20 ಮೇ, 2011

ಶಿಕ್ಷಕರೇ ನೀವು ಹಳ್ಳಿ ಮೇಷ್ಟ್ರಾಗಿ ........


ಹಳ್ಳಿ ಮೇಷ್ಟ್ರು ಎಂದಾಕ್ಷಣ ಖ್ಯಾತ ನಟ ರವಿಚಂದ್ರನ್ ಚಲನಚಿತ್ರ ಕಥೆಯೆಂದು ಭಾವಿಸಿದರೆ ತಪ್ಪಾದೀತು. ಇದು ನಮ್ಮ  ಇಡೀ ಊರಿಗೆ ಊರೇ ಬಾಗಿ ಗೌರವಿಸುತ್ತಿದ್ದ ಹಳೆಯ ಮೇಷ್ಟ್ರುಗಳ ವಿಷಯವಿದು. ಶಿಕ್ಷಕರಿಗೆ ದೇಗುಲ ನಿರ್ಮಿಸಿದ ನಾಡ ವಿದ್ಯಾವಂತರು ಮತ್ತೆ ಮತ್ತೆ ನೆನಪಿಸಿಕೊಳ್ಳಬೇಕಾದ ಹಳ್ಳಿಯ ಹಳೆಯ ಮೇಷ್ಟ್ರುಗಳ ಬದುಕಿನ ಕಥಾ ಸರಮಾಲೆಯಿದು
ಈಗ ಶಿಕ್ಷಕ ವೃತ್ತಿಯೆಂದರೆ ಬೆಳಿಗ್ಗೆ ಹತ್ತಕ್ಕೆ ಶಾಲೆಗೆಹೊರಡುವುದು, ಪ್ರಾರ್ಥನೆ , ಪಾಠ ಮಾಡುವುದು ಪುನಃ ಸಂಜೆ ಐದಕ್ಕೆ ಮನೆಗೆ ಮರಳುವುದು.ಇದು ಇಂದಿನ ಬಹುತೇಕ ಶಿಕ್ಷಕರ ದಿನಚರಿ. ಈಗಿನ ಯಾವ ಶಿಕ್ಷಕರು ತಾವು ಸೇವೆ ಸಲ್ಲಿಸುವ ಹಳ್ಳಿಗಳಲ್ಲಿ ಮನೆ ಮಾಡಿಕೊಂಡು ಇರುವುದಿಲ್ಲ. ವಿವಾಹಿತ ಶಿಕ್ಷಕರಿಗೆ ಸಂಸಾರ, ಮಕ್ಕಳ ಉನ್ನತ ಶಿಕ್ಷಣದ ಕಾರಣಕ್ಕಾಗಿ ನಗರ ಪ್ರದೇಶಗಳಲ್ಲಿ ವಾಸಿಸುವುದು ಅನಿವಾರ್ಯ. ಅವಿವಾಹಿತ ಶಿಕ್ಷಕರು ಕೂಡಾ ಹಳ್ಳಿಗಳಲ್ಲಿ ವಾಸಿಸುವುದಿಲ್ಲ. ಶಿಕ್ಷಕಿಯರಿಗೆ ವಾಸಿಸಲು ಅನಾನುಕೂಲ  ಇರುವ ಕಾರಣ ಅವರನ್ನು ಇಲ್ಲಿ ಪ್ರಸ್ತಾಪಿಸುವುದು ಅನವಶ್ಯಕ.
ದಶಕಗಳ ಹಿಂದೆ ಹೆಚ್ಚಿನ ಶಿಕ್ಷಕರು ಹಳ್ಳಿಗಳಲ್ಲಿ ವಾಸಿಸುವ ಮೂಲಕ ಜನರ ಪ್ರೀತಿ, ವಿಶ್ವಾಸ,ನಂಬಿಕೆ ಗಳಿಸುವಲ್ಲಿ ಯಶಸ್ವಿಯಾಗಿದ್ದರು. ಇಡೀ ಹಳ್ಳಿ ಜನರ ಪ್ರೀತಿ ಪಾತ್ರ ಶಿಕ್ಷಕರಾಗಲು ಅವರ ಶ್ರಮ ಶ್ಲಾಘನೀಯ. ಆಗ ಹಳ್ಳಿಗಳಲ್ಲಿ ಉಳಿದುಕೊಳ್ಳುವ ಶಿಕ್ಷಕರು ಸಂಜೆ ಮನೆಪಾಠ ಹೇಳುತ್ತಿದ್ದರು. ಅವಿದ್ಯಾವಂತ ಜನತೆಯ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದರು.ಬಡ ಪ್ರತಿಭಾನ್ವಿತ ಮಕ್ಕಳಿಗೆ ಅತಿ ಕಡಿಮೆ ಸಂಬಳದ ತಮ್ಮ ಕಷ್ಡದ ದಿನಗಳ ನಡುವೆಯೂ ಪುಸ್ತಕ, ಬಟ್ಟೆಗಳ ನೆರವು ನೀಡುತ್ತಿದ್ದರು. ಸರಕಾರಿ ಸೌಲಭ್ಯಗಳ ಮಾಹಿತಿ ನೀಡುವುದು, ಪತ್ರ ಬರೆದುಕೊಡುವುದು ಹೀಗೆ ಹಳ್ಳಿಯ ಬದುಕಿನ ನಡುವೆ ಅನಿವಾರ್ಯ ವ್ಯಕ್ತಿಗಳಾಗಿ ಹರಹೊಮ್ಮುತ್ತಿದ್ದರು. ಹಳ್ಳಿಯಲ್ಲಿ ವಾಸಿಸಿದ ಯಾವ ಶಿಕ್ಷಕರು ಹಾಲು, ಮೊಸರು, ಮಜ್ಜಿಗೆಯನ್ನು ಖರೀದಿಸಿದ್ದು ವಿರಳ. ಹೊಲದಲ್ಲಿ ಬೆಳೆದ ಧವಸ ದಾನ್ಯ,ತರಕಾರಿಗಳನ್ನು ಶಿಕ್ಷಕರ ಮನೆ ಬಾಗಿಲಿಗೆ ಹೋಗಿ ಕೊಡುತ್ತಿದ್ದರು. ಅವಿವಾಹಿತ ಶಿಕ್ಷಕರಾಗಿದ್ದರಂತೂ ಹಳ್ಳಿಗಳವರ ಮನೆಗಳಿಂದಲೇ ಊಟವೂ ತಲುಪತಿತ್ತು. ಶಿಕ್ಷಕರು ಬೆಳಿಗ್ಗೆ ಮತ್ತು ಸಂಜೆ ಊರ ಓಣಿಗಳಲ್ಲಿ ಹೊರಟರೆ ಆಟವಾಡುವ ಮಕ್ಕಳಿಂದ ಹಿಡಿದು ಅಂಗಳದಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯರು ಶಿಕ್ಷಕರಿಗೆ ಗೌರವ ನೀಡಿ ಒಳ ಹೋಗುತ್ತಿದ್ದರು. ಹಳ್ಳಿಯಲ್ಲಿ ಯಾರ ಮನೆಯಲ್ಲಿ 
ಸಮಾರಂಭವಿರಲಿ, ಶುಭ ಕಾರ್ಯಕ್ರಮವಿರಲಿ ಹಳ್ಳಿಮೇಷ್ಟ್ರಿಗೆ ಮೊದಲ ಆಮಂತ್ರಣ. ಗಂಡು ಹೆಣ್ಣು ಬೀಗತನ, ಸಂಬಂಧ ಹೀಗೆ ಎಲ್ಲದರಲ್ಲೂ   ಮೇಷ್ಟ್ರು ಇರಲೇಬೇಕು. ಹಳ್ಳಿಗಳಲ್ಲಿನ ಪಂಚಾಯಿತಿ, ದೈವದ, ದೇವಸ್ಥಾನದ ಕಾರ್ಯಗಳು.ದೇವಸ್ತಾನದ ಲೆಕ್ಕಪತ್ರ ಎಲ್ಲದಕ್ಕೂ ಮೇಷ್ಟ್ರು ಅತ್ಯವಶ್ಯ.ಮೇಷ್ಟ್ರು ಹೇಳಿದ ಮೇಲೆ ಮುಗೀತು ಯಾವ ರಾಜಕಾರಿಣಿ ಪ್ರಭಾವಿ ವ್ಯಕ್ತಿಯ ಮಾತನ್ನೂ ಹಳ್ಳಗರು ಕೇಳುತ್ತಿರಲಿಲ್ಲ.
ಹಳ್ಳಿಗಳ ಶಕ್ತಿಯಾಗಿದ್ದರು,ಹಾಗೆ ಬದುಕಿದರು, ಹಾಗೆ ನಡೆದುಕೊಂಡರು. ಅವರೆಂದೂ ಹಳ್ಳಿ ರಾಜಕಾರಣದಲ್ಲಿ ಮೂಗು ತೂರಿಸುತ್ತಿರಲಿಲ್ಲ, ಬೇಧ ಭಾವ ಮಾಡಲಿಲ್ಲ. ಇದ್ದುದನ್ನೇ ಇದ್ದ ಹಾಗೆ ಹೇಳುವ ಶಕ್ತಿ ಯುಕ್ತಿ ಹಳ್ಳಿ ಮೇಷ್ಟ್ರಿಗೆ ಇತ್ತು.ಹಳ್ಳಿಗಳ ಅಭಿವೃದ್ಧಿಗೆ ಶ್ರಮಿಸುತ್ತಾ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುತ್ತಾ ಶ್ರೀಗಂಧದಂತೆ ಬದುಕನ್ನೇ ಸವೆಸಿ ಹಳ್ಳಿಗರಿಗೋಸ್ಕರ ಹೊಸ ಬದುಕಿನ ಸುವಾಸಿತ ಹಾದಿ ತೋರಿದ ಆ ಹಳ್ಳಿ ಮೇಷ್ಟ್ರು ಈಗೆಲ್ಲಿ..? ಈಗಿನ ಶಿಕ್ಷಕರಿಗೇಕೆ ಆ ಗೌರವದೆತ್ತರಕೇರಲು ಸಾಧ್ಯವಾಗುತ್ತಿಲ್ಲ..? 
        ಈಗಲೂ ಅಂತಹ ಅವಕಾಶಗಳು ಇವೆ. ಆದರೆ ತೊಡಕುಗಳಿವೆ. ಮಾಹಿತಿ ತಂತ್ರಜ್ಞಾನದ ನಾಗಾಲೋಟದ ಈ ಕಾಲದಲ್ಲಿ ಈಗಿನ ಕೆಲ ಶಿಕ್ಷಕರಿಗೆ ಹಳ್ಳಿಗಳಲ್ಲಿ ಉಳಿದುಕೊಳ್ಳುವ ತಾಳ್ಮೆಯಿಲ್ಲ. ಮೊಬೈಲ್ ಮತ್ತು ದ್ವಿಚಕ್ರ ವಾಹನ ಶಾಲೆ ಮುಗಿದ ಕೂಡಲೇ ನಗರ ಪ್ರದೇಶದೆಡೆ ಸೆಳೆಯುತ್ತವೆ.
ಇತ್ತೀಚೆಗೆ ನೇಮಕಗೊಂಡ ಶಿಕ್ಷಕರಿಗೆ ಆಕರ್ಷಕ ಸಂಬಳ, ಕಂತುಗಳ ಆಧಾರದ ಮೇಲೆ ಸಿಗುವ ಬೈಕು, ಮೊಬೈಲ್ ಜೊತೆಗೆ ಮೆಸ್ಸೇಜ್ ಹೀಗೆ ಆಧುನಿಕ ತಂತ್ರಜ್ಞಾನದ ಮೋಹ ಶಿಕ್ಷಕ ವೃತ್ತಿಯ ಗಾಂಭೀರ್ಯತೆಯನ್ನು ಹಾಳು ಮಾಡುತ್ತಿದೆ.ಶಾಲೆಗಳಲ್ಲಿ ಎಸ್ಡಿಎಂಸಿ  ರಾಜಕಾರಣ ಶಾಲೆಗಳ ಅಭಿವೃದ್ಧಿಗೆ ಮಾರಕವಾಗುತ್ತಿದೆ. ಹಿಂದೆ ಮಕ್ಕಳಿಗೆ ಶಿಕ್ಷೆ ನೀಡಿದಾಗ ಪಾಲಕರು ಹೊಡೆದು ಬುಧ್ಧಿ ಕಲಿಸಿ ಎನ್ನುತ್ತಿದ್ದರು. ಆದರೀಗ ಮಕ್ಕಳಿಗೆ ಶಿಕ್ಷೆ ನೀಡಿದರೆ ಪಾಲಕರಿಂದಾಗುವ ಕಿರಿಕಿರಿ ಅಸಹನೀಯ. ಹಾಗಾಗಿ ಕೆಲ ಶಿಕ್ಷಕರು ಏನು ಮಾಡಿದರೂ ಕಷ್ಟ, ಹೊಡಿಯೋದು ಬೇಡ ಸುಮ್ಮನೆ ನಮಗೆ ಎಷ್ಟಾಗುತ್ತೋ ಅಷ್ಟು ಕಲಿಸೋಣ ನಮ್ಮ ಸಂಬಳ ಅಂತೂ ಬರುತ್ತಲ್ಲ ಎನ್ನುವ ಆಲೋಚನೆಯ ಮೊರೆ ಹೋಗಿದ್ದಾರೆ. ಇನ್ನು ಕೆಲವರಂತೂ ಪಾಲಕರ ಕಿರಿಕಿರಿ ನಡುವೆಯೂ ಪಾಲಕರಿಂದ ಬೈಸಿಕೊಂಡೂ ಕಲಿಸುವ ಸಾಹಸ ಮಾಡುತ್ತಿದ್ದಾರೆ.ಇನ್ನು ಕೆಲ ಶಿಕ್ಷಕರು ತಾವಾಯಿತು ತಮ್ಮ ಮೊಬೈಲ್ ಕರೆ ಇಲ್ಲವೇ ಮೆಸೆಜ್ ಗಳಲ್ಲಿ ಮಗ್ನರಾಗಿರುತ್ತಾರೆ. ಅನೇಕ ಶಾಲೆಗಳಲ್ಲಿ ಇತ್ತೀಚೆಗೆ ನೇಮಕಗೊಂಡ ಚಿಕ್ಕ ವಯಸ್ಸಿನ ಕೆಲ ಯುವ ಶಿಕ್ಷಕರಿಗೆ ಶಾಲೆಗಳಲ್ಲಿ ಮೊಬೈಲ್ ನಿಷೇಧ ಶಿಕ್ಷಣ ಇಲಾಖಾ ಸು(ಸ)ತ್ತೋಲೆಗೆ ಕವಡೆ ಕಾಸಿನ ಕಿಮ್ಮತ್ತಿಲ್ಲ.
ಭವಿಷ್ಯದ ಪ್ರಜೆಗಳನ್ನು ಸೃಷ್ಟಿಸುವ ಮಹಾತ್ಕಾರ್ಯದ ಯಜ್ಞಾಧಿಪತಿಗಳು ಶಿಕ್ಷಕರು. ಶಿಕ್ಷಕ ಮತ್ತು ಶಿಕ್ಷಣ ಒಬ್ಬ ವ್ಯಕ್ತಿಯ ಜೀವನದಲ್ಲಿ ಬಂದು ಹೋಗುವ ಪಾತ್ರ ಮತ್ತು ಪ್ರಕ್ರಿಯೆ. ವ್ಯಕ್ತಿ ವಿಕಸನ ಪ್ರಕ್ರಿಯೆಯಲ್ಲಿ ಇವೆರಡೂ ಪ್ರಮುಖ ಅಂಶಗಳು. ಅದು ಇಂದಿನ ಶಿಕ್ಷಕ ವೃತ್ತಿಯಲ್ಲಿ ಸೇವೆ ಸಲ್ಲಿಸುವವರು ಪ್ರಮುಖವಾಗಿ ತಿಳಿಯಬೇಕಾದ ತಿರುಳು.
ಈಗಲೂ ಸಮಯವೇನೂ ಮೀರಿಲ್ಲ ವಶೀಲಿ ಬಾಜಿ, ರಾಜಕಾರಿಣಿ, ಪುಢಾರಿಗಳ ಕಾಲು ಹಿಡಿದು ಉತ್ತಮ ಶಿಕ್ಷಕ ಪ್ರಶಸ್ತಿ ಗಳಿಸುವುದಕ್ಕಿಂತ ನೀವು ಸೇವೆ ಸಲ್ಲಿಸುವ ಹಳ್ಳಿಗರ ಮನ ಗೆಲ್ಲಿರಿ. ಹಳ್ಳಿ ಮಕ್ಕಳನ್ನು ನಗರ ಪ್ರದೇಶದ ಮಕ್ಕಳೊಂದಿಗೆ ಸ್ಪರ್ದಿಸುವ ರೀತಿಯಲ್ಲಿ ಅಣಿಗೊಳಿಸಿರಿ. ಹಳ್ಳಿಗಳ ಅಭಿವೃದ್ಧಿ ನಿಮ್ಮ ಮೂಲ ಮಂತ್ರವಾಗಲಿ, ಹಳ್ಳಿಯಲ್ಲಿರಿ, ರಾತ್ರಿ ಮಕ್ಕಳಿಗೆ ಮನೆಪಾಠ ಹೇಳಿ ನೋಡಿ ನಿಮ್ಮ ಬಗ್ಗೆ ಹಳ್ಳಿಗರಿಗೆ ಯಾವ ಭಾವನೆ ಮೂಡುತ್ತದೋ ನೀವೇ ಕಾದು ನೋಡಿ. ನಿಮ್ಮ ಶ್ರಮ ಎಂದಿದ್ದರೂ ನಿಮಗೆ ಫಲ ನೀಡುತ್ತದೆ.
ಮೊಬೈಲ್ ಬಳಕೆ ಅಗತ್ಯಕ್ಕೆ ತಕ್ಕಂತೆ ಇರಲಿ, ಹೊಸ ಹೊಸ ಪುಸ್ತಕಗಳ ಅಧ್ಯಯನಗಳ ಮೂಲಕ ಪಠ್ಯಗಳ ಜೊತೆ ಮಕ್ಕಳಿಗೆ ಹೊಸದೇನನ್ನೋ ತಿಳಿಸುತ್ತಾ ಮಕ್ಕಳಿಗೆ ನೀವು ಬೆರಗು ಮೂಡಿಸುವ ಶಿಕ್ಷಕರಾಗಿ. ಬಿ.ಇಡಿ, ಡಿ ಇಡಿ, ಎಂಎ, ಎಂಇಡಿ ನಿಮ್ಮ ಶಿಕ್ಷಣದ ಅಂತ್ಯವಲ್ಲ. ನೀವು ಕಲಿತದ್ದು ಕೈಯಗಲ ಕಲಿಯುವುದು ಕಡಲಗಲ. ನಿಮ್ಮಲ್ಲಿನ ಜ್ಞಾನ ಮತ್ತು ತಾಳ್ಮೆ ನಿಮ್ಮನ್ನು ಉನ್ನತಿಯತ್ತ ಒಯ್ಯತ್ತದೆ.ಮಕ್ಕಳಿಗೆ ಕಲಿಸಿದಷ್ಟು ನಿಮ್ಮನ್ನು ಪ್ರೀತಿಸುತ್ತಾರೆ. ಪಠ್ಯ ಭೋಧನೆಯಷ್ಟೆ ಶಿಕ್ಷಣವಲ್ಲ ಹೊಸ ಪುಸ್ತಕ, ಆವಿಷ್ಕಾರ, ನೃತ್ಯ, ನಾಟಕ, ಸಂಗೀತ, ಸಾಂಸ್ಕೃತಿಕ ಕಾರ್ಯಕ್ರಮಗಳ ಜ್ಞಾನ ನೀಡುವುದರಿಂದ ಮಕ್ಕಳನ್ನು ಮುಖ್ಯವಾಹಿನಿಗೆ ತರುವ ಕೆಲಸ ಮಾಡಬಹುದಾಗಿದೆ.
 ಜಗತ್ತಿನಲ್ಲಿ ನಿಮಗೆ ಸಿಕ್ಕ ಅತ್ಯಮೂಲ್ಯ ಜವಾಬ್ದಾರಿಯಿದು. ನಿಮ್ಮ ಶಿಕ್ಷಕ ವೃತ್ತಿಯ ಯಶಸ್ವಿ ಪಾಲಕರ ಮತ್ತು ಮಕ್ಕಳ ಮನಸ್ಸನ್ನು ಗೆದ್ದಾಗ ಮಾತ್ರ ಸಿಗುತ್ತದೆ. ನೀವು ಗಳಿಸಿದ ಹಣದಿಂದಲ್ಲ, ಪುಢಾರಿಗಳ ಕಾಲು ಹಿಡಿದು ವಶೀಲಿ ಮಾಡಿ ಕಿತ್ತು ತಂದ ಪ್ರಶಸ್ತಿಯಿಂದಲ್ಲ..... ಅಲ್ಲವೇ....?
          ಪತ್ರೇಶ್ ಹಿರೇಮಠ್
(ವಿಜಯ ಕರ್ನಾಟಕದ ಲವ್ ಲವಿಕೆಯಲ್ಲಿ ಪ್ರಕಟವಾದ ಲೇಖನ)

2 ಕಾಮೆಂಟ್‌ಗಳು: