25 ಮೇ, 2011

ಅಗ್ನಿ ಪರೀಕ್ಷೆ ಗೆದ್ದ ಯಡಿಯೂರಪ್ಪ ಇನ್ನು ಮುಂದಾದರೂ ಕರ್ನಾಟಕದ ಮರೆಯಲಾಗದ ಮುಖ್ಯಮಂತ್ರಿಯಾಗುತ್ತಾರಾ....?


ಇತ್ತೀಚೆಗೆ ಕರ್ನಾಟಕದ ಜನತೆ ರಾಜಕಾರಿಣಿಗಳ ದೊಂಬರಾಟದಿಂದ ಬೇಸತ್ತಿರುವದನ್ನು ನೋಡಿದರೆ ಮುಂದೊಂದು ದಿನ ರಾಜಕಾರಿಣಿಗಳು ಎಂದರೆ ವಾಕರಿಕೆ ತರುವವರು ಎನ್ನಿಸಬಹುದೇನೋ..? ಯಡಿಯೂರಪ್ಪ ಹಸಿರು ಶಾಲು ಹೊದ್ದು ರೈತರ ಹೆಸರಲ್ಲಿ ಪ್ರಮಾಣ ವಚನ ಸ್ವೀಕರಿಸಿದಾಗಿನಿಂದ ಪ್ರಾಮಾಣಿಕವಾಗಿ ಮಾಡುತ್ತಾ  ಬಂದಿರುವ ಕೆಲಸವೆಂದರೆ ತಮ್ಮ ಮುಖ್ಯ ಮಂತ್ರಿ ಸ್ಥಾನ ಉಳಿಸಿಕೊಳ್ಳಲು ಹೋರಾಟ ನಡೆಸಿರುವುದೇ ಇರಬೇಕು. ಬಂಡಾಯ  ಎದ್ದಾಗಲೆಲ್ಲಾ ದೆಹಲಿ, ದೇವಸ್ಥಾನ , ಮಠ ಸುತ್ತುತ್ತಾ ಅಧಿಕಾರದಲ್ಲಿ ಉಳಿದಿರುವ ಯಡಿಯೂರಪ್ಪನವರಿಗೆ ಪಕ್ಷದೊಳಗಿನ ಹಿತಶತೃಗಳ ಕಾಟವೇ ಅತಿಯಾಗಿ ಕುರ್ಚಿ ರಕ್ಷಣೆಗೆ ಕೊಟ್ಟ ಸಮಯದಲ್ಲಿ   ಅರ್ಧ ಸಮಯ ಜನತೆಗೂ ನೀಡಿದ್ದರೂ  ಕರ್ನಾಟಕ ಕಂಡ ಯಶಸ್ವಿ ಆಡಳಿಗಾರರಾಗುತ್ತಿದ್ದರು. ಸುಮಾರು ನಲವತ್ತು ರ್ಷಗಳಿಂದ ಎರಡು   ಸ್ಥಾನದಿಂದ ಬಿಜೆಪಿ ನೂರಾ ಹತ್ತು ಸ್ತಾನಕ್ಕೇರಲು ಯಡಿಯೂರಪ್ಪನವರ ಶ್ರಮ ಬಹು ದೊಡ್ಡದು. ಅದೆಲ್ಲಕ್ಕಿಂತ  ಹೆಚ್ಚಾಗಿ ಕಳೆದ ಎರಡು ದಶಕಗಳಿಂದ ಕರ್ನಾಟಕದಲ್ಲಿ  ವೀರಶೈವ ನಾಯಕತ್ವದ ಕೊರತೆಯನ್ನು ಸಮರ್ಥವಾಗಿ ಬಳಸಿಕೊಂಡು ಮುಖ್ಯಮಂತ್ರಿ ಹುದ್ದೆ  ಪಡೆಯುವಲ್ಲಿ ಯಶಸ್ವಿಯಾದರು. 

40 ವರ್ಷಗಳ ಸುದೀರ್ಘ ಹೋರಾಟದಿಂದ ಹಂತ ಹಂತವಾಗಿ ಮೇಲೆ ಬಂದ ಯಡಿಯೂರಪ್ಪ  ಇಷ್ಟು ಬೇಗ ತಮ್ಮ ಕುಟುಂಬದವರನ್ನು ಆಡಳಿತದಲ್ಲಿ ಹಸ್ತಕ್ಷೇಪ ಮಾಡಲು ಬಿಡುತ್ತಾರೆ ಎಂದು ಯಾರು ನಿರೀಕ್ಷಿಸಿರಲಿಲ್ಲ. ಹಠವಾದಿ ಯಡಿಯೂರಪ್ಪ ನವರು ತಮ್ಮ ಮುಂಗೋಪದಿಂದ ಶಾಸಕರ ವಿಶ್ವಾಸ ಕಳೆದುಕೊಳ್ಳುತ್ತಾರೆ ಎಂಬ ಮಾತು ಕೂಡಾ ಚಾಲ್ತಿಯಲ್ಲಿದೆ. ಅನೇಕ ತಪ್ಪುಗಳನ್ನು ಮಾಡಿ ಮುಂದೆ ನಾನು ಈ ತರಹ ವರ್ತಿಸುವುದಿಲ್ಲ...... ಮುಂದೆ ಬೇರೆ ಯಡಿಯೂರಪ್ಪನನ್ನು ನೋಡ್ತೀರಿ... ದೇವಸ್ಥಾನದಲ್ಲಿ ಪ್ರಮಾಣ ಮಾಡಿ ಹೇಳ್ತೇನೆ ಮುಂದೆ ರಾಜ್ಯದ ಜನತೆಗಾಗಿ ದುಡಿಯುತ್ತೇನೆ... ರಾಜ್ಯದ ಅಭಿವೃಧ್ಧಿಗಾಗಿ ಸಂಕಲ್ಪ ಮಾಡುತ್ತೇನೆ ಎನ್ನುತ್ತಲೇ ಇರುವ ಯಡಿಯೂರಪ್ಪ ನವರನ್ನು ಕರ್ನಾಟಕದ ಮುಂದಿನ ದಿನಗಳಲ್ಲಿ ನೆನಪಿಡುವ ರೀತಿಯಲ್ಲಿ ಕೆಲಸ ಮಾಡುತ್ತಾರಾ..? ಎನ್ನುವುದು ಜನರ ಪ್ರಶ್ನೆ. 
           ಜನರ ವಿರೋಧಕ್ಕಿಂತಲೂ ಹೆಚ್ಚು ತಮ್ಮ ಪಕ್ಷದ ಶಾಸಕರ,ರಾಜ್ಯಪಾಲ ಭಾರಧ್ವಾಜ್ ಹಾಗೂ ವಿರೋಧ ಪಕ್ಷಗಳ ಟೀಕೆ ಎದುರಿಸಿದ ಕರ್ನಾಟಕದ ಪ್ರಥಮ ಮುಖ್ಯಮಂತ್ರಿ ಎಂದರೆ ಯಡಿಯೂರಪ್ಪನವರೇ ಇರಬಹುದು. ಇಷ್ಟೆಲ್ಲಾ ಅಗ್ನಿ ಪರೀಕ್ಷೆ ಎದುರಿಸಿ ಮುಖ್ಯಮಂತ್ರಿಯಾಗಿ ಉಳಿದಿರುವ ಯಡಿಯೂರಪ್ಪನವರು ರಾಜ್ಯ ಮರೆಯಲಾಗದಂತಹ ಮುಖ್ಯಮಂತ್ರಿಯಾಗಲು ಇನ್ನು ಕಾಲಾವಕಾಶವಿದೆ.
               ಇನ್ನು ಮುಂದಾದರೂ ಸಂಪುಟದಲ್ಲಿ ಶುಧ್ಧ ಹಸ್ತವುಳ್ಳ ಮಂತ್ರಿಗಳನ್ನು ಇಟ್ಟಕೊಂಡು, ಆಡಳಿತದಲ್ಲಿ ತಮ್ಮ ಕುಟುಂಬದವರ ಹಸ್ತಕ್ಷೇಪ ಇರದಂತೆ, ಭ್ರಷ್ಟಾಚಾರ ರಹಿತ ಆಡಳಿತ ನೀಡುವತ್ತ ಆಲೋಚಿಸಬೇಕಿದೆ. ನಾಡಿನ ಜೀವನಾಡಿಯಾದ ರೈತರಿಗೆ ಗುಣಮಟ್ಟದ ವಿದ್ಯುತ್ , ಬೀಜ ಗೊಬ್ಬರ, ಮೂಲಭೂತ ಸೌಲಭ್ಯ ರಾಜ್ಯದ ಮೂಲೆ ಮೂಲೆಗೂ ದೊರಕುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕಿದೆ. ಅಪರೇಶನ್ ಕಮಲ ನಿಲ್ಲಿಸಿ ಬಡ, ದೀನ ದಲಿತ ಜನರ ಎದೆಯಲ್ಲಿ ನೆಮ್ಮದಿಯ ಕಮಲ ಅರಳಿಸುವತ್ತ ಯಡಿಯೂರಪ್ಪನವರ ಆಡಳಿತ ಸಾಗಲಿ ಎಂದು ಕರ್ನಾಟಕ ಬಯಸುತ್ತದೆ ಅಲ್ಲವೇ...?  
                                                            ಪತ್ರೇಶ್ ಹಿರೇಮಠ್ 

24 ಮೇ, 2011

ಪ್ರೀತಿ ಪ್ರೇಮ ಸಂಗಾತಿಗಳಲ್ಲಿ ವ್ಯಾಸಂಗಕ್ಕೆ ಸ್ಪರ್ಧೆ, ಚೈತನ್ಯ ಮೂಡಿಸಬೇಕಲ್ಲವೇ?- ಪತ್ರೇಶ್ ಹಿರೇಮಠರ ಲೇಖನ

ಪ್ರೀತಿ ಪ್ರೇಮ ಇವೆರಡೂ ಶಬ್ದಗಳು ಎಷ್ಟೋ ಯುವಕರನ್ನು ಉತ್ಸಾಹದ ಚಿಲುಮೆಯಲ್ಲಿ ನಲಿದಾಡಿಸುತ್ತವೆ. ಇವೆರಡೂ ಶಬ್ದಗಳನ್ನು ನಂಬಿ ಕೆಲವರು ಜೀವನವನ್ನು ಹಾಳು ಮಾಡಿಕೊಂಡಿದ್ದಾರೆ. ಪ್ರೀತಿಯ ಬಗ್ಗೆ ಯಾವ ವಿಜ್ಞಾನಿಯು ನಿಖರವಾಗಿ ಹೇಳಲಾರ. ಅದೊಂದು ಸುಪ್ತ ಅನುಭವ. ಅನುಭವಿಸಿದ ಪ್ರೇಮಾನುಭಾವಿಗಳಿಗೆ ಗೊತ್ತು. ಆದರೆ ವಿದ್ಯಾಭ್ಯಾಸ ಸಮಯದಲ್ಲಿ ಪ್ರೀತಿ ಎಷ್ಟು ಸೂಕ್ತ? ಎನ್ನುವ ಪ್ರಶ್ನೆ ಗಮನಾರ್ಹ.
               ಪ್ರೀತಿ ಹುಟ್ಟುವುದೇ ಆಕಸ್ಮಿಕ ಅದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಆ ಪ್ರೀತಿಯನ್ನು ಸಂಯಮದಿಂದ ದೀರ್ಘಕಾಲ ಕಾಪಾಡಿಕೊಂಡು ನಮ್ಮ ಬದುಕನ್ನು ರೂಪಿಸಿಕೊಳ್ಳುವ ಕಲೆ ಎಲ್ಲಾ ಯುವಕ ಯುವತಿಯರಿಗೂ ಬರುವುದಿಲ್ಲ. ಪ್ರೀತಿ ಹುಣ್ಣಿಮೆ ಚಂದ್ರನಂತೆ ಯುವಕ ಯುವತಿಯರ ಮನಸ್ಸನ್ನು ಹೊಕ್ಕು ನವಿರಾದ ಮಧುರ ಭಾವನೆಗಳನ್ನು ಹರಿಸಿ, ಕನಸಿನ ಲೋಕದಲ್ಲಿ ವಿಹರಿಸಿ, ಉನ್ಮಾದದಲ್ಲಿ ತೇಲಾಡಿಸಿ ಕೊನೆಗೆ ಅಮವಾಸ್ಯೆಯ ಕಗ್ಗತ್ತಲ ರೂಪದಲ್ಲಿ ಪ್ರೇಮಿಗಳನ್ನು , ಅವರ ಕುಟುಂಬದವರನ್ನು ಕಾಡತೊಡಗುತ್ತದೆ.ಬೇರ್ಪಟ್ಟ ಭಗ್ನ ಪ್ರೇಮಿಗಳು ಪ್ರೀತಿಗಾಗಿ ಪ್ರಾಣವನ್ನೇ ಕಳೆದುಕೊಂಡಿದ್ದಾರೆ.


     ತಂದೆ ತಾಯಿ ಮಕ್ಕಳ ಭವಿತವ್ಯದ ಬಗೆಗೆ ಅಪಾರ ಕನಸಿಟ್ಟು ಓದಲು ಕಳಿಸುತ್ತಾರೆ. ಓದುವ ಸಮಯದಲ್ಲಿ ಪ್ರೀತಿಯ ಹೆಸರಲ್ಲಿ ಸಮಯ ವ್ಯರ್ಥಗೊಳಿಸಿ ಜೀವನ ಹಾಳು ಮಾಡಿಕೊಳ್ಳುವ ಬದಲು ಚೆನ್ನಾಗಿ ಓದಿ, ಬದುಕಿಗೆ ಆರ್ಥಿಕ ಭದ್ರತೆಯನ್ನು ಕಲ್ಪಿಸಿಕೊಂಡು ಮನಸ್ಸಿಗೆ ಇಷ್ಟವಾದ,
ನಿಮ್ಮ ಹವ್ಯಾಸ ಭಾವನೆಗಳಿಗೆ ಹೊಂದಿಕೊಳ್ಳುವ ಸಂಗಾತಿಯನ್ನು ಆಯ್ಕೆ ಮಾಡಿಕೊಂಡರೆ ಸ್ವರ್ಗವನ್ನೇ ಧರೆಗಿಳಿಸಬಹುದು. ತಂದೆ ತಾಯಿ ಮಕ್ಕಳ ಮುಂದಿನ ಭವಿಷ್ಯ ಚೆನ್ನಾಗಿರಲಿ ಎಂಬ ದೂರಾಲೋಚನೆಯಿಂದ ನಮ್ಮ ಹಿತಕ್ಕಾಗಿಯೇ ಯೋಚಿಸುತ್ತಿದ್ದಾರೆಂಬುದನ್ನು ಮರೆಯದಿರಿ. ನಿಮ್ಮ ಆಯ್ಕೆ ನಿಮ್ಮ ತಂದೆ ತಾಯಿಗಳಿಗೂ ಒಪ್ಪಿಗೆಯಾದರೆ ಜಗತ್ತಿನಲ್ಲಿ ನಿಮ್ಮಂತ ಅದೃಷ್ಟಶಾಲಿಗಳು ಯಾರೂ ಇಲ್ಲವೆಂದು ತಿಳಿಯಿರಿ........ ಪ್ರೀತಿಯ ಮಾಯೆ ಮೈಮನಗಳ ಹೊಕ್ಕರೆ ಯಾರ ಹಿತನುಡಿಯು ಪ್ರೀತಿ ಎಂಬ ಪ್ರೇತ ಹೊಕ್ಕ ಪ್ರೇಮಿಗಳ ದಪ್ಪ ಚರ್ಮವನ್ನು ತಲುಪಲಾರದು. 

ಪ್ರೀತಿಯೆಂದರೆ ಬದುಕನ್ನು ಸುಂದರವಾಗಿ ರೂಪಿಸಿಕೊಳ್ಳುವುದು.ಪ್ರೀತಿ ಪ್ರೀತಿಸುವವರ ಬದುಕಿಗೆ ಪರಸ್ಪರ ಪೂರಕ ಹಾಗೂ ಚಾಲೆಂಜಿಂಗ್ ಆಗಿರಬೇಕು. ಪ್ರೀತಿ ಸಂಗಾತಿಗಳನ್ನು ಸ್ಪರ್ಧಾತ್ಮಕವಾಗಿ ಅಧ್ಯಯನ ಮಾಡಲು, ದುಡಿಯಲು ಪ್ರೇರೇಪಿಸುವಂತಿರಬೇಕು.
    ಪ್ರೀತಿಸಿ, ಪ್ರೀತಿಗೆ ಸಂಯಮವಿರಲಿ, ನಿಮ್ಮ ಬದುಕಿನೆಡೆಗೆ ಗುರಿಯಿರಲಿ, ಗುರಿ ತಲುಪಿದಾಗ ನಿಮ್ಮ ಆಲೋಚನಾ ಮಟ್ಟ ಬದಲಾಗಿರುತ್ತದೆ. ಆಗ ನಿಮ್ಮ ಕನಸುಗಳಿಗೆ ಬಣ್ಣ ಕೊಡಿರಿ. ಸಾರ್ಥಕ್ಯ ಆಯ್ಕೆ ನಿಮ್ಮದಾಗಿರುತ್ತದೆ. ಇಲ್ಲದಿದ್ದರೆ ಪ್ರೀತಿಯ ಮಾಯೆಯಲ್ಲಿ ಬಿದ್ದು ಮಾಡಿಕೊಂಡ ಆಯ್ಕೆಯ ಬಗ್ಗೆ ಜೀವನದ ಕೊನೆವರೆಗೂ ಪರಿತಪಿಸಬೇಕಾಗುತ್ತದೆ.
              ಒಂದು ವೇಳೆ ಪ್ರೀತಿಯ ಮಾತು ಕೇಳಿ ವಿದ್ಯಾಭ್ಯಾಸ ಕಡೆಗಣಿಸಿದ್ದೀರಾದರೆ ಅದು ನಿಮ್ಮ ತಪ್ಪಲ್ಲ , ವಯೋಸಹಜ ಮನೋಧರ್ಮ. ಕಾಲ ಮಿಂಚಿ ಹೋಗುವ ಮುನ್ನ ತಿದ್ದಿಕೊಳ್ಳಿ. ಸಂಗಾತಿಗಳಿಬ್ಬರೂ ಮೊದಲು ಓದಿನ ಕಡೆ ಗಮನ ಕೊಡಿ. ಜೀವನ ಅನುಭವಿಸಲು ಸಾಕಷ್ಟು ಸಮಯವಿದೆ. ಆದರೆ ಓದುವ ಸುವರ್ಣ ಯುಗ ಮುಂದೆ ಬೇಕೆಂದರೂ ಸಿಗದು.
               ಪ್ರೀತಿಯನ್ನು ಕೊಲ್ಲಿ ಎಂದೂ ಯಾರೂ ಹೇಳುವುದಿಲ್ಲ? ಆದರೆ ನಿಮ್ಮ ಪ್ರೀತಿ ನಿಮ್ಮಿಬ್ಬರನ್ನು ಸುಖವಾಗಿ ಬದುಕಿಸುತ್ತಾ ಅಂತಾ ತಂದೆ, ತಾಯಿ, ಅಣ್ಣ, ತಮ್ಮ, ಅಕ್ಕ, ತಂಗಿ ಹಾಗೂ ಸಮಾಜ ಕೇಳುತ್ತದೆ. ಸುಖವಾಗಿ ಬದುಕುವ ಹಾಗೂ ಬದುಕಿಸುವ ಸಾಮರ್ಥ್ಯ ನಿಮಗೆ ಬರಬೇಕಾದರೆ ಮೊದಲು ವ್ಯಾಸಂಗ ಮಾಡಿ ನಂತರ ನಿಮ್ಮ ಗುರಿ ತಲುಪಿ ಪ್ರೀತಿಯೆಂಬ ಮಾಯಾಂಗನೆಯನ್ನು ನಿಮ್ಮಿಷ್ಟದಂತೆ ಹುಡುಕಿಕೊಳ್ಳಿ....                   
                 ಈಗಲೂ ಎಷ್ಟೋ ಯುವಕ ಯುವತಿಯರು ತಮ್ಮ ಸಂಗಾತಿ ಚೆನ್ನಾಗಿ ಓದಲಿ, ನೌಕರಿಗೆ ಹೋಗಲಿ ಎಂದು ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹ ನೀಡುತ್ತಾರೆ. ಇನ್ನು ಕೆಲವರು ಅವರ ಓದನ್ನು ಲೆಕ್ಕಿಸದೇ ಪ್ರೇಮ ವಿವಾಹವೆಂಬ ಬಲವಂತದ ಮಾಘ ಸ್ನಾನಕ್ಕೆ ನೂಕುತ್ತಾರೆ.ಮದುವೆ ನಂತರದ ಅವರ ಜೀವನ ಅನುಭವಿಸಿದವರಿಗಷ್ಟೇ ಗೊತ್ತು..?
     ಪ್ರಿಯರೇ.. ಓದುವಾಗ ಎಲ್ಲರೂ ಪ್ರೀತಿಸುತ್ತಾರೆಂದು ನೀವು ಪ್ರೀತಿಸಲು ಹೋದೀರಿ....
ಅವಸರದ ಪ್ರೀತಿ ಅವನತಿಗೆ ದಾರಿ......
( ಪ್ರಜಾವಾಣಿ ಯುವಜನ ವಿಭಾಗದಲ್ಲಿ ಪ್ರಕಟಗೊಂಡ ಲೇಖನ)
ಪತ್ರೇಶ್ ಹಿರೇಮಠ್ 

22 ಮೇ, 2011

ಪತ್ರೇಶ್ ಹಿರೇಮಠರ ಕವನ- - - ಎಲ್ಲಿದ್ದೀಯಾ ಜೋಗಿ ಜಂಗಮನೇ...?


ಅಂಗೈಯಲ್ಲಿ ಲಿಂಗ ಹಿಡಿದು 
ಅವರಿವರ ಮನೆಯ ಫ್ರೇಮಿನಲ್ಲಿ ಕುಳಿತರಷ್ಟೇ ಸಾಲದು..
ನೀ ಬಿತ್ತಿದ ನುಡಿಯು, ಮನೆ ಮನಗಳ ತಟ್ಟಬೇಕು..
ಎಲ್ಲಿದ್ದೀಯಾ..? ಜೋಗಿ ಜಂಗಮನೇ ಎದ್ದು ಬಾ  ಎದ್ದು ಬಾ....

ಸಮಾನತೆಯ ಮಾನದಂಡಸಾರಿ 
ಬಿಜ್ಜಳನ ತಲೆಯ ಮೇಲೆ ಹೇರಿ
ಸಿರಿ ಸಂಪದವ ತ್ಯಜಿಸಿ ಹೊರಟವನೇ
ಎಲ್ಲಿದ್ದೀಯಾ..? ಜೋಗಿ ಜಂಗಮನೇ ಎದ್ದು ಬಾ  ಎದ್ದು ಬಾ....

ಹೆಣ್ಣು ಗಂಡೆನ್ನಲಿಲ್ಲ, ಮೇಲು ಕೀಳೆನ್ನಲಿಲ್ಲ,
ಉಳ್ಳವರ  ಎದೆಯಲ್ಲಿ ಅಳುಕು ಮೂಡಿಸಿ,
ಮಂಟಪದ ನಡುವೆ ಎಲ್ಲರನು ಕೂರಿಸಿದ ಯೋಗಿ,
ಎಲ್ಲಿದ್ದೀಯಾ..? ಜೋಗಿ ಜಂಗಮನೇ ಎದ್ದು ಬಾ  ಎದ್ದು ಬಾ....

ಸ್ಥಾವರಕ್ಕಳಿವುಂಟು ಜಂಗಮಕ್ಕಳಿವಿಲ್ಲವೆಂದೆ,
ಈಗೀಗ  ಊರೂರ ಕಂಟಿಯಲಿ ಮಠಮಾನ್ಉದ ಅಂಟುಗಳು,
ಜಂಗಮರ ತಲೆಗೀಗ ಹತ್ತಿದೆ ಕಿಲುಬು ಜಂಗು,
ನೀ ಹ್ಯಾಂಗ ಹೇಳಿದೆಯೋ, ಜಂಗಮಕ್ಕಳಿವಿಲ್ಲ..? ಸುಳ್ಳಾಯಿತಲ್ಲ..?
ಎಲ್ಲಿದ್ದೀಯಾ..? ಜೋಗಿ ಜಂಗಮನೇ ಎದ್ದು ಬಾ  ಎದ್ದು ಬಾ....

ಬೇಕಾದಷ್ಟು ತಂದು ಜೊತೆಗೂಡಿ ಉಂಡು,
ಅದುವೇ ನೀನಂದೇ ದಾಸೋಹ..
ಈಗೀಗ ಹೆಂಡತಿ ಮಕ್ಕಳ ಹೆಸರಲ್ಲೂ ಸ್ವಾಹಃ
ಅತ್ತೆ ಸೊಸೆ ಹೆಸರಲ್ಲೂ ಸ್ವಾಹಃ
ನೈಸ್, ಗಣಿ, 2ಜಿ, ಕಾಮನ್ವೆಲ್ತ್, ಸತ್ಯಂ ಷೇರುಗಳಲ್ಲೂ 
ಸಾವಿರ, ಲಕ್ಷ ಲಕ್ಷ ಕೋಟಿ ಸ್ವಾಹಾಃ
ಎಲ್ಲಿದೆ ಜೋಗಿ ಜಂಗಮನೇ ನಿನ್ನ ದಾಸೋಹ..?
ಈಗ  ಹುಳು ಹತ್ತಿದ ಅಕ್ಕಿಯ ಬಿಸಿಯೂಟವೆಂಬ ಅಕ್ಷರ ದಾಸೋಹ....

ಕರೆಂಟೀಗ ಕರದಂಟಿನಷ್ಟೆ ಅಪರೂಪ.
ಛಳಿಗಾಲದಲ್ಲೂ ರೈತರಿಗೆ ಚೀನಾ ಪ್ರವಾಸ.
ಕಂಪ್ಯೂಟರಲ್ಲಿ ನೇಗಿಲು ಹಿಡಿಯದವರ ಕೃಷಿ ಮಾಹಿತಿ
ಸಣ್ಣ ದೊಡ್ಡ ಸಮಸ್ಯೆಗೊಂದು ಆಯೋಗ
ಹೋದಲೆಲ್ಲಾ ಕೋಟಿ ಕೋಟಿ ಯೋಜನೆಯ ಆಶ್ವಾಸನೆಯ ಸುರಿಮಳೆ
ಸತ್ತ ರೈತರ ಶವ ಸುಡಲು ಸಾವಿರ ರೂಪಾಯಿ ಇನಾಮು..
ಬಿತ್ತನೆಗೆ ಬೀಜ ಗೊಬ್ಬರ ಕೇಳಿದರೆ ಎದೆಗೆ ಗುಂಡು..
ಕಟ್ಟೆ ಪುರಾಣದ ಹಿರಿಯರ ಚಾ ಖರ್ಚಿಗೆ ತಿಂಗಳಿಗೆ ನಾನ್ನೂರು ರೂಪಾಯಿ..
ಎಲ್ಲಿದ್ದೀಯಾ..? ಜೋಗಿ ಜಂಗಮನೇ ಎದ್ದು ಬಾ  ಎದ್ದು ಬಾ....

ಬರುವುದಾದರೇ ಬೇಗ ಬಾ, ಹಾಗೆ ಬರಬೇಡ..?
ಲಿಂಗದ ಬದಲು ಬಂದೂಕು ತುಂಬಾ ಗುಂಡುಗಳಿರಲಿ..
ನಿನ್ನ ವಚನದ ಜೋಳಿಗೆಯ ತುಂಬಾ ಬಾಂಬುಗಳಿರಲಿ...
ವಿಭೂತಿಪುಡಿ ಬದಲು ಅಂಥ್ರಾಕ್ಸ ನ ಪುಡಿ ಇರಲಿ..
ಹಸಿದು ನಿಂತವರ ರಕ್ತ ಹೀರುವ ವೇಷಧಾರಿಗಳ ಮೇಲೆ..
ಬಂದೂಕು, ಬಾಂಬು, ಆರ್ ಡಿಎಕ್ಸ್ ನ ಪುಡಿ ಚೆಲ್ಲು..
ಹಸಿದು ನಿಂತವರಿಗೆ ಅನ್ನ ಸಿಗಲಿ
ಬಡವರ ಮುಖದಲ್ಲಿ ನಗುವಿನ ಪರಿಮಳ ಹರಡಲಿ..
ಎಲ್ಲಿದ್ದೀಯಾ..? ಜೋಗಿ ಜಂಗಮನೇ ಎದ್ದು ಬಾ  ಎದ್ದು ಬಾ....

                                                      
                                                                                          ಪತ್ರೇಶ್ ಹಿರೇಮಠ್

                                                                                                                         

ಪರಿಸರ ಪ್ರೇಮಿ ಗ್ರೀಟಿಂಗ ಕಾರ್ಡ್ ಮತ್ತು ಶಾಸಕ ನಾಗೇಂದ್ರರ ಪಿಎ ಡಾ|| ವೆಂಕಟಗಿರಿ ದಳವಾಯಿಯವರ ಶ್ರಮವೂ.....


ಬಳ್ಳಾರಿ ಜಿಲ್ಲೆಯ ಹಿಂದುಳಿದ ಹಾಗೂ ವಿವಿಧ ವೈಶಿಷ್ಟ್ಯ ಹೊಂದಿರುವ ಕೂಡ್ಲಿಗಿ  ಕ್ಷೇತ್ರದ ಪರಿಸರ ಪ್ರೇಮಿ ಶಾಸಕ ನಾಗೇಂದ್ರರ  ಆಪ್ತ ಸಹಾಯಕ ಡಾ || ವೆಂಕಟಗಿರಿ ದಳವಾಯಿಯವರ  ವಿಶಿಷ್ಟ ಪ್ರಯತ್ನವಿದು. ಸಮಗ್ರ ಕೂಡ್ಲಿಗಿ ತಾಲೂಕಿನ ಪರಂಪರೆಯನ್ನೇ ಬಿಂಬಿಸುವಂತಹ ಗುಡ್ಡಗಾಡು, ಬೆಟ್ಟ, ಅರಣ್ಯ ಪ್ರದೇಶ, ಅಪರೂಪದ  ಔಷಧಿ ಸಸ್ಯಗಳು, ಕಾಡುಪ್ರಾಣಿಗಳು,ಶಿಲಾಯುಗದ ಪಳಯುಳಿಕೆಗಳು, ವೀರಗಲ್ಲು, ಮಾಸ್ತಿಗಲ್ಲು, ಕಿಲಾರಿ ವಂಶಸ್ಥರು, ಬುಡಕಟ್ಟು ಜನರು ಹಾಗೂ ಕೂಡ್ಲಿಗಿ ತಾಲೂಕಿನ ಕಲೆ ಸಂಸ್ಕೃತಿಯನ್ನು ಶಾಸಕರು ಹಬ್ಬ ಹರಿದಿನಗಳಲ್ಲಿ  ಶುಭಾಶಯ ಕಳುಹಿಸುವ ಶುಭಾಶಯ ಪತ್ರಗಳಲ್ಲಿ ಬಳಸಿಕೊಳ್ಳಲಾಗಿದೆ.
ಈ ಶುಭಾಶಯ ಪತ್ರದ ಚಿತ್ರಗಳಲ್ಲಿ ತಾವು ನೋಡುವಂತೆ ಶುಭಾಶಯ ಪತ್ರಗಳಿಗೆ ಸುಗಂಧಿ ಬಳ್ಳಿ, ನೆಲಬೇವು, ಕಾಡುಬಿಕ್ಕೆ, ಹೀಗೆ ವಿವಿಧ  ಔಷಧಿ ಸಸ್ಯಗಳ ನೈಜ  ಎಲೆಗಳನ್ನೇ  ಶುಭಾಶಯ ಪತ್ರಗಳಿಗೆ ಅಂಟಿಸಿ ಅದರ ಅಡಿ ಇದನ್ನು ಯಾವ ಕಾಯಿಲೆಗಳಿಗೆ ಉಪಯೋಗಿಸಬಹುದು ಎಂಬುದನ್ನು ವಿವರಿಸಲಾಗಿದೆ. 
                             ಮುಖಪುಟದಲ್ಲಿ ಶಾಸಕ ನಾಗೇಂದ್ರರ ಚಿತ್ರದ ಜೊತೆಗೆ ಅಪರೂಪದ ಪ್ರಾಣಿಗಳ ಚಿತ್ರ, ನಂತರ  ಎರಡನೆಯ ಪುಟದಲ್ಲಿ ಅಪರೂಪಕ್ಕೆ ಕಾಣಸಿಗುವ ಪುಷ್ಪಗಳ ಸುಂದರ ಚಿತ್ರಗಳು, ಮೂರನೆಯ ಪುಟದಲ್ಲಿ ನೈಜ  ಔಷಧಿ ಸಸ್ಯಗಳ ಎಲೆಗಳನ್ನೆ ಕಾಡಿನಿಂದ ಹುಡುಕಿ ತಂದು ಅಂಟಿಸಿದ್ದಾರೆ. ನಾಲ್ಕನೆಯ ಪುಟದಲ್ಲಿ ಕೂಡ್ಲಿಗಿ ತಾಲೂಕಿನ ಶಿಲಾಯುಗದ ಕುರುಹುಗಳಿರುವ ಕುಮತಿಯ ಶಿಲಾಯುಗದ ರಕ್ಕಸಗಲ್ಲು ಮತ್ತು ರಕ್ಕಸಮಟ್ಟಿಯ ಚಿತ್ರಗಳನ್ನು ಹಾಕಿ ಶುಭಾಶಯ ಪತ್ರ ರಚಿಸಲಾಗಿದೆ.ಈ ಶುಭಾಶಯ ಪತ್ರಗಳ ವಿಶೇಷವೇನೆಂದರೆ ನೈಜ ಸಸ್ಯಗಳನ್ನೇ ಶುಭಾಶಯ ಪತ್ರಕ್ಕೆ ಅಂಟಿಸಿರುವುದು. ಕಾಡಿಗೆ ಹೋಗಿ ಅಪರೂಪದ ಸಸ್ಯಗಳನ್ನು ಹುಡುಕಿ ತಂದು ಹಚ್ಚುವ ಕೆಲಸ ಸುಲಭದ್ದಲ್ಲ.
                                             ಶಾಸಕ ನಾಗೇಂದ್ರರ  ಈ ಪ್ರಯತ್ನಕ್ಕೆ ಮೆದುಳಾಗಿ ಕೈ ಹಾಕಿ ಈ ಯೋಜನೆ ಯಶಸ್ವಿಗೊಳಿಸುವಲ್ಲಿ ಅವರ ಆಪ್ತ ಸಹಾಯಕ  ಡಾ|| ವೆಂಕಟಗಿರಿ ದಳವಾಯಿಯವರ ಶ್ರಮವೂ ಪ್ರಮುಖ ಕಾರಣ. ಡಾ|| ದಳವಾಯಿ ಮೂಲತಃ ಪಿಹೆಚ್ ಡಿ ಪದವೀಧರರು,ಉಪನ್ಯಾಸಕರಾಗಿ ಸೇವೆ ಸಲ್ಲಿಸಿದವರು, ಹೊಸ ಹೊಸ ಯೋಜನೆಗಳ ಮೂಲಕ ಕ್ಷೇತ್ರದಲ್ಲಿ ಬದಲಾವಣೆಗೆ ಶಾಸಕರೊಂದಿಗೆ ಕೈ ಜೋಡಿಸಿದವರು. ಶಾಸಕರ ಆಪ್ತ ಸಹಾಯಕ ಹುದ್ದೆಯ ಜೊತೆ ಶಾಲೆಗಳಲ್ಲಿ ಉಪನ್ಯಾಸ, ನಾಟಕ ಪ್ರದರ್ಶನ, ಸಾಂಸ್ಕೃತಿಕ ಕಾರ್ಯಕ್ರಮಗಳ ಆಯೋಜನೆ ಮಾಡುವ ಮೂಲಕ ಕಲೆ, ಸಂಸ್ಕೃತಿ, ಸಾಹಿತ್ಯ, ಶೈಕ್ಷಣಿಕ ಅಭಿವೃಧ್ಧಿ ಗಾಗಿ ಶ್ರಮಿಸುತ್ತಿದ್ದಾರೆ.
ಕೂಡ್ಲಿಗಿ ಶಾಸಕ ನಾಗೇಂದ್ರ ಹಾಗೂ ಆಪ್ತ ಸಹಾಯಕ  ಡಾ|| ವೆಂಕಟಗಿರಿ ದಳವಾಯಿಯವರಂತೆ ನಾಡಿನ ಎಲ್ಲಾ ಶಾಸಕರು, ಹಾಗೂ ಆಪ್ತ ಸಹಾಯಕರು, ಜನಪ್ರತಿನಿಧಿಗಳು, ಹಿರಿಯ ಅಧಿಕಾರಿಗಳು ಇಂತಹ ಹೊಸ ಹೊಸ ಕಾರ್ಯಕ್ಕೆ ಕೈ ಹಾಕಿದರೆ ನಾಡಿನ ಜನರಲ್ಲಿ ಪರಿಸರ, ಸಂಸ್ಕೃತಿ, ಇತಿಹಾಸ ಪ್ರೇಮ ಉಳಿದೀತಲ್ಲವೇ..?
ಕೂಡ್ಲಿಗಿ ಶಾಸಕ ನಾಗೇಂದ್ರ ಹಾಗೂ ಆಪ್ತ ಸಹಾಯಕ ||ವೆಂಕಟಗಿರಿ ದಳವಾಯಿಯವರಿಗೆ ತಮ್ಮದೊಂದು ಅಭಿನಂದನೆ ಸಲ್ಲಿಸಿ 

ಡಾ||ವೆಂಕಟಗಿರಿ ದಳವಾಯಿ ಮೊಬೈಲ್...9448234280








ಪತ್ರೇಶ್ ಹಿರೇಮಠ
ಹಗರಿಬೊಮ್ಮನಹಳ್ಳಿ





21 ಮೇ, 2011

ಪ್ರಕಟಣೆಗಾಗಿ ಬರಹಗಾರರಿಂದ ಅಪ್ರಕಟಿತ ಕೃತಿಗಳ ಆಹ್ವಾನ



ಬಳ್ಳಾರಿ ಜಿಲ್ಲೆ ಹಗರಿಬೊಮ್ಮನಹಳ್ಳಿ ತಾಲೂಕು ಬಸರಕೋಡಿನ "ಕೊಹಿಮ ಪಬ್ಲಿಕೇಶನ್ಸ್" ವತಿಯಿಂದ ಪ್ರಕಟಣೆಗಾಗಿ ಬರಹಗಾರರಿಂದ ಹತ್ತು (10) ಅಪ್ರಕಟಿತ ಕೃತಿಗಳನ್ನು  ಆಹ್ವಾನಿಸಲಾಗಿದೆ. ಹತ್ತು ಕೃತಿಗಳಲ್ಲಿ ಕವನ ಸಂಕಲನ, ಕಥಾ ಸಂಕಲನ, ಲಲಿತ ಪ್ರಬಂಧ, ನಾಟಕ(ಸಾಮಾಜಿಕ ಹೊರತು ಪಡಿಸಿ) ಐತಿಹಾಸಿಕ,ಪೌರಾಣಿಕ ಪ್ರಸಿದ್ಧರ ವ್ಯಕ್ತಿ ಚಿತ್ರಗಳು, ಪ್ರಾಥಮಿಕ ಹಾಗೂ ಪ್ರೌಢಶಾಲಾ ಮಕ್ಕಳಿಗೂ ಅರ್ಥವಾಗುವಂತಹ ವಿಜ್ಞಾನಲೇಖನಗಳು,ವಿಜ್ಞಾನಿಗಳ ಪುಸ್ತಕಗಳಿಗೆ ಆದ್ಯತೆ ನೀಡಲಾಗುವುದು.ಆಸಕ್ತ ಬರಹಗಾರರು ತಮ್ಮ ಅಪ್ರಕಟಿತ ಕೃತಿಗಳನ್ನು ಡಿ.ಟಿ.ಪಿ. ಮಾಡಿಸಿ ಅದರ ಎರಡು ಪ್ರತಿಗಳನ್ನು ತಮ್ಮ ಇತ್ತೀಚಿನ ಸ್ಪಷ್ಟ ವಿಳಾಸ ಮೊಬೈಲ್ ಸಂಖ್ಯೆ ಅಥವಾ ಸ್ಥಿರ ದೂರವಾಣಿ ಸಂಖ್ಯೆಯೊಂದಿಗೆ ಈ ಕೆಳಕಂಡ ವಿಳಾಸಕ್ಕೆ ಅಂಚೆಯ ಮೂಲಕ ಕಳುಹಿಸಲು ಕೋರಲಾಗಿದೆ. ಕೃತಿ ಸ್ವಾಮ್ಯ ಪ್ರಕಾಶಕರದಾಗಿರುತ್ತದೆ.


ವಿಳಾಸ:-


ಪತ್ರೇಶ್ ಹಿರೇಮಠ್
ಪ್ರಕಾಶಕ
"ಕೊಹಿಮ ಪಬ್ಲಿಕೇಶನ್ಸ್"
ಬಸರಕೋಡು (ಅಂಚೆ) 583224
ಹಗರಿಬೊಮ್ಮನಹಳ್ಳಿ (ತಾಲೂಕು)
ಬಳ್ಳಾರಿ (ಜಿ)
ಜಂಗಮ:- 9844338881
ಸ್ಥಿರ :- 08397249044

20 ಮೇ, 2011

ಪತ್ರೇಶ ಹಿರೇಮಠ ರ ಒಂದು ಕವನ - ಸತ್ತ ಸಮುದ್ರ




ನೀ ನನ್ನ ಮರೆತೆಯಾದೊಡೆ,ನಾನು
ರೆಕ್ಕೆ ಪುಕ್ಕವಿಲ್ಲದ ಹಕ್ಕಿ,
ಮೋಡಗಳಿಲ್ಲದ ಆಕಾಶ,
ಹರ್ಷವಿಲ್ಲದ ನಾಟಕೀಯ ನಗು....

ನೀ ನನ್ನ ಮರೆತೆಯಾದೊಡೆ, ನಾನು
ಕಳೆಯಿಲ್ಲದ ಚಂದ್ರ,
ಉದುರಿಬೀಳುವ ಉಲ್ಕೆ ನಕ್ಷತ್ರ
ದೂರದಲ್ಲಿನ ಅಸ್ಪಷ್ಟ ಪುಂಜ

ನೀ ನನ್ನ ಮರೆತೆಯಾದೊಡೆ, ನಾನು
ಬತ್ತಿದ ಒಣ ಒರತೆ,
ತೆರೆಯ ಆರ್ಭಟವಿಲ್ಲದ,
ಸತ್ತ ಸಮುದ್ರ...

ನೀ ನನ್ನ ಮರೆತೆಯಾದೊಡೆ, ನಾನು
ಫಸಲಿಲ್ಲದ ಎರೆ ನೆಲ,
ಚಿಗಿತಂತೆ ಕಂಡೂ ಬಾಡುವ ಬೆಳೆ,
ಮಳೆಗೆ ಕಾಯುವ ಬಿರಿ ಬಿಟ್ಟ ಭೂಮಿ....
ನೀ ನನ್ನ ಮರೆತೆಯಾದೊಡೆ, ನಾನು
ಮುಂಜಾವಿನ ಚಿತ್ರವಿಲ್ಲದ ಕನಸು,
ನೋವಿನಿಂದ ನರಳುವ,
ಯಾಂತ್ರಿಕ ಜೀವಂತ ದೇಹ.......


ಪತ್ರೇಶ್  ಹಿರೇಮಠ್
ಹಗರಿಬೊಮ್ಮನಹಳ್ಳಿ

ರಾಜ್ಯಸಭಾ ಸದಸ್ಯ ಅನಿಲ್ ಲಾಡ್ ರ ಲೋಕಪ್ಪನಹೊಲ ತೋಟದ ಗುಲಾಬಿ ಹೂಗಳು ವಿದೇಶಕ್ಕೆ..


 ಪ್ರೇಮಿಗಳ ದಿನಾಚರಣೆಯ ದಿನ ಗುಲಾಬಿ ಹೂ ಕೊಟ್ಟು ಪ್ರೇಮ ನಿವೇದನೆ ಮಾಡಿಕೊಳ್ಳುವಾಗ ಶಿವಸೇನೆ, ಭಜರಂಗದಳದ ಕಾರ್ಯಕರ್ತರು ಎಲ್ಲಿ ಹಿಂಬಾಲಿಸಿ ತಾಳಿ ಕಟ್ಟಿಸಿ ಬಿಡುತ್ತಾರೋ ಎಂಬ ಹೊಸ ಭಯದ ನಡುವೆಯೂ ಗುಲಾಬಿ ಹೂಗಳಿಗೆ ಬೇಡಿಕೆ ಕಡಿಮೆಯಾಗಿಲ್ಲ. ಅದರಲ್ಲೂ ಕೆಂಪು ಗುಲಾಬಿಗೆ ಜಗತ್ತಿನೆಲ್ಲೆಡೆಯೂ  ಪ್ರೇಮಿಗಳ ದಿನಾಚರಣೆಯ ಫೆಬ್ರುವರಿ 14 ರಂದು ವಿಪರೀತ ಡಿಮ್ಯಾಂಡ್.


ಬಳ್ಳಾರಿ ಜಿಲ್ಲೆ ಹಗರಿಬೊಮ್ಮನಹಳ್ಳಿ ತಾಲೂಕಿನ ಲೋಕಪ್ಪನಹೊಲ ಗ್ರಾಮದ ಬಳಿ ಇರುವ ಕಾಂಗ್ರೆಸ್ ನ ರಾಜ್ಯ ಸಭಾ ಸದಸ್ಯ ಅನಿಲ್ ಲಾಡ್ ಒಡೆತನದ ವಿ.ಎಸ್.ಎಲ್.ಅಗ್ರೊ ಟೆಕ್ ಗುಲಾಬಿ ತೋಟದಲ್ಲಿ ಪ್ರೇಮಿಗಳ ದಿನಾಚರಣೆಗೆಂದೇ ವಿಶೇಷವಾಗಿ ಕೆಂಗುಲಾಬಿಯನ್ನು ಬೆಳೆದು ರಫ್ತು ಮಾಡಲಾಗುತ್ತಿದೆ.     ಬಳ್ಳಾರಿಯ ಮತ್ತೊಂದು ಮುಖವೇ ಬಿಸಿಲು. ಇಂತಹ ಬಿರು ಬಿಸಿಲು ನಾಡಿನ ಕೆಂಗುಲಾಬಿ ಪ್ರೀತಿಸುವ ಹೃದಯಗಳ ನವಿರಾದ ಮಧುರ ಭಾವನೆಗಳನ್ನು ಹಂಚಿಕೊಳ್ಳಲು ಸಹಕಾರಿಯಾಗುತ್ತಿದೆ. ಲೋಕಪ್ಪನ ಹೊಲದ ಬಳಿ 26 ಎಕರೆ ಪ್ರದೇಶದಲ್ಲಿ ಗುಲಾಬಿ ಬೆಳೆಯುತ್ತಿದ್ದು 800ಕ್ಕೂ ಹೆಚ್ಚು ಮಹಿಳೆಯರು ಹಾಗೂ ಪುರುಷರು ಇಲ್ಲಿ ಕೆಲಸ ಮಾಡುತ್ತಿದ್ದಾರೆ. ಅತ್ಯಾಧುನಿಕ ತಂತ್ರಜ್ಷಾನದಿಂದ ನಿರ್ಮಿಸಲಾಗಿರುವ 26 ಗ್ರೀನ್ ಹೌಸ್ ಗಳಲ್ಲಿ ವಿಶಿಷ್ಟವಾಗಿ ಗುಲಾಬಿಯನ್ನು ಬೆಳೆಯಲಾಗುತ್ತಿದೆ. ಹಬ್ಬ ಹರಿದಿನ, ದಿನಾಚರಣೆಗಳ ಸಂದರ್ಭಕ್ಕೆ ಒದಗುವಂತೆ ಬೆಳೆ ಪದ್ಧತಿ ಅನುಸರಿಸಲಾಗುತ್ತಿದೆ.

ವ್ಯಾಲೈಂಟನ ಡೇ ಗೆ ದೇಶದ ವಿವಿಧ ನಗರಗಳಿಂದ ಹಾಗೂ ವಿವಿಧ ದೇಶಗಳಿಂದ ಮೊದಲೇ ಬೇಡಿಕೆ ಸಲ್ಲಿಸಿರುತ್ತಾರೆ. ಈ ಗುಲಾಬಿ ತೋಟದಲ್ಲಿ ಬಹು ವೈವಿಧ್ಯ ಬಣ್ಣಗಳ ಪಿಂಕ್, ಬೈಕಲರ್, ಆರೇಂಜ್, ಬಿಳಿ, ಕೆಂಪು, ಹಳದಿ ಹೂಗಳನ್ನು ಸೇರಿದಂತೆ ಹದಿನೈದಕ್ಕೂ ಹೆಚ್ಚು ಬಣ್ಣದ ಹೂಗಳನ್ನು ಕಾಣಬಹುದಾಗಿದೆ."ಪ್ರೇಮಿಗಳ ದಿನಾಚರಣೆಗೆ ಕೆಂಗುಲಾಬಿಯೇ ಶ್ರೇಷ್ಠ" ಎಂದು ಯುವಜನತೆ ಆಸಕ್ತಿ ಪಡುತ್ತಿದ್ದು ಈ ಬಾರಿ 8 ಲಕ್ಷ ಹೂಗಳನ್ನು ವಿದೇಶಗಳಾದ ಆಸ್ಠ್ರೇಲಿಯಾ, ಜಪಾನ್, ಹಾಲೆಂಡ್, ನ್ಯೂಜಿಲೆಂಡ್, ಯುನೈಟೆಡ್ ಕಿಂಗಡಮ್ ಸೇರಿದಂತೆ ಭಾರತದ ಬೆಂಗಳೂರು, ದೆಹಲಿ ಮುಂಬೈ, ಹೈದರಾಬಾದ್, ಗೋವಾ, ವಿಜಯವಾಡ ನಗರಗಳಿಗೆ ರಫ್ತು ಮಾಡಲಾಗಿದೆ ಎನ್ನುತ್ತಾರೆ ವಿ.ಎಸ್. ಎಲ್. ಅಗ್ರೊ ಟೆಕ್ ನ ಉಸ್ತುವಾರಿ ಹೊತ್ತಿರುವ ವಿ.ಶ್ರೀನಿವಾಸ.


ಅತ್ತ್ಯುತ್ತಮ ಗುಣಮಟ್ಟದ ಉತ್ಪಾದನೆಗೆ ದೆಹಲಿಯಲ್ಲಿ ನಡೆದ ಇಂಟರನ್ಯಾಷನಲ್ ಫ್ಲೋರಾ ಎಕ್ಸ್ ಫೋ ನಲ್ಲಿ ಕೃಷಿ ಪಿತಾಮಹ ಸ್ವಾಮಿನಾಥನ್ ಅವರಿಂದ ಅಗ್ರೊಟೆಕ್ ಪ್ರಶಸ್ತಿ ಪಡೆದುಕೊಂಡಿದೆ. ಬಿರು ಬಿಸಿಲಿನ ನಡುವೆ ಬೆಳೆದ ಈ ಗುಲಾಬಿ ಪ್ರೇಮಿಗಳ ಎದೆಯಲ್ಲಿ ಪ್ರೀತಿಯ ಕಂಪು ಮೂಡಿಸಲಿ. ಪ್ರೀತಿಸುವವರ ಹೃದಯದಲ್ಲಿ ಮಾನವೀಯತೆಯ ಪರಿಮಳ ಹರಡಿಸಲಿ  ಎಂದು ಆಶಿಸೋಣವೇ......? 
ಇದರ ಮಾಹಿತಿ ಬಗ್ಗೆ ತಿಳಿದುಕೊಳ್ಳಲು ವಿ. ಶ್ರೀನಿವಾಸ್ - 9945679912- 08394- 244777

ಪತ್ರೇಶ್ ಹಿರೇಮಠ್  ಹಗರಿಬೊಮ್ಮನಹಳ್ಳಿ

ಯಾರವಳು....?

   ಮೊನ್ನೆ ಅವಳು ಸಿಕ್ಕಾಗ                                 
   ಹೇಳಬೇಕೆನಿಸಿತು...?

    ನಾಲಿಗೆ ಶಬ್ದಗಳನ್ನೇ ಹೊರಡಿಸಲಿಲ್ಲ
    ಹೇಳಬೇಕಾದ್ದನ್ನ
    ಹೇಳಬಾರದ್ದನ್ನ
  ಕಪ್ಪೆಯ ವಟಗುಟ್ಟುವಿಕೆಯಂತೆ ಬಚ್ಚಿಡಲಾಗಲಿಲ್ಲ ...?

  ಅವಳ ಕಪ್ಪುಬಣ್ಣದ ಆಕರ್ಷಣೆಯನ್ನು
  ಮನಸೆಳೆಯುವ ಕಣ್ಣೋಟದ ಬಗ್ಗೆ
  ಕೇಳಲೇ ಬೇಕೆನಿಸುವ ಮಧುರ ಧ್ವನಿಯಬಗ್ಗೆ ಹೇಳಲಾಗಲಿಲ್ಲ ?
                      
  ದೂರದಿಂದಲೇ ಗುರುತಿಸುವ ನಡಿಗೆಯನ್ನ
  ಮಲಗಿದಾಗ ನನ್ನೆದೆಯಲ್ಲಿ ಕೇಳುವ ಗೆಜ್ಜೆ ಸಪ್ಪಳವನ್ನ

  ಕನಸಿನಲ್ಲಿ ಕಾಡುವ ಆ ಮುಖ ನಿನ್ನದೇ ಎಂದು ಹೇಳಲಾಗಲಿಲ್ಲ ?
        

  ಈಗ ಧೈರ್ಯವಿದೆ
  ನಾಲಿಗೆ ಶಬ್ದಗಳನ್ನು ಹೊರಡಿಸುತ್ತಿದೆ
  ಕನಸಿನಲ್ಲಿ ಕಾಣುವ ಹುಡುಗಿ ನನ್ನೆದುರಿಗಿದ್ದಾಳೆ
  ಜೊತೆಗೊಬ್ಬ ಸಂಗಾತಿ ಮಂಜುಮಂಜಾಗಿ ಕಾಣುತ್ತಿದ್ದಾನೆ

     ನನ್ನಲ್ಲೀಗ ಎಲ್ಲವೂ ಇದೆ
     ಬತ್ತಿದ ಪ್ರೀತಿ
     ಮಂಜುಮಂಜಾದ ಕನಸು
     ಅಸ್ಪಷ್ಟವಾಗಿ ಕೇಳುವ ಕಿವಿ
     ಆಗಲೋ ಈಗಲೋ ಎದೆಯಲ್ಲಿ ಗೆಜ್ಜೆ ಸಪ್ಪಳ
     ಯಾರದೋ ಎಂಬ ಗೊಂದಲ
     ಯಾರದಿರಬಹುದು.......... ?




                             ಪತ್ರೇಶ್ ಹಿರೇಮಠ

ಶಿಕ್ಷಕರೇ ನೀವು ಹಳ್ಳಿ ಮೇಷ್ಟ್ರಾಗಿ ........


ಹಳ್ಳಿ ಮೇಷ್ಟ್ರು ಎಂದಾಕ್ಷಣ ಖ್ಯಾತ ನಟ ರವಿಚಂದ್ರನ್ ಚಲನಚಿತ್ರ ಕಥೆಯೆಂದು ಭಾವಿಸಿದರೆ ತಪ್ಪಾದೀತು. ಇದು ನಮ್ಮ  ಇಡೀ ಊರಿಗೆ ಊರೇ ಬಾಗಿ ಗೌರವಿಸುತ್ತಿದ್ದ ಹಳೆಯ ಮೇಷ್ಟ್ರುಗಳ ವಿಷಯವಿದು. ಶಿಕ್ಷಕರಿಗೆ ದೇಗುಲ ನಿರ್ಮಿಸಿದ ನಾಡ ವಿದ್ಯಾವಂತರು ಮತ್ತೆ ಮತ್ತೆ ನೆನಪಿಸಿಕೊಳ್ಳಬೇಕಾದ ಹಳ್ಳಿಯ ಹಳೆಯ ಮೇಷ್ಟ್ರುಗಳ ಬದುಕಿನ ಕಥಾ ಸರಮಾಲೆಯಿದು
ಈಗ ಶಿಕ್ಷಕ ವೃತ್ತಿಯೆಂದರೆ ಬೆಳಿಗ್ಗೆ ಹತ್ತಕ್ಕೆ ಶಾಲೆಗೆಹೊರಡುವುದು, ಪ್ರಾರ್ಥನೆ , ಪಾಠ ಮಾಡುವುದು ಪುನಃ ಸಂಜೆ ಐದಕ್ಕೆ ಮನೆಗೆ ಮರಳುವುದು.ಇದು ಇಂದಿನ ಬಹುತೇಕ ಶಿಕ್ಷಕರ ದಿನಚರಿ. ಈಗಿನ ಯಾವ ಶಿಕ್ಷಕರು ತಾವು ಸೇವೆ ಸಲ್ಲಿಸುವ ಹಳ್ಳಿಗಳಲ್ಲಿ ಮನೆ ಮಾಡಿಕೊಂಡು ಇರುವುದಿಲ್ಲ. ವಿವಾಹಿತ ಶಿಕ್ಷಕರಿಗೆ ಸಂಸಾರ, ಮಕ್ಕಳ ಉನ್ನತ ಶಿಕ್ಷಣದ ಕಾರಣಕ್ಕಾಗಿ ನಗರ ಪ್ರದೇಶಗಳಲ್ಲಿ ವಾಸಿಸುವುದು ಅನಿವಾರ್ಯ. ಅವಿವಾಹಿತ ಶಿಕ್ಷಕರು ಕೂಡಾ ಹಳ್ಳಿಗಳಲ್ಲಿ ವಾಸಿಸುವುದಿಲ್ಲ. ಶಿಕ್ಷಕಿಯರಿಗೆ ವಾಸಿಸಲು ಅನಾನುಕೂಲ  ಇರುವ ಕಾರಣ ಅವರನ್ನು ಇಲ್ಲಿ ಪ್ರಸ್ತಾಪಿಸುವುದು ಅನವಶ್ಯಕ.
ದಶಕಗಳ ಹಿಂದೆ ಹೆಚ್ಚಿನ ಶಿಕ್ಷಕರು ಹಳ್ಳಿಗಳಲ್ಲಿ ವಾಸಿಸುವ ಮೂಲಕ ಜನರ ಪ್ರೀತಿ, ವಿಶ್ವಾಸ,ನಂಬಿಕೆ ಗಳಿಸುವಲ್ಲಿ ಯಶಸ್ವಿಯಾಗಿದ್ದರು. ಇಡೀ ಹಳ್ಳಿ ಜನರ ಪ್ರೀತಿ ಪಾತ್ರ ಶಿಕ್ಷಕರಾಗಲು ಅವರ ಶ್ರಮ ಶ್ಲಾಘನೀಯ. ಆಗ ಹಳ್ಳಿಗಳಲ್ಲಿ ಉಳಿದುಕೊಳ್ಳುವ ಶಿಕ್ಷಕರು ಸಂಜೆ ಮನೆಪಾಠ ಹೇಳುತ್ತಿದ್ದರು. ಅವಿದ್ಯಾವಂತ ಜನತೆಯ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದರು.ಬಡ ಪ್ರತಿಭಾನ್ವಿತ ಮಕ್ಕಳಿಗೆ ಅತಿ ಕಡಿಮೆ ಸಂಬಳದ ತಮ್ಮ ಕಷ್ಡದ ದಿನಗಳ ನಡುವೆಯೂ ಪುಸ್ತಕ, ಬಟ್ಟೆಗಳ ನೆರವು ನೀಡುತ್ತಿದ್ದರು. ಸರಕಾರಿ ಸೌಲಭ್ಯಗಳ ಮಾಹಿತಿ ನೀಡುವುದು, ಪತ್ರ ಬರೆದುಕೊಡುವುದು ಹೀಗೆ ಹಳ್ಳಿಯ ಬದುಕಿನ ನಡುವೆ ಅನಿವಾರ್ಯ ವ್ಯಕ್ತಿಗಳಾಗಿ ಹರಹೊಮ್ಮುತ್ತಿದ್ದರು. ಹಳ್ಳಿಯಲ್ಲಿ ವಾಸಿಸಿದ ಯಾವ ಶಿಕ್ಷಕರು ಹಾಲು, ಮೊಸರು, ಮಜ್ಜಿಗೆಯನ್ನು ಖರೀದಿಸಿದ್ದು ವಿರಳ. ಹೊಲದಲ್ಲಿ ಬೆಳೆದ ಧವಸ ದಾನ್ಯ,ತರಕಾರಿಗಳನ್ನು ಶಿಕ್ಷಕರ ಮನೆ ಬಾಗಿಲಿಗೆ ಹೋಗಿ ಕೊಡುತ್ತಿದ್ದರು. ಅವಿವಾಹಿತ ಶಿಕ್ಷಕರಾಗಿದ್ದರಂತೂ ಹಳ್ಳಿಗಳವರ ಮನೆಗಳಿಂದಲೇ ಊಟವೂ ತಲುಪತಿತ್ತು. ಶಿಕ್ಷಕರು ಬೆಳಿಗ್ಗೆ ಮತ್ತು ಸಂಜೆ ಊರ ಓಣಿಗಳಲ್ಲಿ ಹೊರಟರೆ ಆಟವಾಡುವ ಮಕ್ಕಳಿಂದ ಹಿಡಿದು ಅಂಗಳದಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯರು ಶಿಕ್ಷಕರಿಗೆ ಗೌರವ ನೀಡಿ ಒಳ ಹೋಗುತ್ತಿದ್ದರು. ಹಳ್ಳಿಯಲ್ಲಿ ಯಾರ ಮನೆಯಲ್ಲಿ 
ಸಮಾರಂಭವಿರಲಿ, ಶುಭ ಕಾರ್ಯಕ್ರಮವಿರಲಿ ಹಳ್ಳಿಮೇಷ್ಟ್ರಿಗೆ ಮೊದಲ ಆಮಂತ್ರಣ. ಗಂಡು ಹೆಣ್ಣು ಬೀಗತನ, ಸಂಬಂಧ ಹೀಗೆ ಎಲ್ಲದರಲ್ಲೂ   ಮೇಷ್ಟ್ರು ಇರಲೇಬೇಕು. ಹಳ್ಳಿಗಳಲ್ಲಿನ ಪಂಚಾಯಿತಿ, ದೈವದ, ದೇವಸ್ಥಾನದ ಕಾರ್ಯಗಳು.ದೇವಸ್ತಾನದ ಲೆಕ್ಕಪತ್ರ ಎಲ್ಲದಕ್ಕೂ ಮೇಷ್ಟ್ರು ಅತ್ಯವಶ್ಯ.ಮೇಷ್ಟ್ರು ಹೇಳಿದ ಮೇಲೆ ಮುಗೀತು ಯಾವ ರಾಜಕಾರಿಣಿ ಪ್ರಭಾವಿ ವ್ಯಕ್ತಿಯ ಮಾತನ್ನೂ ಹಳ್ಳಗರು ಕೇಳುತ್ತಿರಲಿಲ್ಲ.
ಹಳ್ಳಿಗಳ ಶಕ್ತಿಯಾಗಿದ್ದರು,ಹಾಗೆ ಬದುಕಿದರು, ಹಾಗೆ ನಡೆದುಕೊಂಡರು. ಅವರೆಂದೂ ಹಳ್ಳಿ ರಾಜಕಾರಣದಲ್ಲಿ ಮೂಗು ತೂರಿಸುತ್ತಿರಲಿಲ್ಲ, ಬೇಧ ಭಾವ ಮಾಡಲಿಲ್ಲ. ಇದ್ದುದನ್ನೇ ಇದ್ದ ಹಾಗೆ ಹೇಳುವ ಶಕ್ತಿ ಯುಕ್ತಿ ಹಳ್ಳಿ ಮೇಷ್ಟ್ರಿಗೆ ಇತ್ತು.ಹಳ್ಳಿಗಳ ಅಭಿವೃದ್ಧಿಗೆ ಶ್ರಮಿಸುತ್ತಾ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುತ್ತಾ ಶ್ರೀಗಂಧದಂತೆ ಬದುಕನ್ನೇ ಸವೆಸಿ ಹಳ್ಳಿಗರಿಗೋಸ್ಕರ ಹೊಸ ಬದುಕಿನ ಸುವಾಸಿತ ಹಾದಿ ತೋರಿದ ಆ ಹಳ್ಳಿ ಮೇಷ್ಟ್ರು ಈಗೆಲ್ಲಿ..? ಈಗಿನ ಶಿಕ್ಷಕರಿಗೇಕೆ ಆ ಗೌರವದೆತ್ತರಕೇರಲು ಸಾಧ್ಯವಾಗುತ್ತಿಲ್ಲ..? 
        ಈಗಲೂ ಅಂತಹ ಅವಕಾಶಗಳು ಇವೆ. ಆದರೆ ತೊಡಕುಗಳಿವೆ. ಮಾಹಿತಿ ತಂತ್ರಜ್ಞಾನದ ನಾಗಾಲೋಟದ ಈ ಕಾಲದಲ್ಲಿ ಈಗಿನ ಕೆಲ ಶಿಕ್ಷಕರಿಗೆ ಹಳ್ಳಿಗಳಲ್ಲಿ ಉಳಿದುಕೊಳ್ಳುವ ತಾಳ್ಮೆಯಿಲ್ಲ. ಮೊಬೈಲ್ ಮತ್ತು ದ್ವಿಚಕ್ರ ವಾಹನ ಶಾಲೆ ಮುಗಿದ ಕೂಡಲೇ ನಗರ ಪ್ರದೇಶದೆಡೆ ಸೆಳೆಯುತ್ತವೆ.
ಇತ್ತೀಚೆಗೆ ನೇಮಕಗೊಂಡ ಶಿಕ್ಷಕರಿಗೆ ಆಕರ್ಷಕ ಸಂಬಳ, ಕಂತುಗಳ ಆಧಾರದ ಮೇಲೆ ಸಿಗುವ ಬೈಕು, ಮೊಬೈಲ್ ಜೊತೆಗೆ ಮೆಸ್ಸೇಜ್ ಹೀಗೆ ಆಧುನಿಕ ತಂತ್ರಜ್ಞಾನದ ಮೋಹ ಶಿಕ್ಷಕ ವೃತ್ತಿಯ ಗಾಂಭೀರ್ಯತೆಯನ್ನು ಹಾಳು ಮಾಡುತ್ತಿದೆ.ಶಾಲೆಗಳಲ್ಲಿ ಎಸ್ಡಿಎಂಸಿ  ರಾಜಕಾರಣ ಶಾಲೆಗಳ ಅಭಿವೃದ್ಧಿಗೆ ಮಾರಕವಾಗುತ್ತಿದೆ. ಹಿಂದೆ ಮಕ್ಕಳಿಗೆ ಶಿಕ್ಷೆ ನೀಡಿದಾಗ ಪಾಲಕರು ಹೊಡೆದು ಬುಧ್ಧಿ ಕಲಿಸಿ ಎನ್ನುತ್ತಿದ್ದರು. ಆದರೀಗ ಮಕ್ಕಳಿಗೆ ಶಿಕ್ಷೆ ನೀಡಿದರೆ ಪಾಲಕರಿಂದಾಗುವ ಕಿರಿಕಿರಿ ಅಸಹನೀಯ. ಹಾಗಾಗಿ ಕೆಲ ಶಿಕ್ಷಕರು ಏನು ಮಾಡಿದರೂ ಕಷ್ಟ, ಹೊಡಿಯೋದು ಬೇಡ ಸುಮ್ಮನೆ ನಮಗೆ ಎಷ್ಟಾಗುತ್ತೋ ಅಷ್ಟು ಕಲಿಸೋಣ ನಮ್ಮ ಸಂಬಳ ಅಂತೂ ಬರುತ್ತಲ್ಲ ಎನ್ನುವ ಆಲೋಚನೆಯ ಮೊರೆ ಹೋಗಿದ್ದಾರೆ. ಇನ್ನು ಕೆಲವರಂತೂ ಪಾಲಕರ ಕಿರಿಕಿರಿ ನಡುವೆಯೂ ಪಾಲಕರಿಂದ ಬೈಸಿಕೊಂಡೂ ಕಲಿಸುವ ಸಾಹಸ ಮಾಡುತ್ತಿದ್ದಾರೆ.ಇನ್ನು ಕೆಲ ಶಿಕ್ಷಕರು ತಾವಾಯಿತು ತಮ್ಮ ಮೊಬೈಲ್ ಕರೆ ಇಲ್ಲವೇ ಮೆಸೆಜ್ ಗಳಲ್ಲಿ ಮಗ್ನರಾಗಿರುತ್ತಾರೆ. ಅನೇಕ ಶಾಲೆಗಳಲ್ಲಿ ಇತ್ತೀಚೆಗೆ ನೇಮಕಗೊಂಡ ಚಿಕ್ಕ ವಯಸ್ಸಿನ ಕೆಲ ಯುವ ಶಿಕ್ಷಕರಿಗೆ ಶಾಲೆಗಳಲ್ಲಿ ಮೊಬೈಲ್ ನಿಷೇಧ ಶಿಕ್ಷಣ ಇಲಾಖಾ ಸು(ಸ)ತ್ತೋಲೆಗೆ ಕವಡೆ ಕಾಸಿನ ಕಿಮ್ಮತ್ತಿಲ್ಲ.
ಭವಿಷ್ಯದ ಪ್ರಜೆಗಳನ್ನು ಸೃಷ್ಟಿಸುವ ಮಹಾತ್ಕಾರ್ಯದ ಯಜ್ಞಾಧಿಪತಿಗಳು ಶಿಕ್ಷಕರು. ಶಿಕ್ಷಕ ಮತ್ತು ಶಿಕ್ಷಣ ಒಬ್ಬ ವ್ಯಕ್ತಿಯ ಜೀವನದಲ್ಲಿ ಬಂದು ಹೋಗುವ ಪಾತ್ರ ಮತ್ತು ಪ್ರಕ್ರಿಯೆ. ವ್ಯಕ್ತಿ ವಿಕಸನ ಪ್ರಕ್ರಿಯೆಯಲ್ಲಿ ಇವೆರಡೂ ಪ್ರಮುಖ ಅಂಶಗಳು. ಅದು ಇಂದಿನ ಶಿಕ್ಷಕ ವೃತ್ತಿಯಲ್ಲಿ ಸೇವೆ ಸಲ್ಲಿಸುವವರು ಪ್ರಮುಖವಾಗಿ ತಿಳಿಯಬೇಕಾದ ತಿರುಳು.
ಈಗಲೂ ಸಮಯವೇನೂ ಮೀರಿಲ್ಲ ವಶೀಲಿ ಬಾಜಿ, ರಾಜಕಾರಿಣಿ, ಪುಢಾರಿಗಳ ಕಾಲು ಹಿಡಿದು ಉತ್ತಮ ಶಿಕ್ಷಕ ಪ್ರಶಸ್ತಿ ಗಳಿಸುವುದಕ್ಕಿಂತ ನೀವು ಸೇವೆ ಸಲ್ಲಿಸುವ ಹಳ್ಳಿಗರ ಮನ ಗೆಲ್ಲಿರಿ. ಹಳ್ಳಿ ಮಕ್ಕಳನ್ನು ನಗರ ಪ್ರದೇಶದ ಮಕ್ಕಳೊಂದಿಗೆ ಸ್ಪರ್ದಿಸುವ ರೀತಿಯಲ್ಲಿ ಅಣಿಗೊಳಿಸಿರಿ. ಹಳ್ಳಿಗಳ ಅಭಿವೃದ್ಧಿ ನಿಮ್ಮ ಮೂಲ ಮಂತ್ರವಾಗಲಿ, ಹಳ್ಳಿಯಲ್ಲಿರಿ, ರಾತ್ರಿ ಮಕ್ಕಳಿಗೆ ಮನೆಪಾಠ ಹೇಳಿ ನೋಡಿ ನಿಮ್ಮ ಬಗ್ಗೆ ಹಳ್ಳಿಗರಿಗೆ ಯಾವ ಭಾವನೆ ಮೂಡುತ್ತದೋ ನೀವೇ ಕಾದು ನೋಡಿ. ನಿಮ್ಮ ಶ್ರಮ ಎಂದಿದ್ದರೂ ನಿಮಗೆ ಫಲ ನೀಡುತ್ತದೆ.
ಮೊಬೈಲ್ ಬಳಕೆ ಅಗತ್ಯಕ್ಕೆ ತಕ್ಕಂತೆ ಇರಲಿ, ಹೊಸ ಹೊಸ ಪುಸ್ತಕಗಳ ಅಧ್ಯಯನಗಳ ಮೂಲಕ ಪಠ್ಯಗಳ ಜೊತೆ ಮಕ್ಕಳಿಗೆ ಹೊಸದೇನನ್ನೋ ತಿಳಿಸುತ್ತಾ ಮಕ್ಕಳಿಗೆ ನೀವು ಬೆರಗು ಮೂಡಿಸುವ ಶಿಕ್ಷಕರಾಗಿ. ಬಿ.ಇಡಿ, ಡಿ ಇಡಿ, ಎಂಎ, ಎಂಇಡಿ ನಿಮ್ಮ ಶಿಕ್ಷಣದ ಅಂತ್ಯವಲ್ಲ. ನೀವು ಕಲಿತದ್ದು ಕೈಯಗಲ ಕಲಿಯುವುದು ಕಡಲಗಲ. ನಿಮ್ಮಲ್ಲಿನ ಜ್ಞಾನ ಮತ್ತು ತಾಳ್ಮೆ ನಿಮ್ಮನ್ನು ಉನ್ನತಿಯತ್ತ ಒಯ್ಯತ್ತದೆ.ಮಕ್ಕಳಿಗೆ ಕಲಿಸಿದಷ್ಟು ನಿಮ್ಮನ್ನು ಪ್ರೀತಿಸುತ್ತಾರೆ. ಪಠ್ಯ ಭೋಧನೆಯಷ್ಟೆ ಶಿಕ್ಷಣವಲ್ಲ ಹೊಸ ಪುಸ್ತಕ, ಆವಿಷ್ಕಾರ, ನೃತ್ಯ, ನಾಟಕ, ಸಂಗೀತ, ಸಾಂಸ್ಕೃತಿಕ ಕಾರ್ಯಕ್ರಮಗಳ ಜ್ಞಾನ ನೀಡುವುದರಿಂದ ಮಕ್ಕಳನ್ನು ಮುಖ್ಯವಾಹಿನಿಗೆ ತರುವ ಕೆಲಸ ಮಾಡಬಹುದಾಗಿದೆ.
 ಜಗತ್ತಿನಲ್ಲಿ ನಿಮಗೆ ಸಿಕ್ಕ ಅತ್ಯಮೂಲ್ಯ ಜವಾಬ್ದಾರಿಯಿದು. ನಿಮ್ಮ ಶಿಕ್ಷಕ ವೃತ್ತಿಯ ಯಶಸ್ವಿ ಪಾಲಕರ ಮತ್ತು ಮಕ್ಕಳ ಮನಸ್ಸನ್ನು ಗೆದ್ದಾಗ ಮಾತ್ರ ಸಿಗುತ್ತದೆ. ನೀವು ಗಳಿಸಿದ ಹಣದಿಂದಲ್ಲ, ಪುಢಾರಿಗಳ ಕಾಲು ಹಿಡಿದು ವಶೀಲಿ ಮಾಡಿ ಕಿತ್ತು ತಂದ ಪ್ರಶಸ್ತಿಯಿಂದಲ್ಲ..... ಅಲ್ಲವೇ....?
          ಪತ್ರೇಶ್ ಹಿರೇಮಠ್
(ವಿಜಯ ಕರ್ನಾಟಕದ ಲವ್ ಲವಿಕೆಯಲ್ಲಿ ಪ್ರಕಟವಾದ ಲೇಖನ)