25 ಮೇ, 2011

ಅಗ್ನಿ ಪರೀಕ್ಷೆ ಗೆದ್ದ ಯಡಿಯೂರಪ್ಪ ಇನ್ನು ಮುಂದಾದರೂ ಕರ್ನಾಟಕದ ಮರೆಯಲಾಗದ ಮುಖ್ಯಮಂತ್ರಿಯಾಗುತ್ತಾರಾ....?


ಇತ್ತೀಚೆಗೆ ಕರ್ನಾಟಕದ ಜನತೆ ರಾಜಕಾರಿಣಿಗಳ ದೊಂಬರಾಟದಿಂದ ಬೇಸತ್ತಿರುವದನ್ನು ನೋಡಿದರೆ ಮುಂದೊಂದು ದಿನ ರಾಜಕಾರಿಣಿಗಳು ಎಂದರೆ ವಾಕರಿಕೆ ತರುವವರು ಎನ್ನಿಸಬಹುದೇನೋ..? ಯಡಿಯೂರಪ್ಪ ಹಸಿರು ಶಾಲು ಹೊದ್ದು ರೈತರ ಹೆಸರಲ್ಲಿ ಪ್ರಮಾಣ ವಚನ ಸ್ವೀಕರಿಸಿದಾಗಿನಿಂದ ಪ್ರಾಮಾಣಿಕವಾಗಿ ಮಾಡುತ್ತಾ  ಬಂದಿರುವ ಕೆಲಸವೆಂದರೆ ತಮ್ಮ ಮುಖ್ಯ ಮಂತ್ರಿ ಸ್ಥಾನ ಉಳಿಸಿಕೊಳ್ಳಲು ಹೋರಾಟ ನಡೆಸಿರುವುದೇ ಇರಬೇಕು. ಬಂಡಾಯ  ಎದ್ದಾಗಲೆಲ್ಲಾ ದೆಹಲಿ, ದೇವಸ್ಥಾನ , ಮಠ ಸುತ್ತುತ್ತಾ ಅಧಿಕಾರದಲ್ಲಿ ಉಳಿದಿರುವ ಯಡಿಯೂರಪ್ಪನವರಿಗೆ ಪಕ್ಷದೊಳಗಿನ ಹಿತಶತೃಗಳ ಕಾಟವೇ ಅತಿಯಾಗಿ ಕುರ್ಚಿ ರಕ್ಷಣೆಗೆ ಕೊಟ್ಟ ಸಮಯದಲ್ಲಿ   ಅರ್ಧ ಸಮಯ ಜನತೆಗೂ ನೀಡಿದ್ದರೂ  ಕರ್ನಾಟಕ ಕಂಡ ಯಶಸ್ವಿ ಆಡಳಿಗಾರರಾಗುತ್ತಿದ್ದರು. ಸುಮಾರು ನಲವತ್ತು ರ್ಷಗಳಿಂದ ಎರಡು   ಸ್ಥಾನದಿಂದ ಬಿಜೆಪಿ ನೂರಾ ಹತ್ತು ಸ್ತಾನಕ್ಕೇರಲು ಯಡಿಯೂರಪ್ಪನವರ ಶ್ರಮ ಬಹು ದೊಡ್ಡದು. ಅದೆಲ್ಲಕ್ಕಿಂತ  ಹೆಚ್ಚಾಗಿ ಕಳೆದ ಎರಡು ದಶಕಗಳಿಂದ ಕರ್ನಾಟಕದಲ್ಲಿ  ವೀರಶೈವ ನಾಯಕತ್ವದ ಕೊರತೆಯನ್ನು ಸಮರ್ಥವಾಗಿ ಬಳಸಿಕೊಂಡು ಮುಖ್ಯಮಂತ್ರಿ ಹುದ್ದೆ  ಪಡೆಯುವಲ್ಲಿ ಯಶಸ್ವಿಯಾದರು. 

40 ವರ್ಷಗಳ ಸುದೀರ್ಘ ಹೋರಾಟದಿಂದ ಹಂತ ಹಂತವಾಗಿ ಮೇಲೆ ಬಂದ ಯಡಿಯೂರಪ್ಪ  ಇಷ್ಟು ಬೇಗ ತಮ್ಮ ಕುಟುಂಬದವರನ್ನು ಆಡಳಿತದಲ್ಲಿ ಹಸ್ತಕ್ಷೇಪ ಮಾಡಲು ಬಿಡುತ್ತಾರೆ ಎಂದು ಯಾರು ನಿರೀಕ್ಷಿಸಿರಲಿಲ್ಲ. ಹಠವಾದಿ ಯಡಿಯೂರಪ್ಪ ನವರು ತಮ್ಮ ಮುಂಗೋಪದಿಂದ ಶಾಸಕರ ವಿಶ್ವಾಸ ಕಳೆದುಕೊಳ್ಳುತ್ತಾರೆ ಎಂಬ ಮಾತು ಕೂಡಾ ಚಾಲ್ತಿಯಲ್ಲಿದೆ. ಅನೇಕ ತಪ್ಪುಗಳನ್ನು ಮಾಡಿ ಮುಂದೆ ನಾನು ಈ ತರಹ ವರ್ತಿಸುವುದಿಲ್ಲ...... ಮುಂದೆ ಬೇರೆ ಯಡಿಯೂರಪ್ಪನನ್ನು ನೋಡ್ತೀರಿ... ದೇವಸ್ಥಾನದಲ್ಲಿ ಪ್ರಮಾಣ ಮಾಡಿ ಹೇಳ್ತೇನೆ ಮುಂದೆ ರಾಜ್ಯದ ಜನತೆಗಾಗಿ ದುಡಿಯುತ್ತೇನೆ... ರಾಜ್ಯದ ಅಭಿವೃಧ್ಧಿಗಾಗಿ ಸಂಕಲ್ಪ ಮಾಡುತ್ತೇನೆ ಎನ್ನುತ್ತಲೇ ಇರುವ ಯಡಿಯೂರಪ್ಪ ನವರನ್ನು ಕರ್ನಾಟಕದ ಮುಂದಿನ ದಿನಗಳಲ್ಲಿ ನೆನಪಿಡುವ ರೀತಿಯಲ್ಲಿ ಕೆಲಸ ಮಾಡುತ್ತಾರಾ..? ಎನ್ನುವುದು ಜನರ ಪ್ರಶ್ನೆ. 
           ಜನರ ವಿರೋಧಕ್ಕಿಂತಲೂ ಹೆಚ್ಚು ತಮ್ಮ ಪಕ್ಷದ ಶಾಸಕರ,ರಾಜ್ಯಪಾಲ ಭಾರಧ್ವಾಜ್ ಹಾಗೂ ವಿರೋಧ ಪಕ್ಷಗಳ ಟೀಕೆ ಎದುರಿಸಿದ ಕರ್ನಾಟಕದ ಪ್ರಥಮ ಮುಖ್ಯಮಂತ್ರಿ ಎಂದರೆ ಯಡಿಯೂರಪ್ಪನವರೇ ಇರಬಹುದು. ಇಷ್ಟೆಲ್ಲಾ ಅಗ್ನಿ ಪರೀಕ್ಷೆ ಎದುರಿಸಿ ಮುಖ್ಯಮಂತ್ರಿಯಾಗಿ ಉಳಿದಿರುವ ಯಡಿಯೂರಪ್ಪನವರು ರಾಜ್ಯ ಮರೆಯಲಾಗದಂತಹ ಮುಖ್ಯಮಂತ್ರಿಯಾಗಲು ಇನ್ನು ಕಾಲಾವಕಾಶವಿದೆ.
               ಇನ್ನು ಮುಂದಾದರೂ ಸಂಪುಟದಲ್ಲಿ ಶುಧ್ಧ ಹಸ್ತವುಳ್ಳ ಮಂತ್ರಿಗಳನ್ನು ಇಟ್ಟಕೊಂಡು, ಆಡಳಿತದಲ್ಲಿ ತಮ್ಮ ಕುಟುಂಬದವರ ಹಸ್ತಕ್ಷೇಪ ಇರದಂತೆ, ಭ್ರಷ್ಟಾಚಾರ ರಹಿತ ಆಡಳಿತ ನೀಡುವತ್ತ ಆಲೋಚಿಸಬೇಕಿದೆ. ನಾಡಿನ ಜೀವನಾಡಿಯಾದ ರೈತರಿಗೆ ಗುಣಮಟ್ಟದ ವಿದ್ಯುತ್ , ಬೀಜ ಗೊಬ್ಬರ, ಮೂಲಭೂತ ಸೌಲಭ್ಯ ರಾಜ್ಯದ ಮೂಲೆ ಮೂಲೆಗೂ ದೊರಕುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕಿದೆ. ಅಪರೇಶನ್ ಕಮಲ ನಿಲ್ಲಿಸಿ ಬಡ, ದೀನ ದಲಿತ ಜನರ ಎದೆಯಲ್ಲಿ ನೆಮ್ಮದಿಯ ಕಮಲ ಅರಳಿಸುವತ್ತ ಯಡಿಯೂರಪ್ಪನವರ ಆಡಳಿತ ಸಾಗಲಿ ಎಂದು ಕರ್ನಾಟಕ ಬಯಸುತ್ತದೆ ಅಲ್ಲವೇ...?  
                                                            ಪತ್ರೇಶ್ ಹಿರೇಮಠ್ 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ