸಂಡೂರನ್ನು ಸುತ್ತು ಹಾಕಿದಾಗ ನನ್ನ ಅನುಭವಕ್ಕೆ ಬಂದ ಸಂಗತಿಗಳು. ಇವರೊಂದಿಗೆ ಸಂಡೂರಿನ ಪರಿಸರವಾದಿಗಳಾದ ಶ್ರೀ ಟಿ.ಎಂ ಶಿವಕುಮಾರ್, ಮೂಲಿಮನಿ ಈರಣ್ಣ, ಶ್ರೀಶೈಲ ಮತ್ತು ಸುವರ್ಣದ ಕ್ಯಾಮರಮೆನ್ ಗಳು ಜೊತೆಗಿದ್ದರು. ಯಾದಗಿರಿಯ ಸುವರ್ಣ ವರದಿಗಾರರ ಶ್ರೀ ಅನಂದ ಸೌಧಿ ಇಂತಹ ಒಂದು ಅದ್ಭುತ ಅನುಭವ ಪಡೆಯಲು ಕಾರಣರಾಗಿದ್ದು, ಥ್ಯಾಕ್ಸ್ ಟೂ ಯೂ ಸರ್,

. ಕಾಡು ಇದ್ದರೆ ನಾವು. ಕಾಡನ್ನು ರಕ್ಷಿಸಿದರೆ ಕಾಡು ನಮ್ಮನ್ನು ಕಾಯುತ್ತದೆ. ಈಗಲಾದರೂ ನಮ್ಮ ದುರಾಸೆ, ಎಲ್ಲಾ ಅನಾವಶ್ಯಕ ಅವಶ್ಯಕತೆಗಳನ್ನು ಬದಿಗೊತ್ತಿ ಕಾಡು ಕಾಪಾಡುವ ಕೆಲಸ ಮಾಡೋಣ. ನಾವೆಲ್ಲಾ ಇನ್ನಾದರೂ ಈ ಪ್ರಾಕೃತಿಕ ಸಂಪತ್ತನ್ನು ಉಳಿಸಿ ಬೆಳಸಿಕೊಳ್ಳುವತ್ತ ಮನಸ್ಸು ಮಾಡೋಣ. ಪ್ಲೀಸ್ ಪ್ಲೀಸ್ ಕಾಡು ಬೆಳಸಿ ನಾಡು ಉಳಿಸಿ. 

08 ಆಗಸ್ಟ್, 2011

ರವಿ ಬೆಳಗೆರೆ ಭಾಷೆಯೂ ಮತ್ತು ಸಿಎಂ ಸದಾನಂದಗೌಡರೂ...

ಕರ್ನಾಟಕಕ್ಕೆ ಸಾಹಿತ್ಯದ ವಿಷಯದಲ್ಲೇ ಏಳು ಜ್ಞಾನಪೀಠ ಪ್ರಶಸ್ತಿ ಪಡೆದುಕೊಂಡಿದೆ. ಇಲ್ಲಿ ಒಳ್ಳೆಯ ಬರಹಗಾರರಿದ್ದಾರೆ. ಜೊತೆಗೆ ಬರಹವನ್ನು  ವಿಚಿತ್ರ ಶಬ್ದಗಳ ಬಳಕೆಯಿಂದ ಪತ್ರಿಕೆಯ ಮುಖಪುಟಕ್ಕೆ ಶೀರ್ಷಿಕೆ ನೀಡಿ ಜನರು ತಿರುಗಿ ನೋಡುವಂತೆ ಮಾಡಿರುವ ಸಂಪಾದಕರೂ ಇದ್ದಾರೆ. ಈ ವಾರದ ಹಾಯ್ ಬೆಂಗಳೂರ್ ನೋಡಿದರೆ ಈ ಸಂಗತಿ ನಮಗೆ ವಿದಿತವಾಗುತ್ತದೆ. ದೊಡ್ಡ ರಾಜಕಾರಿಣಿಗಳ ಸಂಬಂಧಗಳನ್ನು ಇದ್ದೋ ಇಲ್ಲದೆಯೋ ವಿಜೃಂಭಿಸುತ್ತಾ ಆ ವಿಷಯ ಬರುಬರುತ್ತಾ ಜನಸಾಮಾನ್ಯರಿಗೂ ವಾಕರಿಕೆಯಾಗಿ ಅಂತಹ ಸಂಬಂಧಗಳನ್ನು ಜನತೆ ಒಪ್ಪುವ ಮಟ್ಟಕ್ಕೆ ಪತ್ರಿಕೆಗಳು ಪ್ರಚಾರ ನೀಡುತ್ತಿವೆ. ಈ ಹಿಂದೆ ಕುಮಾರಸ್ವಾಮಿ ವಿಷಯವನ್ನು ಹೀಗೆ ಅನಗತ್ಯವಾಗಿ ತರಲಾಗತಿತ್ತು. ಯಾರನ್ನೋ ರಂಜಿಸಲು, ಯಾರನ್ನೋ ತೃಪ್ತಿ ಪಡಿಸಲು ಶಬ್ದಗಳನ್ನು ಬಳಸುವಾಗ  ಎಲ್ಲರೂ ಹಿತಮಿತ ಕಾಯುವುದು ಅವಶ್ಯ. ನಾಡಿನಲ್ಲಿ ಪತ್ರಿಕೋದ್ಯಮದಲ್ಲಿ ಪ್ರಖ್ಯಾತರಾದ ಎಲ್ಲಾ ಪ್ರಮುಖ ಪತ್ರಿಕೆಗಳ ಸಂಪಾದಕರು ಯಾಕೆ ಇಂತಹ ಎಡವಟ್ಟು ಮಾಡುತ್ತಾರೋ ಗೊತ್ತಿಲ್ಲ... ಕಷ್ಟ ಸುಖ ಕೀರ್ತಿ,ಅಪಕೀರ್ತಿ ಎಲ್ಲಾ ಅನುಭವಿಸಿದ ಪತ್ರಕರ್ತರೇ ಅಸಹ್ಯ ಶಬ್ದ ಬಳಸಿ ನಾಡಿನ ಪ್ರಮುಖರನ್ನು ಹೀಯಾಳಿಸುವುದು ತರವಲ್ಲ... ರಾಜಕಾರಿಣಿಗಳ ಭ್ರಷ್ಟತನದ ಬಗ್ಗೆ ಅವರ ಕುಟುಂಬದ ಭ್ರಷ್ಟತೆಯ ಬಗ್ಗೆ ಬರೆದರೆ ಕರ್ನಾಟಕದ ಜನತೆ ಖುಷಿ ಪಡುತ್ತಾರೆ. 
        ಒಬ್ಬ ಪತ್ರಕರ್ತ ಗಣಿಲೂಟಿಯನ್ನು ನೋಡಿ ಮೈನಿಂಗ ಮಾಫಿಯಾ ಅಂತ ಬರೆದರೆ ಅದಕ್ಕೆ ವಿರುದ್ಧವಾಗಿ ಅವರ ಜೊತೆ ನಲವತ್ತು ಕಳ್ಳರನ್ನು ಸೇರಿಸಿ ಮತ್ತೊಂದು ಪುಸ್ತಕ ಬರೆದು ಮೊದಲಿನ ಪುಸ್ತಕದಲ್ಲಿರುವವರು ಕಡಿಮೆ ಭ್ರಷ್ಟರು, ನಾನು ಬರೆದಿದ್ದೇನಲ್ಲ ಅದರಲ್ಲಿ ತಿಮಿಂಗಿಲಗಳಿವೆ ಎಂದು ಸಂಪಾದಕೀಯದಲ್ಲಿ ಬರೆಯುತ್ತಾರೆ. ಇತ್ತೀಚೆಗೆ ಗಣಿ ಸಂಬಂಧಿತ ವರದಿಯಲ್ಲಿ ಅಂತಾಹುದ್ದೇನಿಲ್ಲ... ಮುಂದೆ ನೋಡಿ ನಾನು ಸಮಗ್ರ ವಿವರಗಳ ಒಂದು ಪುಸ್ತಕ ತರುತ್ತೇನೆ ಎನ್ನುವ ಬೆಳೆಗೆರೆ ನ್ಯಾಯಮೂರ್ತಿ ಹೆಗಡೆ ಅವರನ್ನೇ ಅನುಮಾನದಿಂದ ನೋಡಿದ್ದಾರೆ. ಕರ್ನಾಟಕದ ಜನತೆ ಹೆಗಡೆಯವರ ಬಗ್ಗೆ ಅಪಾರ ಗೌರವ ಹೊಂದಿರುವಾಗ ತಮ್ಮ ಪತ್ರಿಕೆಯಲ್ಲಿ ಈ ರೀತಿ ಬರೆಯುವುದು ಅವರಿಗೆ ಮುಜುಗರ ನೀಡಿತೋ ಇಲ್ಲವೋ... ? ಲೋಕಾಯುಕ್ತ ಹೆಗಡೆಯವರ ದಾಖಲೆಗಳಲ್ಲಿ ಅಂತಹ ಶಕ್ತಿ ಇಲ್ಲ ಎಂದ ರವಿ ಬೆಳೆಗೆರೆ ತಮ್ಮ ಪತ್ರಿಕೆಗಳ ಬಳಿ ದಾಖಲೆ ಇದ್ದರೆ ಬರೆಯಬಹುದಾಗಿತ್ತು. ನ್ಯೂಸ್ ಚಾನೆಲ್ ಗಳ ವೇಗವಾಗಿ ಸುದ್ದಿ ಕೊಡುವ ಭರವಸೆಯಲ್ಲಿ ಇದ್ದದನ್ನು ಇಲ್ಲದ್ದನ್ನು ಹೇಳುವ ಹಾಗೂ ಪ್ರಾಮುಖ್ಯತೆ ಇಲ್ಲದ ಸುದ್ದಿಗಳಿಗೆ, ವರದಿಗಳಿಗೆ ಆದ್ಯತೆ ನೀಡುತ್ತಿದ್ದಾರೆ.
ಜೊತೆಗೆ ಯಾರೇ ಪತ್ರಕರ್ತರು ರಾಜಕಾರಿಣಿ ,ಸಮಾಜ ಸೇವಕರ ಬಗ್ಗೆ ಬರೆಯುವಾಗ ಭಾಷೆಯ ಮೇಲೆ ಹಿಡಿತವಿಟ್ಟುಕೊಳ್ಳುವ ಕಾಲ ಯಾವಾಗ ಬರುತ್ತೋ....?
ಸದಾ ಮಂದಸ್ಮಿತರಾದ ಸದಾನಂದಗೌಡರು ನಾಡಿನ ಮುಖ್ಯಮಂತ್ರಿಯಾಗಿದ್ದಾರೆ, ಇಂತಹ ಸಂದರ್ಭದಲ್ಲಿ ಅವರಿಗೆ ಮನ ನೋಯುವಂತಹ ಬರಹಗಳ ಬದಲು ಸರ್ಕಾರ ಮುಂದೆ ಮಾಡಬೇಕಾದ ಕೆಲಸಗಳ ಪಟ್ಟಿ ಕೊಡಿರಿ.
ಜಗದೀಶ ಶೆಟ್ಟರ ಗೆ ಹೋಲಿಸಿದರೆ ಸದಾನಂದಗೌಡರು ಮುಖ್ಯಮಂತ್ರಿ ಹುದ್ದೆ ನಿಭಾಯಿಸುವ ಸಾಮರ್ಥೈ ಉಳ್ಳವರು. ಅವರಿಗೆ ನಮ್ಮಿಂದ ಸಲಹೆ ಸಹಕಾರ ಕೊಡೋಣ. ಕೇಂದ್ರದಲ್ಲಿ ಎರಡು ಬಾರಿ ಸಂಸದರಾಗಿ ಕಾರ್ಯ ನಿರ್ವಹಿಸಿರುವುದರಿಂದ ಕೇಂದ್ರದ ಯೋಜನೆಗಳನ್ನು ಸಮರ್ಥವಾಗಿ ಬಳಸಿಕೊಳ್ಳಬಹುದು. ಆ ಬಣ, ಈ ಬಣ ಎನ್ನದೇ ಕರ್ನಾಟಕ ಬಿಜೆಪಿ ಶಾಸಕರು ಗೌಡರಿಗೆ ನಿರಂತರ ಬೆಂಬಲ ನೀಡಿದರೆ ಗೌಡರಿಂದ ಒಳ್ಳೆಯ ಆಡಳಿತ ನಿರೀಕ್ಷಿಸಬಹುದು.ವಿರೋಧ ಪಕ್ಷಗಳು ಅಭಿವೃದ್ಧಿಯ ವಿಷಯದಲ್ಲಿ ಕೈ ಜೋಡಿಸಿದರೆ ಗೌಡರಿಂದ ನಾಡಿಗೆ ಒಳ್ಳೆಯದಾದೀತು.... ಅಲ್ಲವೇ...
                                                                                    ಪತ್ರೇಶ್ ಹಿರೇಮಠ