06 ಮಾರ್ಚ್, 2014

ಪ್ರವರ ಕೊಟ್ಟೂರು ಬರೆದ ಕವನ


೧.
ಯಾವತ್ತೂ ಹೃದಯ ಬಟ್ಟಲು
ತುಂಬಬಾರದು,
ಏಕೆಂದರೆ
ಖಾಲಿಯಾಗುವುದು ತುಸು ಕಷ್ಟ

೨.
ಎದೆಯೊಳಗೆ 
ಒಂದೋ ಒಲವಿರಬೇಕು
ಇಲ್ಲಾ ವಿಷವಿರಬೇಕು
ಎರಡೂ ಒಟ್ಟಿಗೆ ಇದ್ದಲ್ಲಿ
ಸತ್ತಂತೆ ಬದುಕಬೇಕಾದೀತು

೩.
ಅಳಕ್ಕಿಳಿದ ನಂತರ
ಮೌನ ತಾನಾಗೆ ಆವರಿಸುತ್ತದೆ,
ಈ ನಿಯಮ
ಎಲ್ಲಕ್ಕೂ ಅನ್ವಯಿಸುತ್ತದೆ

೪.
ಕಾಮದಲ್ಲಿ ಸೋತವರು
ಮತ್ತು
ಪ್ರೇಮದಲ್ಲಿ ಗೆದ್ದವರು
ಮಹಾ ಮೂರ್ಖರು


ಶೂನ್ಯದಲ್ಲಿ ನಿಂತು
ಮೌನವನ್ನೂ ಕತ್ತಲನ್ನೂ
ತೂಗಿದೆ
ಎರಡೂ ಹಗುರ ಎನ್ನಿಸಿದವು

೬.
ಶವದ ಪೆಟ್ಟಿಗೆ ಒಯ್ಯುವ
ದಾರಿಯಲ್ಲಿ
ಹೂವುಗಳು ನಗುವ ಹಾಗಿಲ್ಲವೆಂದರೆ
ನಿಮಿಷದ ಮಟ್ಟಿಗಾದರೂ ಎದೆ ಬಡಿತ
ತಡೆಹಿಡಿಯಿರಿ
                        -ಪ್ರವರ ಕೊಟ್ಟೂರು

05 ಫೆಬ್ರವರಿ, 2014

ಮಾದರಿ ರಾಜಕಾರಣಿ ದಿ. ಎಂ.ಪಿ.ಪ್ರಕಾಶ್

ಕರ್ನಾಟಕ ಕಂಡ ಅಪರೂಪದ ರಾಜಕಾರಣಿ ಸಮಾಜವಾದಿ, ರಂಗಕರ್ಮಿ, ಚಿಂತಕ, ಅತ್ಯದ್ಭುತ ವಾಕ್ಪಟು ದಿ.ಎಂ.ಪಿ.ಪ್ರಕಾಶ್ ನಮ್ಮನ್ನಗಲಿ ಫೆ.8 ಕ್ಕೆ 03 ವರ್ಷ ಸಂದಿದೆ. ವಕೀಲರಾಗಿ, ನಾಟಕಕಾರರಾಗಿ,ಸಂಡೂರು  ಭೂ ಚಳುವಳಿಯ ಹೋರಾಟದ ಸಂಘಟಕರಾಗಿ, ಗೋಕಾಕ್ ಚಳುವಳಿಯ ಹರಿಕಾರರಾಗಿ , ಜಯಪ್ರಕಾಶ್ ನಾರಾಯಣ್, ಜಾರ್ಜ್ ಫರ್ನಾಂಡೀಸ್, ಮಧುದಂಡವತೆ, ಚಂದ್ರಶೇಖರ್, ವಿ.ಪಿ.ಸಿಂಗ್ ರಂತಹ ಘಟಾನುಘಟಿ ನಾಯಕರ ಒಲುಮೆ ಗಳಿಸಿದ್ದ ಎಂ.ಪಿ.ಪ್ರಕಾಶ್ ಅದ್ಭುತ ಬರಹಗಾರರೂ ಹೌದು. ಎಸ್.ನಿಜಲಿಂಗಪ್ಪನವರ ಕುರಿತಾದ ಅವರ ಪುಸ್ತಕ ಜೊತೆಗೆ ಪ್ರೀತಿಯೇ ದೇವರು ಕಥಾಸಂಕಲನ, ಹಂಪಿ ಕುರಿತಾದ ಲೇಖನಗಳು ಹೀಗೆ ಸೂರ್ಯ ಶಿಕಾರಿ ನಾಟಕ ಹೀಗೆ ಸಾಹಿತ್ಯ ಲೋಕದಲ್ಲೂ ಕೈಯಾಡಿಸಿ ಆಡು ಮುಟ್ಟದ ಸೊಪ್ಪಿಲ್ಲ ಎಂಬಂತೆ ಎಲ್ಲಾ ಕ್ಷೇತ್ರಗಳ ಮಾಹಿತಿಯನ್ನು ತುದಿನಾಲಿಗೆಯಲ್ಲೇ ಹೇಳುತ್ತಿದ್ದ ಪ್ರಕಾಶರ ಜ್ಞಾಪಕ ಶಕ್ತಿ ನಿರಂತರ ಓದುವಿಕೆ  ಇಂದಿನ ರಾಜಕಾರಣಿಗಳಿಗೆ ಇಲ್ಲದಿರುವುದು ದುರಂತ.



ಸಾರಿಗೆ ಸಚಿವರಾಗಿದ್ದಾಗ ಹಳ್ಳಿಗಳ ಮಕ್ಕಳು ಪಟ್ಟಣಗಳಲ್ಲಿ ಓದಲೆಂದು ಬಸ್ ಪಾಸ್ ಯೋಜನೆ ಜಾರಿಗೆ ತಂದು ಸಾವಿರಾರು ಹಳ್ಳಿ ಮಕ್ಕಳು ಉನ್ನತ ಶಿಕ್ಷಣ ಪಡೆಯಲು ನೆರವಾಗಿದ್ದು ಮರೆಯುವಂತಿಲ್ಲ. ಕೃಷಿ ಕ್ಷೇತ್ರದಲ್ಲಿ ಹೊಸ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳಲು ಧಾರವಾಡದಲ್ಲಿ ಕೃಷಿ ವಿಶ್ವವಿದ್ಯಾಲಯ ಸ್ಥಾಪಿಸಿ ರೈತರ ಬದುಕಿಗೆ ನೆರವಾದರು. ಕನ್ನಡ ಭಾಷೆ, ಅದರ ಉಪ ಭಾಷೆಗಳು, ಉಪ ಸಂಸ್ಕೃತಿ, ಜಾನಪದ, ದೇಶೀಯತೆಯನ್ನು ಮುಂದಿನ ಪೀಳಿಗಿಗೆ ಉಳಿಸಲು ಹಂಪಿಯಲ್ಲಿ ಕನ್ನಡ ವಿ.ವಿ. ಸ್ಥಾಪಿಸುವ ಕನಸು ಹೊತ್ತು ನನಸಾಗಿಸಿದರು. ವಿಜಯನಗರ ಸಾಮ್ರಾಜ್ಯದ ಗತವೈಭವವನ್ನು ಮರುಕಳಿಸುವಂತೆ ಮಾಡಲು ಹಂಪಿ ಉತ್ಸವದ ರೂವಾರಿಯಾಗಿ  ಜಾಗತಿಕ ಮಟ್ಟದಲ್ಲಿ ಹಂಪಿಯನ್ನು ಮೆರೆಸಿದರು. ಹಳ್ಳಿಗಳಲ್ಲಿ ಮಲವಿಸರ್ಜನೆಗೆ ರಸ್ತೆಯ ಪಕ್ಕದಲ್ಲಿ ಕೂರಲು ಬೆಳಕು ಹರಿಯುವುದರೊಳಗಾಗಿ ಅಥವಾ ಕತ್ತಲಾದ ಮೇಲೆ ಹೊರಗೆ  ಹೋಗುತ್ತಿದ್ದ ಮಹಿಳೆಯರ ಯಾತನೆ ಕಂಡು ನಿರ್ಮಲ ಕರ್ನಾಟಕ ಯೋಜನೆಯನ್ನು ಎಲ್ಲರ ಟೀಕೆಗಳ ನಡುವೆಯೂ ಜಾರಿಗೆ ತಂದು ಮಹಿಳೆಯರ ನೋವಿಗೆ ಸ್ಪಂದಿಸಿದರು. ಹೀಗೆ ಹತ್ತು ಹಲವು ನೆನಪು ಉಳಿಯುವ ಯೋಜನೆಗಳನ್ನು ಮುಂದಾಲೋಚನೆಯಿಂದ ಜಾರಿಗೆ ತರುತ್ತಿದ್ದ ಪ್ರಕಾಶರು ಉತ್ತಮ ಓದುಗರಾಗಿದ್ದರು. ಓದು ಮನುಷ್ಯನನ್ನು ಸುಸಂಸ್ಕತನನ್ನಾಗಿಸುವ ಜೊತೆಗೆ ಕ್ರಿಯಾಶೀಲನನ್ನಾಗಿ ಮಾಡಿ ನಾಡಿನ ಜನತೆಗೆ ಹೊಸತನ ನೀಡುವ ಪರಂಪರೆ ಸೃಷ್ಟಿಸುತ್ತದೆ. ಪ್ರಕಾಶ್ ಸೃಷ್ಟಿಯ ಹರಿಕಾರರು.
ಅಧಿಕಾರವಿರಲಿ ಬಿಡಲಿ ನಿರಂತರವಾಗಿ ರಂಗ ಚಟುವಟಿಕೆಗಳನ್ನು ತಾವೇ ಸ್ಥಾಪಿಸಿದ್ದ ರಂಗಭಾರತಿಯ ಮೂಲಕ ಜಾರಿಯಲ್ಲಿಟ್ಟಿದ್ದ ಪ್ರಕಾಶರು ಪ್ರತಿ ವರ್ಷವೂ 5 ರಿಂದ 7 ದಿನಗಳ ಕಾಲ ನಾಟಕೋತ್ಸವವನ್ನು ಹಡಗಲಿಯಲ್ಲಿ ಏರ್ಪಡಿಸಿ ಜನತೆಗೆ ರಂಗಭೂಮಿಯ ಮಹತ್ವ ಮತ್ತು ಸೆಳೆತ, ಅಭಿರುಚಿ ಮೂಡಿಸುತ್ತಿದ್ದರು.


ಹೀಗೆ ಹತ್ತು ಹಲವು ಪ್ರತಿಭಾನ್ವಿತ ಕಲೆಗಳನ್ನು ಹೊಂದಿದ್ದ ಪ್ರಕಾಶರ ಕುರಿತು ನೊಬೆಲ್ ಪ್ರಶಸ್ತಿ ವಿಜೇತ ಸಾಹಿತಿ ವಿ.ಎಸ್.ನೈಪಾಲ್ ಭಾರತಕ್ಕೆ ಭೇಟಿ ನೀಡಿ ಭಾರತದ ಎಲ್ಲಾ ರಾಜ್ಯಗಳ ಮಂತ್ರಿಗಳ ಹಾಗೂ ಕೇಂದ್ರ ಮಂತ್ರಿಗಳ ವಿವರ ಸಂಗ್ರಹಿಸಿ ಅದರಲ್ಲಿ ಎಂ.ಪಿ.ಪ್ರಕಾಶ್ ಭಾರತ ಕಂಡ ಎಲ್ಲಾ ಕ್ಷೇತ್ರಗಳಲ್ಲೂ ಪರಿಣಿತಿ ಹೊಂದಿದ ರಾಜಕಾರಣಿ ಎಂದು ತಮ್ಮ ದಶಲಕ್ಷ ದಂಗೆಗಳು ಕೃತಿಯಲ್ಲಿ ದಾಖಲಿಸಿ ಪ್ರಕಾಶರ ಲೀಲಾಜಾಲ ಪಾಂಡಿತ್ಯವನ್ನು ಪ್ರಶಂಸಿಸಿದ್ದಾರೆ. ವಿದೇಶಿ ನೊಬೆಲ್ ಪ್ರಶಸ್ತಿ ವಿಜೇತ ಸಾಹಿತಿಯ ಮಾತಿಗಿಂತ ಪ್ರಕಾಶರ ಬಗ್ಗೆ ಹೆಚ್ಚೇನು ಹೇಳಲಾಗದು.
ಪ್ರಕಾಶರಂತಹ ಮೇಧಾವಿ ರಾಜಕಾರಣಿಗಳ ಪಾಂಡಿತ್ಯ, ಓದುವ ಆಸಕ್ತಿ, ವಿಷಯದ ಬಗ್ಗೆ ಸದನದಲ್ಲಿ ಆಳವಾಗಿ ಚರ್ಚಿಸುವ ಶಕ್ತಿ, ಲಲಿತಕಲೆಗಳ ಬಗ್ಗೆ ಆಸಕ್ತಿ ಇಂದಿನ ರಾಜಕಾರಣಿಗಳಿಗೆ ಬಂದರೆ ಕರ್ನಾಟಕ ಕಲ್ಯಾಣ ಕನ್ನಡ ನಾಡು ಆಗುವಲ್ಲಿ ಯಾವ ಸಂಶಯವೂ ಇಲ್ಲ. ಪ್ರಕಾಶರು ನಮ್ಮೊಂದಿಗಿಲ್ಲದಿದ್ದರೂ ಅವರ ತತ್ವ, ಆದರ್ಶ, ಸಮಾಜವಾದ, ನಮ್ಮೆಲ್ಲರ ನಡುವೆ ಗೋಚರಿಸುತ್ತಿದೆ. ಎಂದಿಗೂ ಕುಟುಂಬ ರಾಜಕಾರಣ ಮಾಡದ ಪ್ರಕಾಶರು ತಾವು ಇರುವವರೆಗೂ ಮಗ ಎಂ.ಪಿ.ರವೀಂದ್ರರನ್ನು ಅಧಿಕಾರದ ಹತ್ತಿರ ಬಿಡಲಿಲ್ಲ. ಅವರ ಸಾವಿನ ನಂತರ ಅವರ ಪುತ್ರ ರವೀಂದ್ರ ಹರಪನಹಳ್ಳಿ ಶಾಸಕರಾಗಿದ್ದು ಗಮನಾರ್ಹ. ಎಲ್ಲಾ ರಾಜಕಾರಣಿಗಳು ತಾವೊಂದು ಕ್ಷೇತ್ರದಲ್ಲಿ ನಿಂತರೆ ಮತ್ತೊಂದು ಕ್ಷೇತ್ರದಲ್ಲಿ ತಮ್ಮನನ್ನೋ, ಮಗನನ್ನೋ, ಸೊಸೆಯನ್ನೋ, ತಂಗಿಯನ್ನೋ, ಅಳಿಯನನ್ನೋ ನಿಲ್ಲಿಸುವ ಪರಂಪರೆಯ ನಡುವೆ ಪ್ರಕಾಶರ ತಾತ್ವಿಕತೆ ನಮಗೆ ಆದರ್ಶ.
                                                                                                 - ಪತ್ರೇಶ್ ಹಿರೇಮಠ

13 ಅಕ್ಟೋಬರ್, 2013

ತಾಳಿ ಕಟ್ಟುವುದನ್ನು ಬಿಟ್ಟುಬಿಡಿ ..ಇಲ್ಲ ಕಟ್ಟಿದ್ದರೆ ಕಿತ್ತೆಸೆದುಬಿಡಿ...

ಅಡ್ಡಪಲ್ಲಕ್ಕಿ ಮತ್ತು ಗಂಡನ ಪಾದಪೂಜೆ ಮೌಢ್ಯವೆಂದು ಭಾವಿಸುವವರು ತಾಳಿ ಕಟ್ಟುವುದನ್ನು ಬಿಟ್ಟುಬಿಡಿ ..ಇಲ್ಲ ಕಟ್ಟಿದ್ದರೆ ಕಿತ್ತೆಸೆದುಬಿಡಿ... ಸುಮ್ಮನೆ ಪ್ರಗತಿಪರರೆಂದು ಬಿಂಬಿಸುವ ಭರದಲ್ಲಿ ಕೆಲವು ಆಚರಣೆ ಹಾಗೂ ಪದ್ಧತಿಗಳನ್ನು ವಿರೋಧಿಸಿ ಮೂಲಕ ತಾವು ಪ್ರಗತಿಪರರು, ಚಿಂತಕರು, ಬುದ್ಧಿಜೀವಿಗಳು ಎನ್ನುವುದನ್ನು ಸಾಬೀತು ಮಾಡಿಕೊಳ್ಳುತ್ತಿರುವ ಅಪಾಯಕಾರಿ ಬೆಳವಣಿಗೆ  ಕರ್ನಾಟಕದಲ್ಲಿ ಕೆಲವರು ಮಾಡುತ್ತಿದ್ದಾರೆ. ತಾವಾಗಿ ಇಷ್ಟಪಟ್ಟು ಆಚರಿಸುವ ಪದ್ಧತಿಯನ್ನು ವಿರೋಧ ಮಾಡುವುದಕ್ಕೆ ಇವರಿಗೆ ಯಾರು ಅಧಿಕಾರ ನೀಡಿದರು ಎನ್ನುವುದನ್ನು ಪ್ರಶ್ನೆ ಹಾಕಿಕೊಳ್ಳಬೇಕಾಗುತ್ತದೆ. ಆದರೆ ಯಾರದೇ ಒತ್ತಡ, ಬಲವಂತವಿಲ್ಲದೆ ಆಚರಿಸುತ್ತಾರೆಂದರೆ ದೇಶದಲ್ಲಿ ಹಕ್ಕು ಪ್ರತಿಯೊಬ್ಬರಿಗೂ ಇದೆ. ಹಾಗೆ ಆಚರಣೆ ಮಾಡದೆ ಇರುವ ಹಕ್ಕೂ ಇದೆ. ಬೇಡವಾದವರು ಅದರಿಂದ ದೂರವಿದ್ದರಾಯಿತು. ಅವರನ್ನು ಯಾರೂ ಬಲವಂತ ಮಾಡುವುದಿಲ್ಲ. ಆದರೆ ವಿರೋಧ ಮಾಡುವುದು, ನಿಲ್ಲಿಸುವುದು ಇದಕ್ಕೆ ಇವರಿಗೆ ಯಾರು ಅಧಿಕಾರ ಕೊಟ್ಟಿದ್ದಾರೆ?

ಒಟ್ಟಾರೆ ಈಗ ನಡೆಯುತ್ತಿರುವ ಆಚರಣೆಗಳೆಲ್ಲಾ ಸರಿ ಇಲ್ಲಾ ಎನ್ನುವುದಾದರೆ, ಎಲ್ಲರೂ ಮನುಷ್ಯರೇ ಎಲ್ಲರೂ ಸಮಾನರು ಎಂದು ಭಾವಿಸುವುದಾದರೆ ಮೊದಲು ಶಾಲೆಯಲ್ಲಿ ನಿಮ್ಮ ಮಕ್ಕಳನ್ನು ಸೇರಿಸುವಾಗ ಧರ್ಮ ಮತ್ತು ಜಾತಿ ಕಾಲಂಗಳಲ್ಲಿ ಭಾರತೀಯ ಎಂದು ಬರೆಸಿ ಪ್ರಗತಿಪರರೇ …

ಮನೆಯಲ್ಲಿ ಹೆಂಡತಿ ಬಿಸಿ ನೀರು ಕಾಯಿಸಿಕೊಡುತ್ತಾಳೆ.. ನೀವು ತಿಂದ ಎಂಜಲು ತಟ್ಟೆಯನ್ನು ತೊಳೆಯುತ್ತಾಳೆ.. ನಿಮ್ಮ ಬಟ್ಟೆ ಒಗೆಯುತ್ತಾಳೆ ಅದು ಶೋಷಣೆಯಲ್ಲವೇ… ಮನೆಯ ಹೆಂಡತಿ ಮೇಲೆ ಶೋಷಣೆ ಮಾಡುವ ನೀವು ಇನ್ನೊಬ್ಬರು ಭಕ್ತಿಯಿಂದ ಹೆಗಲ ಮೇಲೆ ಪಲ್ಲಕ್ಕಿ ಹೊತ್ತರೆ ನಿಮ್ಮ ಹೆಗಲು ನೋವು ಬಂದ ತರಹ ವರ್ತಿಸುತ್ತೀರಲ್ಲಾ … ಮೊದಲು ನಿಮ್ಮ ಹೆಂಡತಿಯನ್ನು ಸಮಾನವಾಗಿ ಕಾಣಿ .. ಮುಸುರೆ ತಿಕ್ಕಿ … ನೀವು ಉಂಡ ತಟ್ಟೆ ನೀವು ತೊಳೆದು ಸಮಾಜಕ್ಕೆ ಭೊಧನೆ ಮಾಡಿ ಪ್ರಗತಿಪರರೇ …
ತಾಳಿ ಕಟ್ಟುವುದು ಮೌಢ್ಯವಲ್ಲವೇ …. ಧರ್ಮ,ಆಚಾರ, ವಿಚಾರ, ಪರಂಪರೆ ಬಗ್ಗೆ ನಂಬಿಕೆ ಇಲ್ಲವೆಂದರೆ ತಾಳಿ ಯಾಕೆ ಕಟ್ಟುತ್ತೀರಿ… ಕಟ್ಟಿದ ಪ್ರಗತಿಪರರು ತಾಳಿ ಕಿತ್ತೆಸೆದುಬಿಡಿ.. ..

ಬೇರೆ ಬೇರೆ ಧರ್ಮಗಳಲ್ಲಿ ನಡೆಯುವ ಮಹಿಳೆಯರ ಮೇಲಿನ ಶೋಷಣೆಗಿಂತ ಹಿಂದೂ ವೀರಶೈವ ಧರ್ಮಗಳ ಬಗ್ಗೆ ಮಾತನಾಡುತ್ತೀರಲ್ಲ… ಬೇರೆ ಧರ್ಮಗಳ ಅಮಾನವೀಯ ಪದ್ಧತಿಗಳ ಬಗ್ಗೆ ಮಾತನಾಡುವ ಗಂಡಸುತನ ತೋರಿಸಿ ಪ್ರಗತಿಪರರೇ ….

ಈ ದೇಶದಲ್ಲಿ ಧರ್ಮ ದೇವರು ಪತಿ ಪತ್ನಿ ತಂದೆ ತಾಯಿ ಎಂಬ ಬಿಗಿ ಬಂಧವಿಲ್ಲದಿದ್ದರೆ ಹುಟ್ಟಿದ ಮಕ್ಕಳು ವಿದೇಶಿ ವ್ಯವಸ್ಥೆಯಂತೆ ಬೀದಿ ಪಾಲಾಗಿ ಹೋಗುತ್ತಿದ್ದವು.

ದಯವಿಟ್ಟು ನನ್ನ ಈ ಸಲಹೆಯ ಬಗ್ಗೆ ಏನನ್ನಿಸುತ್ತೆ..?


                                                ಪತ್ರೇಶ್ ಹಿರೇಮಠ

12 ಅಕ್ಟೋಬರ್, 2013

ಅನ್ನ ಮತ್ತು ಕ್ಷೀರ ಭಾಗ್ಯ ನೀಡಿದ ಕರ್ನಾಟಕ ಕಾಂಗ್ರೆಸ್, ಮುಖ್ಯಮಂತ್ರಿ ಸಿದ್ದರಾಮಯ್ಯನವರ "ಮನಸ್ವಿನಿ" ಮತ್ತು "ಮೈತ್ರಿ" ಹಾಗೂ "ಡಯಾಲಿಸಿಸ್

ಕರ್ನಾಟಕ ರಾಜ್ಯದ ಕಾಂಗ್ರೆಸ್ ನೇತೃತ್ವದ ಸರ್ಕಾರದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ನಿರಂತರವಾಗಿ ಕ್ರಿಯಾಶೀಲ ಯೋಜನೆಗಳನ್ನು ಜಾರಿ ಮಾಡುವ ಮೂಲಕ ಅಭಿವೃಧ್ಧಿ ಪರ ಶಕೆ ಆರಂಭಿಸಿದ್ದಾರೆ. ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದಾಗಿನಿಂದ ಇಲ್ಲಿಯವರೆಗೆ ನಿರಂತರವಾಗಿ ಹಿಂದುಳಿದ, ದಲಿತರ, ಅಲ್ಪಸಂಖ್ಯಾತ, ಮತ್ತು ಸಾಮಾನ್ಯ ಬಡವರ ಪರ ಯೋಜನೆಗಳನ್ನು ಜಾರಿಗೆ ತರುವ ಮೂಲಕ ಕಾಂಗ್ರೆಸ್ ನಿಜವಾಗಿಯೂ ಅಸಹಾಯಕರ ಧ್ವನಿ ಎಂಬುದನ್ನು ಅಧಿಕಾರ ಬಳಕೆಯ ಮೂಲಕ ಸಾಬೀತು ಪಡಿಸಿದ್ದಾರೆ.
ಅಧಿಕಾರಕ್ಕೆ ಬಂದ ಕೂಡಲೇ ಒಂದು ರೂಗೆ ಕೆಜಿಗೆ ಅಕ್ಕಿ ಮತ್ತು ಸರ್ಕಾರಿ ಶಾಲಾ ಮಕ್ಕಳಿಗೆ ಪೌಷ್ಟಿಕ ಆಹಾರವಾದ ಹಾಲು ನೀಡುವ ಮೂಲಕ ಬಡವರ ಹಸಿವಿನ ಬವಣೆ ಮತ್ತು ಮಕ್ಕಳ ಅಪೌಷ್ಟಿಕತೆ ನಿವಾರಣೆಗೆ ಮುಂದಾಗಿದ್ದು ಶ್ಲಾಘನೀಯ ಸಂಗತಿ. ಅಕ್ಕಿ ಮತ್ತು ಹಾಲು ನೀಡಿದ್ದಕ್ಕೆ ಯಾರು ಏನೇ ಟೀಕೆ ಮಾಡಲಿ ನಿಜವಾದ ಬಡವರ ಪರ ಆಲೋಚನೆ ಮಾಡಿ ತಂದ ಯೋಜನೆಗಳು ಇವು ಎನ್ನುವುದರಲ್ಲಿ ಎರಡು ಮಾತಿಲ್ಲ.

ಇತ್ತೀಚೆಗೆ ತಾಲೂಕಿಗೊಂದು ಡಯಾಲಿಸಿಸ್  ಘಟಕಗಳನ್ನು ತೆರೆಯುವ ಮೂಲಕ ಆರೋಗ್ಯ ಭಾಗ್ಯ ನೀಡುವ ಮೂಲಕ ಬಡವರ ಆರೋಗ್ಯ ಸಮಸ್ಯೆಗಳಿಗೂ ಸ್ಪಂದಿಸುವ ಮೂಲಕ ಕಾಂಗ್ರೆಸ್ ನಿಜ ಬಡವರ ಪರ ಎಂಬುದನ್ನು ಸಾಬೀತುಪಡಿಸಿದ್ದಾರೆ.
ಜೊತೆಗೆ ಅವಿವಾಹಿತ ಮಹಿಳೆಯರ ಅಭದ್ರ ಬದುಕಿಗೆ ಆಸರೆಯಾಗಿ ಅವರ ತಿಂಗಳ ನೈಜ ಬದುಕಿನ ಖರ್ಚು ವೆಚ್ಚ ಹಾಗೂ ಜೀವನ ಭದ್ರತೆಗಾಗಿ 40 ವರ್ಷ ಮೀರಿದ ನಿರ್ಗತಿಕ ಮಹಿಳೆಯರಿಗೆ 500 ರು ಮಾಸಿಕ ವೇತನ ನೀಡುವುದು ಮತ್ತು ಪರಿತ್ಯಕ್ತ (ಗಂಡ ಬಿಟ್ಟಿರುವ)ಇದರಲ್ಲಿ 45ರಿಂದ 65ವರ್ಷ ವಯಸ್ಸಿನ 12,000-17,000 ಆದಾಯ ಹೊಂದಿರುವ ಅವಿವಾಹಿತ ಹಾಗೂ ವಿಚ್ಛೇದಿತ ಮಹಿಳೆಯರಿಗೆ 500 ಮಾಸಾಸನ ನೀಡಲಾಗುತ್ತದೆ ಪರಿತ್ಯಕ್ತ ಮಹಿಳೆಯರಿಗೆ 500 ರು ಮಾಸಿಕ ವೇತನ ನೀಡುವ ಯೋಜನೆ ಜಾರಿಗೆ ತರುವ ಮೂಲಕ ಇಡೀ ದೇಶಕ್ಕೆ ಮಾದರಿ ಮುಖ್ಯಮಂತ್ರಿಯಾಗಿ  ಸಿದ್ದರಾಮಯ್ಯ ಗೋಚರಿಸುತ್ತಿದ್ದಾರೆ.
 ಇನ್ನು ಮೈತ್ರಿ ಯೋಜನೆಯಲ್ಲಿ ಲೈಂಗಿಕ ಅಲ್ಪಸಂಖ್ಯಾತರಿಗೆ 500 ಪಿಂಚಣಿ ನೀಡಲಾಗುತ್ತದೆ. ಇವರು ಮತದಾರರ ಗುರುತಿನ ಚೀಟಿ, ಲೈಂಗಿತ ಅಲ್ಪಸಂಖ್ಯಾತರು ಎನ್ನುವುದಕ್ಕೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ  ಇಲಾಖೆಯಿಂದ ದೃಢೀಕರಣ ಪತ್ರ. ಲೈಂಗಿಕ ಅಲ್ಪಸಂಖ್ಯಾತರ ಸಂಸ್ಥೆಯಲ್ಲಿ ನೋಂದಣೆಯಾಗಿರುವವರಿಗೆ ಈ ಸೌಲಭ್ಯ ನೀಡಿದ ಮೊದಲ ಸರ್ಕಾರ ಕರ್ನಾಟಕ ಸರ್ಕಾರ ಮೊದಲನೆಯದಾಗಲಿದೆ.
ಇಷ್ಟೆಲ್ಲಾ ಬಡವರ ಪರ ಯೋಜನೆ ಜಾರಿಗೆ ತರುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಬಗ್ಗೆ ಕೆಲವರ ಅಸ್ಥಿಮಿತ ಟೀಕೆಗಳು ನಿಷ್ಪ್ರಯೋಜಕ.
ಅಧಿಕಾರಿಗಳ ಮೇಲಿನ ಬಿಗಿ ಹಿಡಿತ ಮತ್ತು ಲಂಚರಹಿತ ಆಡಳಿತ ಸಿದ್ದರಾಮಯ್ಯನವರ ಕನಸು ಈಡೇರುವ ದಿನ ದೂರವಿಲ್ಲ....
                                                                                              ಪತ್ರೇಶ್ ಹಿರೇಮಠ್

21 ಸೆಪ್ಟೆಂಬರ್, 2013

ನೆಟ್ ನಲ್ಲಿ ಕೂತು ಚರ್ಚೆ ಮಾಡೋರು ವೋಟ್ ಹಾಕ್ತಾರಾ ...?

ಫೇಸ್ಬುಕ್ ಸೇರಿದಂತೆ ಎಲ್ಲಾ ಸಾಮಾಜಿಕ ತಾಣಗಳಲ್ಲೂ ಈಗ ರಾಜಕೀಯದ್ದೇ ಸುದ್ದಿ. ರಾಹುಲ ಗಾಂಧಿ ಮುಂದಿನ ಪ್ರಧಾನಿಯಾಗಲಿ ಅಂತ ಖುದ್ದು ಪ್ರಧಾನಿ ಮನಮೋಹನ ಸಿಂಗ್ ಹೇಳಿದರಂತೆ. ಮೋದಿ ಪ್ರಧಾನಿ ಅಭ್ಯರ್ಥಿಯಾಗೋದು ಅಡ್ವಾಣಿಗೆ ಇಷ್ಟವಿಲ್ವಂತೆ. ಮೋದಿ ಪ್ರಧಾನಿಯಾದರೆ ನಾನು ಭಾರತದಲ್ಲಿ ಇರೋಲ್ಲ ಅಂತ ಜ್ಞಾನಪೀಠ ಸಾಹಿತಿ ಅನಂತಮೂರ್ತಿ ಅಂದರಂತೆ. ಅನಂತಮೂರ್ತಿಯವರು ವಿದೇಶಕ್ಕೆ ಹೋಗಲು ಕೆಲವರು ಮನಿ ಆರ್ಡರ್ ಮಾಡಿದರಂತೆ. ಇನ್ನೂ ಕೆಲವರು ಒಂದು ಹೆಜ್ಜೆ ಮುಂದೆ ಹೋಗಿ ಫೇಸ್ ಬುಕ್ ನಲ್ಲಿ ಮೋದಿ ಹೊಗಳುವವರು ನನಗೆ ಸರಿ ಬರೊಲ್ಲಾ .. ಮೋದಿ ಅಭಿಮಾನಿಗಳು ನಮ್ಮ ಅಕೌಂಟ್ನಿಂದ ಅನ್ ಫ್ರೆಂಡ್ ಆಗಿಬಿಡಿ ಅಂದರಂತೆ.

ಇದನ್ನೆಲ್ಲಾ ಮಾತಾಡುವವರಿಗೆ ನೈಜ ರಾಜಕಾರಣದ ಅನುಭವ ಇದೆಯಾ..? ಹೀಗೆಲ್ಲಾ ಟೀಕೆ ಮಾಡೋರು ಎಂದಾದರೂ ತಾಸುಗಟ್ಟಲೆ ಕಾದು ಮತ ಹಾಕಿದ್ದಾರಾ..? ಅಥವಾ ಎಂದಾದರೂ ಇಪ್ಪತ್ತು ಜನರ ಮನ ಒಲಿಸಿ ಯಾರಾದರು ಒಳ್ಳೆಯ ಅಭ್ಯರ್ಥಿಗೆ ಮತ ಹಾಕಿಸಲಿಕ್ಕೆ ಶ್ರಮಿಸಿದ್ದಾರಾ..?  ಚುನಾವಣೆ ದಿನವೇ ನಮಗ್ಯಾಕಪ್ಪಾ ಗಲಾಟೆ ಅಂತ ಟೂರ್ ಹಾಕಿಕೊಳ್ಳೋ ಎಷ್ಟೋ ಮಾತಿನ ಮಲ್ಲರನ್ನ ನಾನು ಕಣ್ಣಾರೆ ಕಂಡಿದ್ದಾಗಿದೆ.

ಮಾತೆತ್ತಿದರೆ ಗಾಂಧೀ ಕುಟುಂಬವನ್ನೇ ನಿಂದಿಸುವುದು ಬಿಟ್ಟರೆ ಮೋದಿ ಪ್ರಧಾನಿಯಾದರೆ ಏನು ಮಾಡುತ್ತಾನೆ ಅಂತ ಸ್ಪಷ್ಟವಾಗಿ ಮೋದಿ ಅಭಿಮಾನಿಗಳಿಗೆ ಗೊತ್ತಿಲ್ಲ. ಇನ್ನು ಮೋದಿ ತೆಗಳೋ ಭರದಲ್ಲಿ ಯುಪಿಎ ಮತ್ತು ಕಾಂಗ್ರೆಸ್ ಏನು ಅಭಿವೃದ್ಧಿ ಯೋಜನೆಗಳನ್ನು ಜಾರಿಗೆ ತಂದಿದೆ ಅಂತ ಕೂಡಾ ಗೊತ್ತಿಲ್ಲ..

ಫೇಸ್ ಬುಕ್ ನಲ್ಲಿ ಕೂತು ಟೀಕೆ ಮಾಡೋರಿಗೆ ಯುಪಿಎ ಜಾರಿಗೆ ತಂದ ಕಾರ್ಯಕ್ರಮಗಳನ್ನು ಕೇಳಿದರೆ ಒಂದೋ ಎರಡೋ ಹೇಳ್ತಾರೆ ಇಲ್ಲಾ ಅಂದರೆ ಹಗರಣಗಳ ಬಗ್ಗೆ ಮಾತಾಡ್ತಾರೆ... ಇನ್ನು ಎನ್ ಡಿಎ ಜಾರಿಗೆ ತಂದ ಯೋಜನೆಗಳ ಬಗ್ಗೆ ಮಾಹಿತಿ ಕೂಡಾ ಇರೋದಿಲ್ಲ... ಅಷ್ಟೇ ಏಕೆ ಯುವಜನತೆಗೆ ಸರ್ಕಾರ ಏನು ಕಾರ್ಯಕ್ರಮಗಳನ್ನು ಈ ಬಜೆಟ್ ನಲ್ಲಿ ನೀಡಿದೆ ಅನ್ನೋದು ಗೊತ್ತಿರಲಾರದೋರು ... ರಾಹುಲ್ ಗಿಂತ ಮೋದಿ ಬೆಟರ್ರು ... ಮೋದಿಗಿಂತ  ಅಡ್ವಾಣಿ ಬೆಟರ್ರು ಅಂತ ಟೈಪಿಸುತ್ತಾ ... ಕೊನೆಗೆ ಇವರೆಲ್ಲರಿಗಿಂತ ನಾನೇ ಪ್ರಧಾನಿಯಾಗಲು ಬೆಟರ್ರು ಅಂದ್ರೂ ಆಶ್ಚರ್ಯವಿಲ್ಲ ... ಏನಂತೀರಿ...?
 ಪತ್ರೇಶ್ ಹಿರೇಮಠ್

27 ಆಗಸ್ಟ್, 2012

ಕರೆಂಟ್ ಬಿಲ್ ಏರುತ್ತಿದೆ...... ಪತ್ರೇಶ್ ಹಿರೇಮಠ್ ಬರೆದ ಕವನ


ಅವನು ಅವಳು
ಇಬ್ಬರಿಗೂ ನೌಕರಿ
ಸಂಜೆ ಕೆಲಸ ಮುಗಿಸಿ ಮನೆಗೆ
ಬೆಳಕಿಗಾಗಿ,  ಲೈಟು ಹಚ್ಚುತ್ತಾರೆ
ಮತ್ತು ಸೆಖೆ ತಾಳದೇ ಗಾಳಿಗಾಗಿ
ಫ್ಯಾನು ತಿರುಗಿಸುತ್ತಾರೆ
ಕರೆಂಟ್ ಬಿಲ್ ಏರುತ್ತಲೇ ಇದೆಯಲ್ಲ.... ?

ಸ್ವಲ್ಪ ಬೇಸರ ಹೋಗಲಾಡಿಸಲು
ಟಿವಿ ಆನ್ ಮಾಡುತ್ತಾರೆ
ಫ್ರಿಜ್ ಚಾಲೂ ಹಾಗೇ ಇರುತ್ತೆ...
ಬೆಳಗಿನ ಅಡುಗೆಯನ್ನು ಸ್ವಲ್ಪ ಬೇಯಿಸಲು
ಕರೆಂಟಿನ ಒಲೆ ಬಳಕೆಯಾಗುತ್ತದೆ
ಕರೆಂಟ್ ಬಿಲ್ ಏರುತ್ತಲೇ ಇದೆಯಲ್ಲ.... ?

ಊಟದ ನಂತರ
ಮಲಗಬೇಕು
ಸೊಳ್ಳೆಗಳ ಕಾಟ
ಸೊಳ್ಳೆ ಬತ್ತಿ ಹಚ್ಚಲೂ ಬೇಕು ಕರೆಂಟ್...
ಕರೆಂಟ್ ಬಿಲ್ ಏರುತ್ತಲೇ ಇದೆಯಲ್ಲ.... ?

ಏಳುತ್ತಾರೆ ... ಬೆಳಿಗ್ಗೆ
ಸ್ನಾನ ಮಾಡಬೇಕಲ್ಲ ..
ಗೀಜರ್ ಹಾಜರ್
ಅಡುಗೆ ಬೇಕಾತಲ್ಲ
ಮಿಕ್ಸರ್ ಶುರೋಕರ್
ಕರೆಂಟ್ ಬಿಲ್ ಏರುತ್ತಲೇ ಇದೆಯಲ್ಲ.... ?

ಟಿಫಿನ್ ಆಯಿತು
ಮಧ್ಯಾಹ್ನದ ಬಾಕ್ಸ್ ತಯಾರಿ
ಆಫೀಸಿಗೆ ಹೊರಡಬೇಕಲ್ಲ
ಹೊಸದಾಗಿ ಕಟ್ಟಿದ ಮನೆಗೆ
ತಂದಿಟ್ಟ ಬೆಲೆ ಬಾಳುವ ವಸ್ತುಗಳಿಗೆ ರಕ್ಷಣೆ..?
ಮನೆಗೊಂದು ವಿದ್ಯುತ್ ತಂತಿ ಬೇಲಿ
ಅದಕೂ ವಿದ್ಯುತ್ ಹರಿಯಲಿ
ಕರೆಂಟ್ ಬಿಲ್ ಏರುತ್ತಲೇ ಇದೆಯಲ್ಲ.... ?

ಮತ್ತೆ ಮೊದಲಿನಿಂದ ....  ಪ್ರಾರಂಭ
ಕರೆಂಟ್ ಬಿಲ್ ತುಂಬಲೇಬೇಕು
ಹೊರಗಾಳಿ, ರುಬ್ಬಿದ ಅಡುಗೆಯ ರುಚಿ
ಯಕ್ಷಗಾನ ನಾಟಕ ಗಾಯನ ಕಳೆದುಕೊಂಡಿದ್ದಕ್ಕೆ,
ಹಳೆಯ ಗಡಿಗೆ,ನೆಲುವಿಗಿ,ಬೀಸಣಿಕೆ
ಬೇವಿನ ಸೊಪ್ಪಿನ ಹೊಗೆ ಜೊತೆ ಜೊತೆ
ಬೆಳೆಸಿದ ಅಪ್ಪಅಮ್ಮನ ಮರೆತಿದ್ದಕ್ಕೆ
ಕರೆಂಟ್ ಬಿಲ್ ತುಂಬಲೇಬೇಕಿದೆ
ಕಳೆದುಕೊಂಡ ತಪ್ಪಿಗೆ ಬಿಲ್ ಏರುತ್ತಲೇ ಇದೆ....?

                                                                       ಪತ್ರೇಶ್ ಹಿರೇಮಠ್

10 ಜೂನ್, 2012

ಶ್ರೀರಾಮನಂತಾಗಬೇಕು..? ಪತ್ರೇಶ್ ಹಿರೇಮಠ ಬರೆದ ಕವನ

ನಾನು ಶ್ರೀರಾಮನಂತೆ
ಆದರ್ಶವಾದಿಯಾಗಬೇಕೆನ್ನುತ್ತೇನೆ...?

ಹೇಗೋ ಆದರ್ಶದ ಬೆನ್ನು ಹಿಡಿದು
ಬಸ್ಸು ಹತ್ತಿ
ಪ್ರೇಯಸಿಯ ಮಗ್ಗಲು ಕುಳಿತು
ಲಲ್ಲು ಹೊಡೆಯುವಾಗ
ನಿತ್ರಾಣ ಅಜ್ಜಿ  ಪಕ್ಕ ನಿಂತು ಸುಸ್ತಾಗುವುದು ಕಾಣುತ್ತದೆ..?
ಏಳುವಂತಿಲ್ಲ, ಕೂರುವಂತಿಲ್ಲ,
ರಾಮಾದರ್ಶ ಬಸ್ಸಿನ ಚಕ್ರದಲ್ಲಿ
ಸಿಲುಕಿ ಧೂಳಡರುತ್ತದೆ....?

ನಾನು ಶ್ರೀರಾಮನಂತೆ
ಏಕಪತ್ನೀವ್ರತಸ್ಥನಾಗಬೇಕೆನ್ನುತ್ತೇನೆ...?

ವ್ರತದ ಧ್ಯಾನಕ್ಕೆ ಭಂಗಕರಾಗಿ
ಪಕ್ಕ ಹಾಯುವ ಚೂಡಿ,ಮಿಡಿ,ಅತ್ತರು ನನ್ನ ತಾಕಿ
ನನ್ನೊಂದಿಗೆ ಸಂಘರ್ಷಕ್ಕಿಳಿದು
ಕಾಮ ಭುಗಿಲ್ಲೆನ್ನುತ್ತದೆ..
ಇಲ್ಲಿ ರಾಮ ಆಸ್ತಿತ್ವಹೀನನಾಗುತ್ತಾನೆ..?

ನಾನು ಶ್ರೀರಾಮನಂತೆ
ನಿಷ್ಠಾವಂತ, ಸತ್ಯದುರಂಧರನಾಗಬೇಕೆನ್ನುತ್ತೇನೆ...?

ಆದರೆ ನನ್ನವಳ ದುಬಾರಿ ಶಾಪಿಂಗ್ , ಬಂಗಾರ, ತೆಳು ನೈಟಿ,
ಫ್ರಿಡ್ಜು, ಮಿಕ್ಸಿ,ಸ್ಕೂಟಿ,ಕಾರುಗಳ ಆಶೆಯಲ್ಲಿ
ರಾಮನ ನಿಷ್ಠೆ ನೆಲದಲ್ಲಿ ಹೂತುಹೋಗಿ
ಕೈ ತಂತಾನೇ ಟೇಬಲ್ ಕೆಳಗೆ ಹೋಗುತ್ತದೆ...?

ಯಾಂತ್ರಿಕ ಜಗತ್ತು
ಐಷಾರಾಮಿ ಬದುಕು
ನೀರಸವಾದಾಗ
ನಾನು ಶ್ರೀರಾಮನಾಗುವ ಬಯಕೆ...?
ಈಡೇರತ್ತುದೇನೋ
ಎಂದು ಕಾದಿದ್ದೇನೆ...?

                                 ಪತ್ರೇಶ್ ಹಿರೇಮಠ್