ಅವರಿವರ ಮನೆಯ ಫ್ರೇಮಿನಲ್ಲಿ ಕುಳಿತರಷ್ಟೇ ಸಾಲದು..
ನೀ ಬಿತ್ತಿದ ನುಡಿಯು, ಮನೆ ಮನಗಳ ತಟ್ಟಬೇಕು..
ಎಲ್ಲಿದ್ದೀಯಾ..? ಜೋಗಿ ಜಂಗಮನೇ ಎದ್ದು ಬಾ ಎದ್ದು ಬಾ....
ಸಮಾನತೆಯ ಮಾನದಂಡಸಾರಿ
ಬಿಜ್ಜಳನ ತಲೆಯ ಮೇಲೆ ಹೇರಿ
ಸಿರಿ ಸಂಪದವ ತ್ಯಜಿಸಿ ಹೊರಟವನೇ
ಎಲ್ಲಿದ್ದೀಯಾ..? ಜೋಗಿ ಜಂಗಮನೇ ಎದ್ದು ಬಾ ಎದ್ದು ಬಾ....
ಹೆಣ್ಣು ಗಂಡೆನ್ನಲಿಲ್ಲ, ಮೇಲು ಕೀಳೆನ್ನಲಿಲ್ಲ,
ಉಳ್ಳವರ ಎದೆಯಲ್ಲಿ ಅಳುಕು ಮೂಡಿಸಿ,
ಮಂಟಪದ ನಡುವೆ ಎಲ್ಲರನು ಕೂರಿಸಿದ ಯೋಗಿ,
ಎಲ್ಲಿದ್ದೀಯಾ..? ಜೋಗಿ ಜಂಗಮನೇ ಎದ್ದು ಬಾ ಎದ್ದು ಬಾ....
ಸ್ಥಾವರಕ್ಕಳಿವುಂಟು ಜಂಗಮಕ್ಕಳಿವಿಲ್ಲವೆಂದೆ,
ಈಗೀಗ ಊರೂರ ಕಂಟಿಯಲಿ ಮಠಮಾನ್ಉದ ಅಂಟುಗಳು,
ಜಂಗಮರ ತಲೆಗೀಗ ಹತ್ತಿದೆ ಕಿಲುಬು ಜಂಗು,
ನೀ ಹ್ಯಾಂಗ ಹೇಳಿದೆಯೋ, ಜಂಗಮಕ್ಕಳಿವಿಲ್ಲ..? ಸುಳ್ಳಾಯಿತಲ್ಲ..?
ಎಲ್ಲಿದ್ದೀಯಾ..? ಜೋಗಿ ಜಂಗಮನೇ ಎದ್ದು ಬಾ ಎದ್ದು ಬಾ....
ಬೇಕಾದಷ್ಟು ತಂದು ಜೊತೆಗೂಡಿ ಉಂಡು,
ಅದುವೇ ನೀನಂದೇ ದಾಸೋಹ..
ಈಗೀಗ ಹೆಂಡತಿ ಮಕ್ಕಳ ಹೆಸರಲ್ಲೂ ಸ್ವಾಹಃ
ಅತ್ತೆ ಸೊಸೆ ಹೆಸರಲ್ಲೂ ಸ್ವಾಹಃ
ನೈಸ್, ಗಣಿ, 2ಜಿ, ಕಾಮನ್ವೆಲ್ತ್, ಸತ್ಯಂ ಷೇರುಗಳಲ್ಲೂ
ಸಾವಿರ, ಲಕ್ಷ ಲಕ್ಷ ಕೋಟಿ ಸ್ವಾಹಾಃ
ಎಲ್ಲಿದೆ ಜೋಗಿ ಜಂಗಮನೇ ನಿನ್ನ ದಾಸೋಹ..?
ಈಗ ಹುಳು ಹತ್ತಿದ ಅಕ್ಕಿಯ ಬಿಸಿಯೂಟವೆಂಬ ಅಕ್ಷರ ದಾಸೋಹ....
ಕರೆಂಟೀಗ ಕರದಂಟಿನಷ್ಟೆ ಅಪರೂಪ.
ಛಳಿಗಾಲದಲ್ಲೂ ರೈತರಿಗೆ ಚೀನಾ ಪ್ರವಾಸ.
ಕಂಪ್ಯೂಟರಲ್ಲಿ ನೇಗಿಲು ಹಿಡಿಯದವರ ಕೃಷಿ ಮಾಹಿತಿ
ಸಣ್ಣ ದೊಡ್ಡ ಸಮಸ್ಯೆಗೊಂದು ಆಯೋಗ
ಹೋದಲೆಲ್ಲಾ ಕೋಟಿ ಕೋಟಿ ಯೋಜನೆಯ ಆಶ್ವಾಸನೆಯ ಸುರಿಮಳೆ
ಸತ್ತ ರೈತರ ಶವ ಸುಡಲು ಸಾವಿರ ರೂಪಾಯಿ ಇನಾಮು..
ಬಿತ್ತನೆಗೆ ಬೀಜ ಗೊಬ್ಬರ ಕೇಳಿದರೆ ಎದೆಗೆ ಗುಂಡು..
ಕಟ್ಟೆ ಪುರಾಣದ ಹಿರಿಯರ ಚಾ ಖರ್ಚಿಗೆ ತಿಂಗಳಿಗೆ ನಾನ್ನೂರು ರೂಪಾಯಿ..
ಎಲ್ಲಿದ್ದೀಯಾ..? ಜೋಗಿ ಜಂಗಮನೇ ಎದ್ದು ಬಾ ಎದ್ದು ಬಾ....
ಬರುವುದಾದರೇ ಬೇಗ ಬಾ, ಹಾಗೆ ಬರಬೇಡ..?
ಲಿಂಗದ ಬದಲು ಬಂದೂಕು ತುಂಬಾ ಗುಂಡುಗಳಿರಲಿ..
ನಿನ್ನ ವಚನದ ಜೋಳಿಗೆಯ ತುಂಬಾ ಬಾಂಬುಗಳಿರಲಿ...
ವಿಭೂತಿಪುಡಿ ಬದಲು ಅಂಥ್ರಾಕ್ಸ ನ ಪುಡಿ ಇರಲಿ..
ಹಸಿದು ನಿಂತವರ ರಕ್ತ ಹೀರುವ ವೇಷಧಾರಿಗಳ ಮೇಲೆ..
ಬಂದೂಕು, ಬಾಂಬು, ಆರ್ ಡಿಎಕ್ಸ್ ನ ಪುಡಿ ಚೆಲ್ಲು..
ಹಸಿದು ನಿಂತವರಿಗೆ ಅನ್ನ ಸಿಗಲಿ
ಬಡವರ ಮುಖದಲ್ಲಿ ನಗುವಿನ ಪರಿಮಳ ಹರಡಲಿ..
ಎಲ್ಲಿದ್ದೀಯಾ..? ಜೋಗಿ ಜಂಗಮನೇ ಎದ್ದು ಬಾ ಎದ್ದು ಬಾ....
ಪತ್ರೇಶ್ ಹಿರೇಮಠ್
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ