20 ಮೇ, 2011

ರಾಜ್ಯಸಭಾ ಸದಸ್ಯ ಅನಿಲ್ ಲಾಡ್ ರ ಲೋಕಪ್ಪನಹೊಲ ತೋಟದ ಗುಲಾಬಿ ಹೂಗಳು ವಿದೇಶಕ್ಕೆ..


 ಪ್ರೇಮಿಗಳ ದಿನಾಚರಣೆಯ ದಿನ ಗುಲಾಬಿ ಹೂ ಕೊಟ್ಟು ಪ್ರೇಮ ನಿವೇದನೆ ಮಾಡಿಕೊಳ್ಳುವಾಗ ಶಿವಸೇನೆ, ಭಜರಂಗದಳದ ಕಾರ್ಯಕರ್ತರು ಎಲ್ಲಿ ಹಿಂಬಾಲಿಸಿ ತಾಳಿ ಕಟ್ಟಿಸಿ ಬಿಡುತ್ತಾರೋ ಎಂಬ ಹೊಸ ಭಯದ ನಡುವೆಯೂ ಗುಲಾಬಿ ಹೂಗಳಿಗೆ ಬೇಡಿಕೆ ಕಡಿಮೆಯಾಗಿಲ್ಲ. ಅದರಲ್ಲೂ ಕೆಂಪು ಗುಲಾಬಿಗೆ ಜಗತ್ತಿನೆಲ್ಲೆಡೆಯೂ  ಪ್ರೇಮಿಗಳ ದಿನಾಚರಣೆಯ ಫೆಬ್ರುವರಿ 14 ರಂದು ವಿಪರೀತ ಡಿಮ್ಯಾಂಡ್.


ಬಳ್ಳಾರಿ ಜಿಲ್ಲೆ ಹಗರಿಬೊಮ್ಮನಹಳ್ಳಿ ತಾಲೂಕಿನ ಲೋಕಪ್ಪನಹೊಲ ಗ್ರಾಮದ ಬಳಿ ಇರುವ ಕಾಂಗ್ರೆಸ್ ನ ರಾಜ್ಯ ಸಭಾ ಸದಸ್ಯ ಅನಿಲ್ ಲಾಡ್ ಒಡೆತನದ ವಿ.ಎಸ್.ಎಲ್.ಅಗ್ರೊ ಟೆಕ್ ಗುಲಾಬಿ ತೋಟದಲ್ಲಿ ಪ್ರೇಮಿಗಳ ದಿನಾಚರಣೆಗೆಂದೇ ವಿಶೇಷವಾಗಿ ಕೆಂಗುಲಾಬಿಯನ್ನು ಬೆಳೆದು ರಫ್ತು ಮಾಡಲಾಗುತ್ತಿದೆ.     ಬಳ್ಳಾರಿಯ ಮತ್ತೊಂದು ಮುಖವೇ ಬಿಸಿಲು. ಇಂತಹ ಬಿರು ಬಿಸಿಲು ನಾಡಿನ ಕೆಂಗುಲಾಬಿ ಪ್ರೀತಿಸುವ ಹೃದಯಗಳ ನವಿರಾದ ಮಧುರ ಭಾವನೆಗಳನ್ನು ಹಂಚಿಕೊಳ್ಳಲು ಸಹಕಾರಿಯಾಗುತ್ತಿದೆ. ಲೋಕಪ್ಪನ ಹೊಲದ ಬಳಿ 26 ಎಕರೆ ಪ್ರದೇಶದಲ್ಲಿ ಗುಲಾಬಿ ಬೆಳೆಯುತ್ತಿದ್ದು 800ಕ್ಕೂ ಹೆಚ್ಚು ಮಹಿಳೆಯರು ಹಾಗೂ ಪುರುಷರು ಇಲ್ಲಿ ಕೆಲಸ ಮಾಡುತ್ತಿದ್ದಾರೆ. ಅತ್ಯಾಧುನಿಕ ತಂತ್ರಜ್ಷಾನದಿಂದ ನಿರ್ಮಿಸಲಾಗಿರುವ 26 ಗ್ರೀನ್ ಹೌಸ್ ಗಳಲ್ಲಿ ವಿಶಿಷ್ಟವಾಗಿ ಗುಲಾಬಿಯನ್ನು ಬೆಳೆಯಲಾಗುತ್ತಿದೆ. ಹಬ್ಬ ಹರಿದಿನ, ದಿನಾಚರಣೆಗಳ ಸಂದರ್ಭಕ್ಕೆ ಒದಗುವಂತೆ ಬೆಳೆ ಪದ್ಧತಿ ಅನುಸರಿಸಲಾಗುತ್ತಿದೆ.

ವ್ಯಾಲೈಂಟನ ಡೇ ಗೆ ದೇಶದ ವಿವಿಧ ನಗರಗಳಿಂದ ಹಾಗೂ ವಿವಿಧ ದೇಶಗಳಿಂದ ಮೊದಲೇ ಬೇಡಿಕೆ ಸಲ್ಲಿಸಿರುತ್ತಾರೆ. ಈ ಗುಲಾಬಿ ತೋಟದಲ್ಲಿ ಬಹು ವೈವಿಧ್ಯ ಬಣ್ಣಗಳ ಪಿಂಕ್, ಬೈಕಲರ್, ಆರೇಂಜ್, ಬಿಳಿ, ಕೆಂಪು, ಹಳದಿ ಹೂಗಳನ್ನು ಸೇರಿದಂತೆ ಹದಿನೈದಕ್ಕೂ ಹೆಚ್ಚು ಬಣ್ಣದ ಹೂಗಳನ್ನು ಕಾಣಬಹುದಾಗಿದೆ."ಪ್ರೇಮಿಗಳ ದಿನಾಚರಣೆಗೆ ಕೆಂಗುಲಾಬಿಯೇ ಶ್ರೇಷ್ಠ" ಎಂದು ಯುವಜನತೆ ಆಸಕ್ತಿ ಪಡುತ್ತಿದ್ದು ಈ ಬಾರಿ 8 ಲಕ್ಷ ಹೂಗಳನ್ನು ವಿದೇಶಗಳಾದ ಆಸ್ಠ್ರೇಲಿಯಾ, ಜಪಾನ್, ಹಾಲೆಂಡ್, ನ್ಯೂಜಿಲೆಂಡ್, ಯುನೈಟೆಡ್ ಕಿಂಗಡಮ್ ಸೇರಿದಂತೆ ಭಾರತದ ಬೆಂಗಳೂರು, ದೆಹಲಿ ಮುಂಬೈ, ಹೈದರಾಬಾದ್, ಗೋವಾ, ವಿಜಯವಾಡ ನಗರಗಳಿಗೆ ರಫ್ತು ಮಾಡಲಾಗಿದೆ ಎನ್ನುತ್ತಾರೆ ವಿ.ಎಸ್. ಎಲ್. ಅಗ್ರೊ ಟೆಕ್ ನ ಉಸ್ತುವಾರಿ ಹೊತ್ತಿರುವ ವಿ.ಶ್ರೀನಿವಾಸ.


ಅತ್ತ್ಯುತ್ತಮ ಗುಣಮಟ್ಟದ ಉತ್ಪಾದನೆಗೆ ದೆಹಲಿಯಲ್ಲಿ ನಡೆದ ಇಂಟರನ್ಯಾಷನಲ್ ಫ್ಲೋರಾ ಎಕ್ಸ್ ಫೋ ನಲ್ಲಿ ಕೃಷಿ ಪಿತಾಮಹ ಸ್ವಾಮಿನಾಥನ್ ಅವರಿಂದ ಅಗ್ರೊಟೆಕ್ ಪ್ರಶಸ್ತಿ ಪಡೆದುಕೊಂಡಿದೆ. ಬಿರು ಬಿಸಿಲಿನ ನಡುವೆ ಬೆಳೆದ ಈ ಗುಲಾಬಿ ಪ್ರೇಮಿಗಳ ಎದೆಯಲ್ಲಿ ಪ್ರೀತಿಯ ಕಂಪು ಮೂಡಿಸಲಿ. ಪ್ರೀತಿಸುವವರ ಹೃದಯದಲ್ಲಿ ಮಾನವೀಯತೆಯ ಪರಿಮಳ ಹರಡಿಸಲಿ  ಎಂದು ಆಶಿಸೋಣವೇ......? 
ಇದರ ಮಾಹಿತಿ ಬಗ್ಗೆ ತಿಳಿದುಕೊಳ್ಳಲು ವಿ. ಶ್ರೀನಿವಾಸ್ - 9945679912- 08394- 244777

ಪತ್ರೇಶ್ ಹಿರೇಮಠ್  ಹಗರಿಬೊಮ್ಮನಹಳ್ಳಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ